ಪೊಲೀಸರಿಗೇ ಕೈಕೊಟ್ಟ ಮೋಹನ

ಬೆಂಗಳೂರು: ಸಚಿವ ಪುಟ್ಟರಂಗಶೆಟ್ಟಿ ಕಚೇರಿ ನೌಕರ ಮೋಹನ್ ಬಳಿ ವಿಧಾನಸೌಧ ಪಶ್ಚಿಮ ದ್ವಾರದಲ್ಲಿ ಪತ್ತೆಯಾಗಿದ್ದ 25.76 ಲಕ್ಷ ರೂ. ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರೂ ಆರೋಪಿ ವಿಚಾರಣೆಗೆ ಬಂದಿಲ್ಲ.

ಶುಕ್ರವಾರ (ಜ.4)ರಂದು ಮೋಹನ್ 25.76 ಲಕ್ಷ ರೂ.ವನ್ನು ಬ್ಯಾಗ್​ನಲ್ಲಿ ತುಂಬಿ ಬೈಕ್​ನಲ್ಲಿ ಹೋಗುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದ. ಪೊಲೀಸರು ನೋಟಿಸ್ ನೀಡಿ ಶನಿವಾರ ವಿಚಾರಣೆ ನಡೆಸಿದ್ದರೂ, ದುಡ್ಡು ಯಾರಿಗೆ ಸೇರಿರುವುದು ಎಂಬುದರ ಬಗ್ಗೆ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಭಾನುವಾರ ಮಧ್ಯಾಹ್ನ 12 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ಮೋಹನ್ ವಿಚಾರಣೆಗೆ ಹಾಜರಾಗಿರಲಿಲ್ಲ. ಪೊಲೀಸರು ಮತ್ತೊಮ್ಮೆ ಆರೋಪಿಗೆ ನೋಟಿಸ್ ನೀಡಲು ಮುಂದಾಗಿದ್ದಾರೆ.

ಪ್ರಕರಣದಲ್ಲಿ ರಾಜಕಾರಣಿಗಳು ಪೊಲೀಸರ ಮೇಲೆ ಒತ್ತಡ ಹೇರುವ ಸಾಧ್ಯತೆಗಳಿವೆ. ಈ ನಡುವೆ ಆರೋಪಿ ಮೋಹನ್ ಜತೆ ಒಡನಾಟ ಹೊಂದಿದ್ದ ಸಚಿವ ವೆಂಕಟರಮಣಪ್ಪ ಆಪ್ತ ಸಹಾಯಕ ಕೃಷ್ಣಮೂರ್ತಿ ಅವರಿಂದ ಪೊಲೀಸರು ಕೆಲ ಮಹತ್ವದ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಈ ಪ್ರಕರಣ ಸೋಮವಾರ ಎಸಿಬಿಗೆ ಹಸ್ತಾಂತರವಾಗಲಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಬರ ನಡುವೆ ತೆರಿಗೆ ಭಾರ

ಹುಬ್ಬಳ್ಳಿ: ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, 156 ತಾಲೂಕುಗಳು ಬರಗಾಲಕ್ಕೆ ತುತ್ತಾಗಿದ್ದರೆ, ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡುವ ಮೂಲಕ ಜನರ ಮೇಲೆ ತೆರಿಗೆ ಭಾರವನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹರಿಹಾಯ್ದಿದ್ದಾರೆ.

ಬರಗಾಲದಿಂದ ತುತ್ತಾಗಿರುವ ಜನರು ಉದ್ಯೋಗವಿಲ್ಲದೆ ಗುಳೆ ಹೋಗುವ ಸ್ಥಿತಿ ನಿರ್ವಣವಾಗಿದೆ. ಜಾನುವಾರು ಮಾರಾಟ ಮಾಡುತ್ತಿದ್ದಾರೆ. ಇವರ ರಕ್ಷಣೆಗೆ ಬರುವ ಬದಲು ತೆರಿಗೆ ಹೆಚ್ಚಳ ಮಾಡಿದ್ದು, ಕೇಳಿದರೆ ಸಾಲಮನ್ನಾ ನೆಪ ಹೇಳುತ್ತಾರೆ. ಸಚಿವರೊಬ್ಬರ ಆಪ್ತನ ಬಳಿ ಲಕ್ಷಾಂತರ ರೂ. ಹಣ ಸಿಕ್ಕಿದ್ದೇ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪ್ರತಿಭಟನೆ: ಆಪ್ತನ ಬಳಿ ಹಣ ಸಿಕ್ಕಿರುವ ಸಂಬಂಧ ಸಚಿವ ಪುಟ್ಟರಂಗ ಶೆಟ್ಟಿ ರಾಜೀನಾಮೆಗೆ ಆಗ್ರಹ ಮತ್ತು ತೈಲ ಬೆಲೆಯ ಸುಂಕ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ನೀತಿ ಖಂಡಿಸಿ ಹುಬ್ಬಳ್ಳಿ, ಗದಗ, ಹಾವೇರಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಎಸಿಬಿ ರಾಜ್ಯ ಸರ್ಕಾರದ ಸುಪರ್ದಿಯಲ್ಲಿ ಕೆಲಸ ಮಾಡುವುದರಿಂದ ಹಣ ಜಪ್ತಿ ಪ್ರಕರಣವನ್ನು ಸಿಸಿಬಿ ತನಿಖೆಗೆ ಒಳಪಡಿಸಬೇಕು. ಕೂಡಲೇ ಅವರನ್ನು ಸಂಪುಟದಿಂದ ಕೈಬಿಡಬೇಕು.

| ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿ

ಪುಟಗೋಸಿ ರಾಜಕೀಯ

ಬೆಂಗಳೂರು: ರಾಜ್ಯದಲ್ಲಿ ‘ಪುಟಗೋಸಿ ರಾಜಕೀಯ’ ಪ್ರಾರಂಭವಾಗಿದೆ! ವಿಧಾನಸೌಧದ ಸಚಿವ ಪುಟ್ಟರಂಗಶೆಟ್ಟಿ ಕಚೇರಿಯ ನೌಕರ ಮೋಹನ್ ಬಳಿ 25 ಲಕ್ಷ ರೂ. ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿದ್ದ ‘ಪುಟಗೋಸಿ’ ಹೇಳಿಕೆ ಈಗ ಪ್ರತಿಪಕ್ಷಕ್ಕೆ ಟೀಕಾಸ್ತ್ರವಾಗಿದೆ.

ರಫೆಲ್ ಹಗರಣದ 30 ಸಾವಿರ ಕೋಟಿ ರೂ. ಹಗರಣವನ್ನೇ ಕೇಂದ್ರ ಸರ್ಕಾರ ತನಿಖೆಗೆ ಒಪ್ಪಿಸಿಲ್ಲ. ಅದರ ಮುಂದೆ ಪುಟಗೋಸಿ 25 ಲಕ್ಷ ರೂ. ಯಾವ ಲೆಕ್ಕ ಎಂದು ದಿನೇಶ್ ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ್ದರು.

ಈ ಬಗ್ಗೆ ಬಿಜೆಪಿಯಿಂದ ತೀವ್ರ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ದಿನೇಶ್ ಸ್ಪಷ್ಟೀಕರಣ ಕೊಟ್ಟಿದ್ದು, ‘ರಫೆಲ್ ಹಗರಣದ 30 ಸಾವಿರ ಕೋಟಿ ರೂ. ಬಗ್ಗೆ ಮಾತಾಡುವಾಗ ಮಾಧ್ಯಮದವರು 26 ಲಕ್ಷ ರೂ.ಬಗ್ಗೆ ಕೇಳಿದ್ದರು. ಹಾಗಾಗಿ ನಾನು ಪುಟಗೋಸಿ ಎಂಬ ಪದ ಉಪಯೋಗಿಸಿದೆ. ಆ ಪದ ಬಳಸಬಾರದಿತ್ತು. ಯಾರೇ ತಪ್ಪು ಮಾಡಿದರು ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿ. ನಮ್ಮವರ ಪಾತ್ರ ಇದ್ದರೆ 10 ರೂ. ಅವ್ಯವಹಾರ ಆಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಸಚಿವ ಪುಟ್ಟರಂಗ ಶೆಟ್ಟಿ ಕಚೇರಿ ಸಿಬ್ಬಂದಿ ಹಣ ಕೊಂಡು ಹೋದ ತಕ್ಷಣ ಆರೋಪ ಮಾಡುವುದು ಸರಿಯಲ್ಲ. ಅವರೇನೂ ಚೆಕ್​ನಲ್ಲಿ ಹಣ ಪಡೆದಿಲ್ಲವಲ್ಲ.

| ಡಿ.ಕೆ. ಶಿವಕುಮಾರ್ ಸಚಿವ

ದಿನೇಶ್ ಹೇಳಿಕೆಗೆ ಖಂಡನೆ

ಬೆಂಗಳೂರು: ಭ್ರಷ್ಟಾಚಾರ ಹಾಗೂ ಭ್ರಷ್ಟಾಚಾರಿಗಳನ್ನು ರಕ್ಷಣೆ ಮಾಡುವ ಇತಿಹಾಸವನ್ನೇ ಹೊಂದಿರುವ ಕಾಂಗ್ರೆಸ್​ನ ರಾಜ್ಯ ಘಟಕದ ಅಧ್ಯಕ್ಷರು 25.76 ಲಕ್ಷ ರೂ. ಕಳ್ಳತನವನ್ನು ಪುಟಗೋಸಿ ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಟೀಕಿಸಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಯುವ ಮೋರ್ಚಾ ವತಿಯಿಂದ ಆಯೋಜಿಸಿದ್ದ ‘ವಿಜಯ ಲಕ್ಷ್ಯ-2019’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವಿಧಾನಸೌಧದ ಬಳಿ ಸಚಿವ ಪುಟ್ಟರಂಗಶೆಟ್ಟಿ ಅವರ ಸಿಬ್ಬಂದಿಯಿಂದ 25.76 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ನಿಮ್ಮ ಪ್ರತಿಕ್ರಿಯೆಯೇನು ಎಂದು ಕೇಳಿದರೆ, ಅಷ್ಟು ಮೊತ್ತ ಪುಟಗೋಸಿ ಎಂದು ಗೇಲಿ ಮಾಡಿದ್ದಾರೆ. ಇವರ ಮೇಲೆ ಕಾಂಗ್ರೆಸ್ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ಮೊದಲ ವೋಟು ಮೋದಿಗೆ ಅಭಿಯಾನ: ಲೋಕಸಭಾ ಚುನಾವಣೆಯಲ್ಲಿ ಯುವಕರನ್ನು ಸೆಳೆಯಲು ಅನೇಕ ಯೋಜನೆಗಳನ್ನು ಕಾರ್ಯಾಗಾರದಲ್ಲಿ ವಿವರಿಸಲಾಗಿದೆ. ಮೊದಲ ಬಾರಿಗೆ ಮತ ಹಾಕುವವರನ್ನು ಸಂರ್ಪಸಿ, ಮೊದಲ ವೋಟು ಮೋದಿಗೆ ಎಂಬ ಅಭಿಯಾನ ರೂಪಿಸಿ, ಜಿಲ್ಲಾ ಮಟ್ಟದಲ್ಲಿ ತಂಡಗಳ ರಚಿಸುವ ಕುರಿತು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.