ಪುಟ್ಟಗಂಟು ಹಗರಣದಲ್ಲಿ ಸಚಿವರಿಗೆ ಎಸಿಬಿ ಡ್ರಿಲ್!

| ಶಿವಕುಮಾರ ಮೆಣಸಿನಕಾಯಿ ಬೆಂಗಳೂರು

ವಿಧಾನಸೌಧದ ಆವರಣದಲ್ಲೇ 25 ಲಕ್ಷ ರೂ. ಜತೆ ಸಿಕ್ಕಿಬಿದ್ದಿದ್ದ ಮಧ್ಯವರ್ತಿ ಮೋಹನ್ ಕುಮಾರ್ ಪ್ರಕರಣ ಸಚಿವ ಪುಟ್ಟರಂಗಶೆಟ್ಟಿ ಹುದ್ದೆಗೇ ಕುತ್ತು ತರುವಂತಿದ್ದು, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಚಿವರನ್ನು ಆರು ತಾಸು ವಿಚಾರಣೆಗೊಳಪಡಿಸಿದೆ.

ಪುಟ್ಟರಂಗಶೆಟ್ಟಿ ಕಚೇರಿ ನೌಕರ ಎಸ್.ಜೆ.ಮೋಹನ್ ಜ. 4ರಂದು ಗುತ್ತಿಗೆದಾರರಾದ ಅನಂತು ಅವರಿಂದ 3.60 ಲಕ್ಷ ರೂ., ನಂದು ಎಂಬುವರಿಂದ 15.90 ಲಕ್ಷ ರೂ., ಶ್ರೀನಿಧಿ ಅವರಿಂದ 2 ಲಕ್ಷ ರೂ., ಕೃಷ್ಣಮೂರ್ತಿ ಅವರಿಂದ 4.26 ಲಕ್ಷ ರೂ.ಗಳನ್ನು ಸಂಗ್ರಹಿಸಿ, ಅದನ್ನು ಹೊಸ ವರ್ಷದ ಶುಭಾಶಯ ಕೋರುವ ಗ್ರೀಟಿಂಗ್ ಕಾರ್ಡ್​ಗಳಲ್ಲಿಟ್ಟು, ಗ್ರೀಟಿಂಗ್​ಗಳ ಮೇಲೆ ಸಚಿವ ಪುಟ್ಟರಂಗಶೆಟ್ಟಿ ಹೆಸರು ಬರೆದು ಬ್ಯಾಗ್​ನಲ್ಲಿ ತುಂಬಿಟ್ಟಿದ್ದ. ಜನವರಿ 5ರಂದು 25.76 ಲಕ್ಷ ರೂ. ಸಹಿತ ವಿಧಾನಸೌಧ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ನಂತರ ಪ್ರಕರಣ ಎಸಿಬಿಗೆ ವರ್ಗಾವಣೆಗೊಂಡಿತ್ತು. ತನಿಖೆ ವೇಳೆ ಮೋಹನ್ ಕುಮಾರ್, ಪುಟ್ಟರಂಗಶೆಟ್ಟಿ ಹೆಸರು ಬಹಿರಂಗಪಡಿಸಿದ್ದ. ಸಚಿವರಿಗೆ ಆಮಿಷ ಒಡ್ಡುವ ಪ್ರಯತ್ನ ಮಾಡಿದ ನಾಲ್ವರು ಗುತ್ತಿಗೆದಾರರು ಹಾಗೂ ಮಧ್ಯವರ್ತಿಯಾಗಿ ಕೆಲಸ ಮಾಡಿದ ಮೋಹನ್​ಕುಮಾರ್ ವಿರುದ್ಧ ಭ್ರಷ್ಟಾಚಾರ ನಿಮೂರ್ಲನಾ ಕಾಯ್ದೆಯನ್ವಯ ಪ್ರಕರಣ ದಾಖಲಾಗಿತ್ತು.

ಎಸಿಬಿ ಎದುರು ಸಚಿವರು ಹೇಳಿದ್ದೇನು?: ಮೋಹನ್​ಕುಮಾರ್ ಹೇಳಿಕೆ ಆಧರಿಸಿ ಪುಟ್ಟರಂಗಶೆಟ್ಟಿ ಅವರನ್ನು ಅಧಿಕಾರಿಗಳು ಸುದೀರ್ಘ ವಿಚಾರಣೆ ನಡೆಸಿದ್ದಾರೆ ಎಂದು ಎಸಿಬಿ ಉನ್ನತ ಮೂಲಗಳು ವಿಜಯವಾಣಿಗೆ ಖಚಿತಪಡಿಸಿವೆ. ‘ವಿಧಾನಸೌಧದಲ್ಲಿ ಕೆಲವರು ಹಣ ವಸೂಲಿ ಕೆಲಸ ಮಾಡುತ್ತಾರೆ ಎಂಬ ವಿಚಾರ ಮೋಹನ್ ಕುಮಾರ್ ಬಂಧನದ ಬಳಿಕವೇ ತಮಗೆ ತಿಳಿಯಿತು. ಈ ರೀತಿಯ 60-70 ಮಂದಿ ಹಣ ವಸೂಲಿ ವ್ಯವಹಾರದಲ್ಲಿ ತೊಡಗಿದ್ದಾರೆ. ಆ ಪೈಕಿ ಮೋಹನ್ ಕುಮಾರ್ ಕೂಡ ಒಬ್ಬ ಎಂಬುದು ತಮಗೆ ಮೊದಲೇ ಗೊತ್ತಿರಲಿಲ್ಲ. ಆದಾಗ್ಯೂ ಆತನ ನಡವಳಿಕೆ ಮೇಲೆ ಸಂಶಯ ಉಂಟಾಗಿ ಆತನನ್ನು ಕೆಲಸದಿಂದ ತೆಗೆದು ಹಾಕಿದ್ದೆ’ ಎಂದು ಸಚಿವರು ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಆದರೆ, ಆರೋಪಿ ಮೋಹನ್ ಕುಮಾರ್ ‘ಬಂಧನ ಆಗುವ ವೇಳೆಯೂ ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ ಸಿಬ್ಬಂದಿ ಆಗಿದ್ದೆ. ಅವರಿಗೆ ಹಣ ಕೊಡುವ ಸಲುವಾಗಿಯೇ ಗುತ್ತಿಗೆದಾರರಿಂದ ಸಂಗ್ರಹಿಸಿದ್ದೆ’ ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ದೃಢಪಡಿಸಿವೆ.

ವಿಧಾನಸೌಧದ ಬಳಿ ಹಣ ಸಿಕ್ಕಿರುವ ಪ್ರಕರಣಕ್ಕೆ ಸಂಬಂಧಿಸಿ ಎಸಿಬಿ ಅಧಿಕಾರಿಗಳು ನನ್ನ ಹೇಳಿಕೆ ಪಡೆದಿದ್ದು ನಿಜ. ಈಗ ಸುಮಾರು ದಿನಗಳ ಹಿಂದೆ ಎಸಿಬಿ ಕಚೇರಿಗೆ ತೆರಳಿದ್ದೆ. ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ ಎಂದು ಪೊಲೀಸರಿಗೆ ಮನವರಿಕೆ ಮಾಡಿದ್ದೇನೆ. ಪ್ರಕರಣದಲ್ಲಿ ನಾನು ಶಾಮೀಲಾಗಿಲ್ಲ.

| ಸಿ.ಪುಟ್ಟರಂಗಶೆಟ್ಟಿ ಸಚಿವ

ಸಚಿವ ಸ್ಥಾನಕ್ಕೆ ಕುತ್ತು

ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಸಚಿವ ಪುಟ್ಟರಂಗಶೆಟ್ಟಿ ವಿರುದ್ಧದ ಆರೋಪ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಸಚಿವ ಸ್ಥಾನಕ್ಕೆ ತೊಡಕಾಗಲಿದೆ ಎನ್ನಲಾಗುತ್ತಿದೆ. ಎಸಿಬಿ ಪೊಲೀಸರು ನ್ಯಾಯಾಲಯಕ್ಕೆ ಶೀಘ್ರದಲ್ಲೇ ದೋಷಾರೋಪ ಪಟ್ಟಿ ಸಲ್ಲಿಸಲಿದ್ದು, ಪ್ರಕರಣದಲ್ಲಿ ಪ್ರಭಾವಿಗಳ ಹೆಸರು ಬಹಿರಂಗವಾಗಿರುವುದರಿಂದ ಪ್ರಕರಣ ರಾಜಕೀಯ ಮಹತ್ವ ಪಡೆದುಕೊಂಡಿದೆ.