ಉಪ ಕಸುಬುಗಳಿಂದ ಕೃಷಿ ಲಾಭದಾಯಕ

ಚಿಕ್ಕಮಗಳೂರು: ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸಲು ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆ ನೀಡಲು ಲಭ್ಯವಿರುವ ಸಾಗುವಳಿ ಜಮೀನಿನಲ್ಲಿ ಗರಿಷ್ಠ ಕೃಷಿ ಉತ್ಪಾದನೆ ಸಾಧಿಸುವುದು ಅತ್ಯವಶ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಜಿಪಂ ಕಚೇರಿ ಎದುರು ಸೋಮವಾರ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನ 2019-20ರ ಕೃಷಿ ಮಾಹಿತಿ ರಥಯಾತ್ರೆ ಹಾಗೂ ಸ್ವಚ್ಛಮೇವ ಜಯತೇ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಬೆಳೆ ವೈವಿಧ್ಯದಿಂದ ವ್ಯವಸಾಯ ವೆಚ್ಚದಲ್ಲಿ ಕಡಿತ, ಕೃಷಿಯೊಂದಿಗೆ ಪೂರಕ ಉಪ ಕಸುಬುಗಳಾದ ಪಶು ಸಂಗೋಪನೆ, ರೇಷ್ಮೆ ಕೃಷಿ, ಮೀನುಗಾರಿಕೆ ಮುಂತಾದ ಚಟುವಟಿಕೆಗಳನ್ನು ರೈತರು ಅಳವಡಿಸಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.

ಕೃಷಿ ಇಲಾಖೆ ಪ್ರಸ್ತುತ ಪರಿಸ್ಥಿತಿಯನ್ನು ಮನಗಂಡು ಉತ್ಪಾದಕತೆ ಹೆಚ್ಚಿಸಲು ಅವಶ್ಯವಿರುವ ತಂತ್ರಜ್ಞಾನ ತಲುಪಿಸಲು ಏಕಗವಾಕ್ಷಿ ವಿಸ್ತರಣಾ ಪದ್ಧತಿ ಅನುಸರಿಸುತ್ತಿದೆ. ಹಾಗೆಯೇ ಸಮಗ್ರ ಕೃಷಿ ಮಾಹಿತಿಯನ್ನು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅಭಿಯಾನದ ಮೂಲಕ ತಲುಪಿಸುವ ಪ್ರಯತ್ನ ನಡೆಸಿದೆ ಎಂದರು.

ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಹೋಬಳಿ ಮಟ್ಟದಲ್ಲಿ ಮೂರು ದಿನ ಹಮ್ಮಿಕೊಳ್ಳಲಾಗುವುದು. ಮೊದಲೆರಡು ದಿನ ಪ್ರತಿ ಹೋಬಳಿಗಳ ಎಲ್ಲ ಗ್ರಾಪಂ ಒಳಗೊಂಡಂತೆ ಕೃಷಿ ಮಾಹಿತಿ ರಥದ ಮೂಲಕ ಕರಪತ್ರ ಹಂಚಲಾಗುವುದು. ಧ್ವನಿ ವರ್ಧಕದ ಮೂಲಕ ವಿವಿಧ ಕೃಷಿ ಸಂಬಂಧಿ ಯೋಜನೆಗಳು ಹಾಗೂ ತಾಂತ್ರಿಕತೆಗಳ ಬಗ್ಗೆ ವ್ಯಾಪಕ ಪ್ರಚಾರ ನಡೆಸಿ ರೈತರಲ್ಲಿ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಮೂರನೇ ದಿನ ಹೋಬಳಿ ಕೇಂದ್ರದಲ್ಲಿ ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗುವುದು. ಕೃಷಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡ ತಂಡ ರೈತರೊಂದಿಗೆ ಸಂವಾದ ನಡೆಸಲಿದೆ. ರೈತರ ಸ್ಥಳೀಯ ಅವಶ್ಯಕತೆ ಮತ್ತು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಅವುಗಳ ನಿವಾರಣೆಗೆ ಪರಿಹಾರ ಸೂಚಿಸಲಾಗುವುದು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಆಯಾ ಇಲಾಖೆಯ ಅಧಿಕಾರಿಗಳಿಂದ ಪರಿಹಾರ ಸೂಚಿಸಲಾಗುವುದು ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *