ಉಪ್ಪಾರ ಸಮುದಾಯ ಧ್ರುವರಾನಾಯಣ್ ಬೆಂಬಲಿಸಿ

ನಂಜನಗೂಡು: ಉಪ್ಪಾರ ಸಮುದಾಯಕ್ಕೆ ರಾಜಕೀಯ ಹಾಗೂ ಸಾಮಾಜಿಕ ಸ್ಥಾನಮಾನ ಸಿಗಬೇಕಾದರೆ ಕಾಂಗ್ರೆಸ್ ಪಕ್ಷ ಬೆಂಬಲಿಸಿದರೆ ಮಾತ್ರ ಸಾಧ್ಯ ಎಂದು ಹಿಂದುಳಿದ ವರ್ಗಗಳ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಸಾಹುಕಾರ್ ಲಿಂಗಣ್ಣನವರ ಛತ್ರದಲ್ಲಿ ಆಯೋಜಿಸಿದ್ದ ಉಪ್ಪಾರ ಸಮುದಾಯದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

ಉಪ್ಪಾರ ಸಮಾಜಕ್ಕೆ ರಾಜಕೀಯವಾಗಿ ನೆಲೆ ನಿಲ್ಲಲು ಅವಕಾಶ ಕಲ್ಪಿಸಿಕೊಟ್ಟ ಏಕೈಕ ಪಕ್ಷ ಕಾಂಗ್ರೆಸ್. ಈ ಸಮುದಾಯದಿಂದ ಬಂದ ನನ್ನನ್ನು ಮೂರು ಬಾರಿ ಶಾಸಕನನ್ನಾಗಿ ಮಾಡಿ ಪ್ರಸ್ತುತ ಸಚಿವನಾಗಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದೆ. ಇದರಿಂದ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ಕಲ್ಪಿಸಿಕೊಟ್ಟಿರುವುದರಿಂದ ಹಾಗೂ ಸರ್ವತೋಮುಖ ಏಳ್ಗೆಗೂ ಸಹಕರಿಸಿರುವುದರಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಾಂಗ್ರೆಸ್ ಬೆಂಬಲಿಸುವಂತೆ ಕರೆ ನೀಡಿದರು.

ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ, ಕಾಂಗ್ರೆಸ್ ಪಕ್ಷ ಉಪ್ಪಾರ ಸಮಾಜದ ಅಭಿವೃದ್ಧಿಗೆ ನೆರವಾಗಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಉಪ್ಪಾರ ಸಮುದಾಯದ ಜನರ ಪ್ರಮುಖ ಬೇಡಿಕೆಗಳಾದ ಭಗೀರಥ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸುವುದು, ಉಪ್ಪಾರರ ಅಭಿವೃದ್ಧಿಗೆ ನಿಗಮ ಸ್ಥಾಪಿಸುವುದು, ಮಲೈ ಮಹದೇಶ್ವರಸ್ವಾಮಿ ಬೆಟ್ಟದಲ್ಲಿ ಎಣ್ಣೆ ಮಜ್ಜನ ಸೇವೆಗೆ ಅವಕಾಶ ಕಲ್ಪಿಸಲು ನೆರವಾಗಿದ್ದಾರೆ. ಈ ಹಿಂದಿನ ಹಲವು ಚುನಾವಣೆಗಳಲ್ಲಿ ನನಗೆ ಉಪ್ಪಾರರು ಹೆಚ್ಚಿನ ಮತ ನೀಡುವ ಮೂಲಕ ಜಯ ಸಾಧಿಸಲು ನೆರವಾಗಿದ್ದಾರೆ. ಈ ಚುನಾವಣೆಯಲ್ಲಿಯೂ ಸಹ ಹೆಚ್ಚಿನ ಮತ ನೀಡುವ ಮೂಲಕ ಮತ್ತೊಮ್ಮೆ ಲೋಕಸಭೆ ಪ್ರವೇಶಕ್ಕೆ ನೆರವಾಗುವಂತೆ ಕೋರಿದರು.

ಸಭೆಯಲ್ಲಿ ಜಿ.ಪಂ. ಸದಸ್ಯೆ ಎಂ.ಲತಾಸಿದ್ದಶೆಟ್ಟಿ, ತಾ.ಪಂ. ಉಪಾದ್ಯಕ್ಷ ಹೆಜ್ಜಿಗೆ ಗೋವಿಂದರಾಜನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮೂಗಶೆಟ್ಟಿ, ಮುಖಂಡರಾದ ಕರಳಪುರ ನಾಗರಾಜು, ಕನಕನಗರ ಮಹದೇವು, ಕೂಡ್ಲಾಪುರ ರಾಜು, ಹೆಮ್ಮರಗಾಲ ಮರಿಶೆಟ್ಟಿ, ಲಿಂಗಪ್ಪ, ಸತೀಶ್, ಉಪ್ಪಾರ ನೌಕರರ ಸಂಘದ ನಾಗಶೆಟ್ಟಿ, ಹಳ್ಳದಕೇರಿ ಗೋವಿಂದರಾಜು, ಶ್ರೀನಿವಾಸ್, ಚನ್ನಬಸವಶೆಟ್ಟರು, ಕೆಪಿಸಿಸಿ ಸದಸ್ಯ ಅಕ್ಬರ್ ಅಲಿ ಉಪಸ್ಥಿತರಿದ್ದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಆರ್.ಧ್ರುವನಾರಾಯಣ್ ಮತದಾರರ ಕಷ್ಟ ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುವ ಸಂಸದರಾಗಿದ್ದು, ಅವರ ಹ್ಯಾಟ್ರಿಕ್ ಗೆಲುವಿಗೆ ಉಪ್ಪಾರ ಸಮುದಾಯದ ಎಲ್ಲರೂ ಕೈಜೋಡಿಸಿ.
| ಸಿ.ಪುಟ್ಟರಂಗಶೆಟ್ಟಿ