ಮತ್ತೆ ಪ್ರತ್ಯೇಕ ಕಿಡಿ ಹೊತ್ತಿಸಿದ ಎಂಬಿ ಪಾಟೀಲ್

ಬೆಂಗಳೂರು: ಭಾಗ್ಯ ಸರಣಿ ಕೊಟ್ಟರೂ ಸಿದ್ದರಾಮಯ್ಯ ಸರ್ಕಾರವನ್ನು ಆಹುತಿ ತೆಗೆದುಕೊಂಡ ಪ್ರತ್ಯೇಕ ಧರ್ಮ ವಿವಾದ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ಪ್ರತ್ಯೇಕ ಧರ್ಮ ವಿಚಾರ ಇನ್ನೂ ಮುಗಿದಿಲ್ಲ, ಈ ಪ್ರಯತ್ನ ಮತ್ತೂ ಮುಂದುವರಿಸುತ್ತೇವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಪರೋಕ್ಷವಾಗಿ ಮಾತನಾಡಿರುವುದು ಕಾಂಗ್ರೆಸ್ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಈ ಹಿಂದೆ ಪ್ರತ್ಯೇಕ ಧರ್ಮ ರಚನೆಗೆ ಅತಿಯಾದ ಧಾವಂತ ತೋರಿ, ಧಾರ್ವಿುಕ ನಾಯಕರು ತೀರ್ಮಾನ ಮಾಡಬೇಕಾದ ವಿಚಾರದಲ್ಲಿ ಸರ್ಕಾರ ಅಗತ್ಯಕ್ಕಿಂತ ಹೆಚ್ಚಾಗಿ ಮೂಗು ತೂರಿಸಿ, ಚುನಾವಣೆ ವಿಷಯ ಮಾಡಿದರೆ ಮತ ವಿಭಜನೆ ಆಗಿ ಲಾಭವಾದೀತೆಂದು ಲೆಕ್ಕಾಚಾರ ಹಾಕಿ ಸಿದ್ದರಾಮಯ್ಯ ಸರ್ಕಾರದ ಕೊನೆಯ ಚರಣದಲ್ಲಿ ತರಾತುರಿ ಮಾಡಿದ್ದು ಜಗಜ್ಜಾಹೀರಾದ ವಿಚಾರ.

ಈ ಪ್ರಕ್ರಿಯೆಗೆ ಚುರುಕು ನೀಡಲು ತಜ್ಞರ ಸಮಿತಿ ರಚನೆ ಮಾಡಿದ್ದು, ಸಮಿತಿಯಿಂದ ತನಗೆ ಬೇಕಾದಂತೆ ವರದಿ ತರಿಸಿಕೊಂಡಿದ್ದು, ತಕ್ಷಣವೇ ಕೇಂದ್ರ ಸರ್ಕಾರಕ್ಕೆ ರವಾನಿಸಿ ಕೂಡಲೇ ಒಪ್ಪಿಬಿಡಬೇಕೆಂದು ಒತ್ತಡ ತಂದಿದ್ದೆಲ್ಲವೂ ನಾಡಿನ ಜನರಿಗೆ ಪ್ರಹಸನವಾಗಿ ಕಂಡಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಪ್ರಹಸನಕ್ಕೆ ಬೆಲೆ ತೆತ್ತಿದ್ದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಎಂಬುದರಲ್ಲಿ ಎರಡು ಮಾತಿಲ್ಲ.

ಚುನಾವಣೆಯಲ್ಲಿ ಪ್ರತ್ಯೇಕ ಧರ್ಮದ ಹಾದಿ ಹಿಡಿದ ಬಹುತೇಕ ನಾಯಕರನ್ನು ಮನೆಗೆ ಕಳಿಸಿದ್ದಲ್ಲದೇ, ಸಿದ್ದರಾಮಯ್ಯ ಸಂಪುಟದ 20 ಪ್ಲಸ್ ಸಚಿವರು ಪುನಃ ಶಾಸಕರಾಗಿಯೂ ಆಯ್ಕೆಯಾಗದಂತೆ ಆಪೋಶನ ತೆಗೆದುಕೊಂಡಿದ್ದು ಇದೇ ವಿಷಯ. ಬಳಿಕ ತನ್ನ ಸೋಲಿನ ಅವಲೋಕನ ಮಾಡಿಕೊಂಡಿದ್ದ ಕಾಂಗ್ರೆಸ್, ಪ್ರತ್ಯೇಕ ಧರ್ಮದ ತಂಟೆಗೆ ಇನ್ನು ಹೋಗುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಬಂದಿತ್ತು. ಇದೇ ವೇಳೆ ಬಳ್ಳಾರಿ, ಜಮಖಂಡಿ ಉಪ ಚುನಾವಣೆ ವೇಳೆ ಮೊದಲ ಬಾರಿಗೆ ಕಾಂಗ್ರೆಸ್ ಕಡೆಯಿಂದ ಪಶ್ಚಾತ್ತಾಪದ ಮಾತುಗಳು ಸಚಿವ ಡಿ.ಕೆ.ಶಿವಕುಮಾರ್ ಬಾಯಲ್ಲಿ ಹೊರಬಿದ್ದಿತ್ತು.

ಧರ್ಮಒಡಕರು ಎಂಬ ಹಣೆಪಟ್ಟಿಯಿಂದ ಹೊರಬರಲು ಕಾಂಗ್ರೆಸ್ ಆಯ್ಕೆ ಮಾಡಿಕೊಂಡಿದ್ದು ಕ್ಷಮಾಪಣಾ ಹಾದಿಯನ್ನು ಎಂಬುದು ಮುಚ್ಚಿಟ್ಟ ವಿಚಾರವೇನಲ್ಲ. ಉಪ ಚುನಾವಣೆಯಲ್ಲಿ ಈ ಪ್ರಯತ್ನ ಲಾಭಕರವೂ ಆಯಿತು. ವೀರಶೈವ-ಲಿಂಗಾಯತ ಮತಗಳು ಒಂದು ಕಡೆ ಕ್ರೋಡೀಕರಣವಾಗಲಿಲ್ಲ.

ಪ್ರತ್ಯೇಕ ಧರ್ಮ ವಿಷಯವಾಗಿ ಕಾಂಗ್ರೆಸ್ ಮೇಲಿನ ಅಷ್ಟೋ ಇಷ್ಟೋ ಸಿಟ್ಟನ್ನೂ ತೊಳೆಯುವ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ಕಳೆದ ಕೆಲವು ದಿನಗಳಿಂದ ಮತ್ತೆ ಅದೇ ದಾಳ ಉರುಳಿಸಿದರು. ಧರ್ಮದಲ್ಲಿ ರಾಜಕಾರಣ ಇರಬಾರದು, ನಮ್ಮಿಂದ ತಪ್ಪಾಗಿದೆ ಎಂದು ಜನರ ನಡುವೆ ಅವರಾಡಿದ ಮಾತು ಚಪ್ಪಾಳೆ ಗಿಟ್ಟಿಸಿದರೆ, ಈ ಬೆಳವಣಿಗೆ ಕಾಂಗ್ರೆಸ್​ನ ಕೆಲವು ನಾಯಕರನ್ನು ಚುಚ್ಚಿದೆ. ಪ್ರಮುಖವಾಗಿ ಎಂ.ಬಿ. ಪಾಟೀಲರನ್ನು ಬಡಿದೆಬ್ಬಿಸಿದೆ. ಕ್ಷಮೆ ಕೇಳಲು ಇವರ್ಯಾರು? ಇವರೇನು ಪಕ್ಷದ ಅಧ್ಯಕ್ಷರೇ ಎಂದು ಪ್ರಶ್ನಿಸುವ ಮೂಲಕ ತಮ್ಮೊಳಗಿನ ಸಿಟ್ಟನ್ನು ಹೊರಹಾಕಿದ್ದಾರೆ.

ಅಷ್ಟೇ ಅಲ್ಲದೇ ಕ್ಷಮೆ ಕೇಳುವುದು ತಪ್ಪು ಎಂಬರ್ಥದ ರೀತಿಯಲ್ಲಿ ಮಾತನಾಡುವ ಮೂಲಕ, ಪ್ರತ್ಯೇಕ ಧರ್ಮ ರಚನೆ ಪ್ರಯತ್ನ ಕೈಬಿಟ್ಟಿಲ್ಲ ಎಂಬುದನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ. ಪ್ರತ್ಯೇಕ ಧರ್ಮ ರಚನೆ ವಿಚಾರ ಬಾಕಿ ಇದ್ದಲ್ಲಿ ಅದು ತಮಗೆ ಲಾಭಕರ ಎಂದರಿತು ಈ ರೀತಿ ಮಾತನಾಡುತ್ತಿದ್ದಾರೆ ಎಂಬ ಆಕ್ಷೇಪ ಕಾಂಗ್ರೆಸ್​ನಲ್ಲಿದೆ. ಪ್ರಬಲ ಲಿಂಗಾಯತ ಸಮುದಾಯದ ನಾಯಕನಾಗಿ ಗುರುತಿಸಿಕೊಳ್ಳಬೇಕೆಂದರೆ ಪ್ರತ್ಯೇಕ ಧರ್ಮ ವಿಷಯ ಎಂ.ಬಿ.ಪಾಟೀಲರಿಗೆ ಬೇಕೇ ಬೇಕು, ಅದಿಲ್ಲವಾದರೆ ಅವರು ಸಮುದಾಯದಲ್ಲಿ ನಗಣ್ಯ.

ಈ ಕಾರಣಕ್ಕೆ ವಿವಾದ ಜೀವಂತ ಇಡುತ್ತಿದ್ದಾರೆ ಎಂಬ ಟೀಕೆಗಳು ಪಕ್ಷದಲ್ಲಿ ವ್ಯಕ್ತವಾಗಿವೆ. ಒಟ್ಟಾರೆ ಪ್ರತ್ಯೇಕ ಧರ್ಮ ಎಂಬುದು ಕಾಂಗ್ರೆಸ್​ಗೆ ನಿಗಿನಿಗಿ ಸುಡುವ ಕೆಂಡವಾಗಿದೆ. ಎಂ.ಬಿ.ಪಾಟೀಲ್ ಬೆಂಕಿಯೊಂದಿಗೆ ಹುಡುಗಾಟವಾಡುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ಪಕ್ಷದ ಹಿರಿಯರು ವ್ಯಕ್ತಪಡಿಸುತ್ತಿದ್ದಾರೆ.

ಧರ್ಮ ಒಡೆದರೆ ಲಾಭಕರ!

2018ರ ವಿಧಾನಸಭಾ ಚುನಾವಣೆಗೆ ಮುನ್ನ ವೀರಶೈವ-ಲಿಂಗಾಯತ ಧರ್ಮವನ್ನು ಒಡೆದು ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವುದರಿಂದ ಯಾವ ರೀತಿ ಲಾಭ ಆಗಲಿದೆ ಎಂದು ಎಂ.ಬಿ. ಪಾಟೀಲ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿಯವರಿಗೆ ಬರೆದಿದ್ದ ಪತ್ರ ಈಗ ಪುನಃ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ ಹಾಗೂ ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಷನ್ ಅಣತಿಯಂತೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಕಾಂಗ್ರೆಸ್ ಇಳಿದಿತ್ತು ಎಂಬುದು ಪತ್ರದ ಸಾರಾಂಶ. ಬಿಎಲ್​ಡಿಇ ಅಸೋಸಿಯೇಷನ್ ಲೆಟರ್​ಹೆಡ್​ನಲ್ಲಿ ಪತ್ರ ಸಂಖ್ಯೆ (1414/ಸಿಎಚ್/2017) ದಿನಾಂಕ 10-7-2017ರಂದು ಬರೆಯಲಾಗಿತ್ತು. ಆ ಸಂದರ್ಭದಲ್ಲಿ ಇಂಥ ಯಾವ ಪತ್ರವನ್ನೂ ಬರೆದಿಲ್ಲ. ಪತ್ರ ನಕಲಿ ಹಾಗೂ ಈ ಕುರಿತು ತನಿಖೆ ನಡೆಸಲಾಗುವುದು ಎಂದು ಎಂ.ಬಿ. ಪಾಟೀಲ್ ಹೇಳಿಕೆ ನೀಡಿದ್ದರು. ಆದರೆ, ವಿಧಾನಸಭಾ ಚುನಾವಣೆ ಮುಗಿದು ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ಪತ್ರದ ವಿಚಾರದಲ್ಲಿ ಯಾವ ತನಿಖೆಯೂ ನಡೆಯಲಿಲ್ಲ. ಎಲ್ಲಿಯೂ ದೂರು ಕೂಡ ದಾಖಲಾಗಲಿಲ್ಲ. ಅಷ್ಟೇ ಅಲ್ಲ, ಪತ್ರದಲ್ಲಿ ಉಲ್ಲೇಖವಾಗಿರುವಂತೆ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಆಗ್ರಹಿಸಿ ಎಲ್ಲ ಕಡೆಗಳಲ್ಲಿ ಸಮಾವೇಶಗಳು ಕೂಡ ನಡೆದಿದ್ದವು. ಇದೆಲ್ಲವನ್ನು ಗಮನಿಸಿದರೆ, ಆ ಪತ್ರ ನಕಲಿಯಲ್ಲ ಅಸಲಿ ಎಂಬ ಭಾವನೆ ಮೂಡುವುದು ಸಹಜ. ಇದೀಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ನನ್ನ ಅಸ್ಮಿತೆ ಎಂದು ಎಂ.ಬಿ. ಪಾಟೀಲ್ ಹೇಳಿಕೆ ನೀಡಿದ್ದು, ಆ ಪತ್ರ ಸಹ ಫೇಸ್​ಬುಕ್, ವಾಟ್ಸ್​ಆಪ್​ನಲ್ಲಿ ವೈರಲ್ ಆಗುವುದರೊಂದಿಗೆ ಮತ್ತೆ ಚಲಾವಣೆಗೆ ಬಂದಿದೆ. ಆ ಪತ್ರದ ಯಥಾವತ್ ರೂಪವನ್ನು ಓದುಗರ ಮಾಹಿತಿಗಾಗಿ ನೀಡಲಾಗಿದೆ.

ಎಂ.ಬಿ.ಪಾಟೀಲ್ ಪತ್ರದ ಕನ್ನಡ ಅನುವಾದ

ಶ್ರೀಮತಿ ಸೋನಿಯಾ ಗಾಂಧಿ,

ಎಐಸಿಸಿ ಅಧ್ಯಕ್ಷರು, ನಂ.10, ಜನಪಥ್, ನವದೆಹಲಿ.

ದಿನಾಂಕ: ಜುಲೈ 10, 2017

ಗೌರವಾನ್ವಿತ ಮ್ಯಾಡಮ್

ನೀವು ಸಲಹೆ ನೀಡಿದಂತೆ ನಾನು ಹಾಗೂ ಸಚಿವ ಸಂಪುಟದ ಕೆಲವು ಸದಸ್ಯರು ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ ಹಾಗೂ ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಷನ್​ನ ಪ್ರತಿನಿಧಿಗಳೊಂದಿಗೆ 2018ರ ವಿಧಾನಸಭೆ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದೇವೆ.

2019ರ ಲೋಕಸಭಾ ಚುನಾವಣೆ ಗೆಲ್ಲಲು ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಕರ್ನಾಟಕದಲ್ಲಿನ ಆರ್​ಎಸ್​ಎಸ್ ಬೆಳವಣಿಗೆಗೆ ನಿಯಂತ್ರಣ ಹೇರುವುದು ಅನಿವಾರ್ಯವಾಗಿದೆ. ಮುಸ್ಲಿಂ ಹಾಗೂ ಕ್ರಿಶ್ಚಿಯನ್​ರನ್ನು ನಂಬಿಕೆ ಆಧಾರದ ಮೇಲೆ ಒಗ್ಗೂಡಿಸಿ, ಹಾಗೆಯೇ ಹಿಂದುಗಳನ್ನು ಜಾತಿ, ಉಪಜಾತಿ ಹಾಗೂ ಪಂಗಡ, ಉಪ ಪಂಗಡಗಳ ಆಧಾರದಲ್ಲಿ ಒಡೆದು ಮಾತ್ರ ಇದನ್ನು ಸಾಧಿಸಬಹುದಾಗಿದೆ.

ಈ ಉದ್ದೇಶವನ್ನು ಈಡೇರಿಸಲು ವೀರಶೈವ-ಲಿಂಗಾಯತರ ನಡುವಿನ ವ್ಯತ್ಯಾಸವನ್ನು ಉಪಯೋಗಿಸಿ ಕೊಳ್ಳುವುದು ಹಾಗೂ ಮುಂದಿನ ಪ್ರಣಾಳಿಕೆಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್ನರಿಗೆ ವಿಶೇಷ ಸವಲತ್ತು ನೀಡಬೇಕು ಎಂದು ನಿರ್ಧರಿಸಲಾಯಿತು.

ಇದಕ್ಕಾಗಿ ಲಿಂಗಾಯತ ಸಮುದಾಯದ ನಾಲ್ವರು ಸ್ವಾಮೀಜಿ ಹಾಗೂ ಓರ್ವ ಮಹಿಳಾ ಸ್ವಾಮೀಜಿಯನ್ನು ಬಳಸಿಕೊಳ್ಳಲಾಗುವುದು. ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಹಾಗೂ ಅಲ್ಪಸಂಖ್ಯಾತ ಮಾನ್ಯತೆ ನೀಡುವುದಾಗಿ ಹೇಳಿಕೊಂಡು ರಾಜ್ಯಾದ್ಯಂತ ಮೆಗಾ ಸಮಾವೇಶ ನಡೆಸಲಾಗುವುದು.

ಈ ಬೆಳವಣಿಗೆಯು ಆರ್​ಎಸ್​ಎಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ. ಲಿಂಗಾಯತರು ತಾವು ಹಿಂದುಗಳಲ್ಲ ಎನ್ನುತ್ತಾರೆ. ಆರ್​ಎಸ್​ಎಸ್ ಹಿಂದು ರಾಷ್ಟ್ರದಲ್ಲಿ ನಂಬಿಕೆ ಇರಿಸಿದೆ. ಒಂದೊಮ್ಮೆ ಬಿಜೆಪಿ ಆರ್​ಎಸ್​ಎಸ್ ನಡೆ ಬೆಂಬಲಿಸಿದರೆ ಲಿಂಗಾಯತರ ಮತ ಕಳೆದುಕೊಳ್ಳುತ್ತದೆ. ಲಿಂಗಾಯತರ ಬೆಂಬಲವಿಲ್ಲದೇ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ. ಇದರಿಂದ ಲಿಂಗಾಯತರ ಶೇ.10 ಮತವನ್ನು ಕಾಂಗ್ರೆಸ್ ಪಡೆಯಲು ಸಫಲವಾದರೆ ಕರ್ನಾಟಕದಲ್ಲಿ ಮುಸ್ಲಿಂ, ಒಬಿಸಿ, ಎಸ್​ಸಿ ಹಾಗೂ ಎಸ್​ಟಿ ಬೆಂಬಲದೊಂದಿಗೆ ಮತ್ತೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಸುಲಭವಾಗುತ್ತದೆ. ಹೀಗಾಗಿ ಈ ವರ್ಷದ ಸೆಪ್ಟೆಂಬರ್ ಹಾಗೂ ಅಕ್ಟೋಬರ್​ನಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ ಹಾಗೂ ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಷನ್​ನ ಪ್ರತಿನಿಧಿಗಳು ಈ ಸಮಾವೇಶಕ್ಕೆ ಅಗತ್ಯವಿರುವ ಸಾರಿಗೆ, ವಸತಿ ಸೌಕರ್ಯ ನೀಡಲು ಒಪ್ಪಿವೆ. ಹಾಗೆಯೇ ಕಾಂಗ್ರೆಸ್ ಕಾರ್ಯಕರ್ತರೇ ಲಿಂಗಾಯತರಂತೆ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಹಿಂದುಗಳನ್ನು ಒಡೆದು, ಮುಸ್ಲಿಂರನ್ನು ಒಗ್ಗೂಡಿಸುವ ಈ ಕಾರ್ಯತಂತ್ರದಿಂದ 2018ರ ವಿಧಾನಸಭೆ ಚುನಾವಣೆಯನ್ನು ನಾವು ಖಂಡಿತ ಗೆಲ್ಲಲಿದ್ದೇವೆ.

ನಿಮ್ಮ ನಂಬಿಕೆಯ

ಎಂ.ಬಿ.ಪಾಟೀಲ್

One Reply to “ಮತ್ತೆ ಪ್ರತ್ಯೇಕ ಕಿಡಿ ಹೊತ್ತಿಸಿದ ಎಂಬಿ ಪಾಟೀಲ್”

  1. This time we have to thrash him on the street and all lingayuts must break his legs and throw him to trash.

Comments are closed.