ನಿಮ್ಮ ಕನಸು ನನಸಾಗಲ್ಲ: ಶಾಸಕ ಸುಕುಮಾರ ಶೆಟ್ಟಿಗೆ ಸಚಿವೆ ಜಯಮಾಲ ಟಾಂಗ್

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರಾಡಿಯಲ್ಲಿ ಆರೋಗ್ಯ ಉಪಕೇಂದ್ರದ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೈತ್ರಿ ಸರ್ಕಾರದ ಅಸ್ತಿತ್ವದ ಬಗ್ಗೆ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಕೆಣಕ್ಕಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಸಿಟ್ಟಾದರು.

ಕೆರಾಡಿ ಆರೋಗ್ಯ ಉಪಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದೆ. ವಂಡ್ಸೆ ಆರೋಗ್ಯ ಕೇಂದ್ರಕ್ಕೆ ಇನ್ನೊಬ್ಬ ವೈದ್ಯರನ್ನು ನೇಮಿಸಲು ಪ್ರಯತ್ನ ನಡೆಸುತ್ತೇನೆ. ಎಲ್ಲವೂ ದೇವರ ಇಚ್ಛೆ. ದೇವರು ಮನಸ್ಸು ಮಾಡಿದರೆ ನಾಳೆ ಏನೂ ಮಾಡಬಹುದು. ಇನ್ನು ಎರಡು ಮೂರು ದಿನದಲ್ಲಿ ಏನಾಗುತ್ತದೆ ಎಂದು ಹೇಳಲೂ ಸಾಧ್ಯವಿಲ್ಲ ಎಂದು ಸುಕುಮಾರ ಶೆಟ್ಟಿ ಸಚಿವೆ ಕಡೆ ತಿರುಗಿ ದೋಸ್ತಿ ಸರ್ಕಾರವನ್ನು ಅಣಕಿಸಿದ್ದರು.

ಶಾಸಕರ ಮಾತಿಗೆ ಸಿಟ್ಟಾದ ಸಚಿವೆ ‘ಏನು?’ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದಾಗ, ಶಾಸಕ ಸುಕುಮಾರ ಶೆಟ್ಟಿ ಸಚಿವರಿಗೆ ಗುಲಾಬಿ ಹಿಡಿದ ಕೈಯ್ಯಲ್ಲಿ ನಮಸ್ಕರಿಸಿ ಸಮಾಧಾನಪಡಿಸಿದರು.

ಪ್ರತಿಕ್ರಿಯಿಸಿದ ಸಚಿವರು, ಬೈಂದೂರು ಶಾಸಕರು ಪಾಪ, ಅವರಿಗೆ ತುಂಬಾ ಕನಸಿದೆ. ಯಾವಾಗಲೂ ಕನಸು ಕಾಣುತ್ತಲೇ ಇರುತ್ತಾರೆ. ಆ ಕನಸು ನನಸಾಗಬೇಕಲ್ವೇ? ಖಂಡಿತ ಆ ಕನಸು ನನಸಾಗಲ್ಲ ಎಂದರು.
ನಮಗೇನು ಚಿಂತೆ ಇಲ್ಲ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಮೈತ್ರಿ ಸರ್ಕಾರ ಐದು ವರ್ಷ ಸಂಪೂರ್ಣ ಆಡಳಿತ ನಡೆಸುತ್ತದೆ. ನಮ್ಮೆಲ್ಲ ಶಾಸಕರು ಜತೆಗಿದ್ದಾರೆ. ಫೆ.8ರಂದು ಬಜೆಟ್ ಮಂಡನೆ ಮಾಡುತ್ತೇವೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲಾ ಮಕ್ಕಳನ್ನು ಸೇರಿಸಿದ್ದಕ್ಕೂ ಸಂಘಟಕರನ್ನು ಸಚಿವರು ತರಾಟೆಗೆತ್ತಿಕೊಂಡರು. ಕಾರ್ಯಕ್ರಮ ಉದ್ಘಾಟನೆ ಸಂದರ್ಭ ದೀಪ ಬೆಳಗಲು ಮೇಣದ ಬತ್ತಿ ಬಳಸುವುದನ್ನು ನಿರಾಕರಿಸಿ ಬೆಂಕಿ ಕಡ್ಡಿಯಿಂದ ದೀಪ ಹಚ್ಚಿದರು. ಮೇಣದ ಬತ್ತಿಯಿಂದ ದೀಪ ಬೆಳಗಿಸುವುದು ನಮ್ಮ ಸಂಪ್ರದಾಯವಲ್ಲ ಎಂಬ ಕಾರಣ ಸಚಿವರು ನೀಡಿದರು.