VIDEO: ಕುಂದಗೋಳದಲ್ಲಿ ಸಚಿವ ಜಮೀರ್​ ಅಹ್ಮದ್​ ಸಂಧಾನ ಯಶಸ್ವಿ: ನಾಮಪತ್ರ ಹಿಂಪಡೆದ 8 ಬಂಡಾಯ ಅಭ್ಯರ್ಥಿಗಳು

ಹುಬ್ಬಳ್ಳಿ: ಕುಂದಗೋಳದಲ್ಲಿ ಟಿಕೆಟ್​ ಸಿಗದ್ದಕ್ಕೆ ಅಸಮಾಧಾನಗೊಂಡು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದ ಆರು ಮಂದಿ ಕಾಂಗ್ರೆಸಿಗರೊಂದಿಗೆ ಸಚಿವ ಜಮೀರ್​ ಅಹ್ಮದ್​ ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿದೆ. ನಂತರ ಸಚಿವ ಜಮೀರ್​, ಮಾಜಿ ಸಚಿವ ವಿನಯ್​ ಕುಲಕರ್ಣಿ ಅವರ ಜತೆ ತಹಸೀಲ್ದಾರ್​ ಕಚೇರಿಗೆ ಬಂದ ಬಂಡಾಯ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದರು.
ಕುಂದಗೋಳ ವಿಧಾನಸಭಾ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಗಳಾಗಿದ್ದ ಸುರೇಶ್​ ಸವಣೂರ, ಎಚ್​.ಎಲ್​. ನದಾಫ್​, ಚಂದ್ರಶೇಖರ್​ ಜುಟ್ಟಲ್​, ಜೆ.ಡಿ. ಘೋರ್ಪಡೆ, ವಿಶ್ವನಾಥ ಕುಬಿಹಾಳ ಸೇರಿ ಎಂಟು ಮಂದಿ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು. ಇದರಿಂದಾಗಿ ಕಾಂಗ್ರೆಸ್​ಗೆ ಭಾರಿ ಇರಿಸುಮುರಿಸು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಸಚಿವ ಜಮೀರ್​ ಅಹ್ಮದ್​ ಅವರನ್ನು ಸಂಧಾನಕಾರರಾಗಿ ಕುಂದಗೋಳಕ್ಕೆ ಕಳುಹಿಸಿದ್ದರು.
ಬಂಡಾಯ ಅಭ್ಯರ್ಥಿಗಳೊಂದಿಗೆ ಸುದೀರ್ಘ ಸಮಾಲೋಚನೆ, ಚರ್ಚೆ ಮಾಡಿದ ಜಮೀರ್​ ಅಹ್ಮದ್​ ಬಂಡಾಯ ಶಮನಗೊಳಿಸುವಲ್ಲಿ ಯಶಸ್ವಿಯಾದರು. ಅಲ್ಲದೆ,ವಿನಯ್​ ಕುಲಕರ್ಣಿ ಜತೆಗೂಡಿ ಎಲ್ಲ ಬಂಡಾಯ ಅಭ್ಯರ್ಥಿಗಳನ್ನು ಕುಂದಗೋಳ ತಹಸೀಲ್ದಾರ್​ ಕಚೇರಿಗೆ ಕರೆತಂದು ನಾಮಪತ್ರ ಹಿಂಪಡೆಯುವಂತೆ ಮಾಡಿದರು.