More

    ಹೇಮೆ ನಾಲೆ ಆಧುನೀಕರಣಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ : ಸಚಿವ ಜೆ.ಸಿ.ಮಾಧುಸ್ವಾಮಿ

    ತುಮಕೂರು: ತುಮಕೂರು, ಮಂಡ್ಯ ಜಿಲ್ಲೆಗೆ ನೀರು ಹರಿಯುವ 70 ರಿಂದ 166 ಕಿಲೋಮೀಟರ್‌ವರೆಗಿನ ಹೇಮಾವತಿ ನಾಲೆ ಆಧುನೀಕರಣಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

    ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ cಯಲ್ಲಿ ಮಾತನಾಡಿ, ಪ್ರಸ್ತುತ ನಾಲೆಯಲ್ಲಿ ನೀರು ನಿಲ್ಲಿಸಲಾಗಿದ್ದು, ಮಾರ್ಚ್‌ವರೆಗೂ ನಾಲೆ ಕೆಲಸ ಮಾಡಿ ನಂತರ ಜಿಲ್ಲೆಯ ಪಾಲಿನ ಉಳಿದಿರುವ 7 ಟಿಎಂಸಿ ನೀರು ಬಿಟ್ಟುಕೊಳ್ಳಲು ನಿರ್ಧರಿಸಲಾಗಿದೆ ಎಂದರು.

    ತಿಪಟೂರು ತಾಲೂಕಿನಲ್ಲಿ ಎತ್ತಿನಹೊಳೆ ಕಾಮಗಾರಿಗೆ ಅರಣ್ಯ ಇಲಾಖೆ ತಕರಾರು ತೆಗೆದಿದೆ. ಯೋಜನೆಗೆ ಬಲಿಯಾಗುವ ಮರಗಳಿಗೆ 2 ಕೋಟಿ ರೂ. ಪರಿಹಾರ ನೀಡಲು ಜಲಸಂಪನ್ಮೂಲ ಇಲಾಖೆ ಒಪ್ಪಿಗೆ ನೀಡಿದ್ದರೂ ಅರಣ್ಯ ಇಲಾಖೆ ಖ್ಯಾತೆ ತೆಗೆಯುತ್ತಿದೆ ಎಂದು ಶಾಸಕ ಬಿ.ಸಿ.ನಾಗೇಶ್ ದೂರಿದರು. ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‌ಸಿಂಗ್ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

    ಐಎಎಸ್ ಟಾಪರ್‌ಗೆ ಸಚಿವರ ಕಾನೂನು ಪಾಠ: ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ 2017ರ ಬ್ಯಾಚ್ ಐಎಎಸ್ ಟಾಪರ್ ಕೆ.ಆರ್.ನಂದಿನಿಗೆ ಕಾನೂನು ಪಾಠ ಮಾಡಿದರು. ಕಾನೂನು ದೊಡ್ಡದು ನಾನು, ನೀವು ಅಲ್ಲ, ಅದನ್ನು ಪಾಲಿಸಿ ಎಂದು ಬುದ್ಧಿ ಹೇಳಿದರು. ನೊಣವಿನಕೆರೆ ಗ್ರಾಪಂ ಅಧ್ಯಕ್ಷರ ರಾಜೀನಾಮೆಯನ್ನು ತಿಂಗಳಿನಿಂದ ಪೆಂಡಿಂಗ್ ಇಟ್ಟಿರುವ ಐಎಎಸ್ ಪ್ರೊಬೇಷನರಿ ಅವಧಿಯಲ್ಲಿರುವ ತಿಪಟೂರು ಎಸಿ ಕೆ.ಆರ್.ನಂದಿನಿ ವಿರುದ್ಧ ಶಾಸಕ ಬಿ.ಸಿ.ನಾಗೇಶ್ ಹರಿಹಾಯ್ದರು. ಕ್ರಮಬದ್ಧವಾಗಿ, ಸ್ವಇಚ್ಛೆಯಿಂದ ನೀಡಿರುವ ರಾಜೀನಾಮೆ ಅಂಗೀಕಾರಕ್ಕೆ ಇಲ್ಲದ ಕಾನೂನು ಹೇಳುತ್ತಿರುವ ಎಸಿ ಸರ್ವಾಧಿಕಾರಿ ಧೋರಣೆಗೆ ಕಡಿವಾಣ ಹಾಕಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.

    ಶಾಸಕರ ಆರೋಪಗಳಿಗೆ ನಗುತ್ತ ಉತ್ತರಿಸಲು ಮುಂದಾದ ನಂದಿನಿ ಮೇಲೆ ಸಿಟ್ಟಾದ ಬಿ.ಸಿ.ನಾಗೇಶ್ ಕೆಡಿಪಿ ಸಭೆಯಲ್ಲಿನ ಇವರ ಉತ್ತರ ದಾಖಲಿಸಿ ನಡಾವಳಿ ಮಾಡಿ, ಇದರ ಆಧಾರದ ಮೇಲೆ ಕೋರ್ಟ್‌ಗೆ ಹೋಗ್ತಿನಿ ಎಂದು ಅಬ್ಬರಿಸಿದ್ದೆ ತಡ ಐಎಎಸ್ ಅಧಿಕಾರಿಗಳೆಲ್ಲ ಎಸಿ ಬೆಂಬಲಕ್ಕೆ ಧಾವಿಸಿ, ಕಾನೂನು ಹೇಳಲು ಆರಂಭಿಸಿದರು. ನಂದಿನಿ ರಕ್ಷಣೆಗೆ ಮುಂದಾದ ಡಿಸಿ ಡಾ.ಕೆ.ರಾಕೇಶ್‌ಕುಮಾರ್ ಅವರನ್ನು ತಡೆದ ಸಚಿವ ಮಾಧುಸ್ವಾಮಿ, ನೀವೆಲ್ಲಾ ನಾವು ಅನುದಾನ ಬಳಸಿಲ್ಲ ಎಂದು ಸುಳ್ಳು ವರದಿ ನೀಡಿದ್ದು ನೆನಪಿದೆ. ಎಲ್ಲರೂ ಕಾನೂನು ಪಾಲಿಸಬೇಕು, ಕಾನೂನು ರೂಪಿಸಲು ನಾವಿದ್ದೇವೆ ಎಂದು ಕಾನೂನು ಪಾಠ ಮಾಡಿದರು.

    ತಿಪಟೂರು ಕ್ಷೇತ್ರಕ್ಕೆ ವೆಂಕಯ್ಯನಾಯ್ಡು ಸಚಿವರಾಗಿದ್ದಾಗ ನೀಡಿದ್ದ ಅನುದಾನದ ಲೆಕ್ಕ ಡಿಸಿ ಕಚೇರಿಯಲ್ಲಿಲ್ಲ, ಎಲ್ಲ ಅಧಿಕಾರಿಗಳನ್ನು ಪ್ರಶ್ನಿಸುವ ಇವರ ಅವ್ಯವಸ್ಥೆ ಪ್ರಶ್ನಿಸುವರು ಯಾರು ಎಂದು ಜಿಲ್ಲಾಡಳಿತದ ವೈಫಲ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರೆ 10 ದಿನದೊಳಗೆ ಪರಿಶೀಲಿಸಿ ಅಂಗೀಕರಿಸಬೇಕು ಎಂಬುದು ನಿಯಮ, ಅದನ್ನು ಬಿಟ್ಟು ನೀವೆ ಒಂದು ಕಾನೂನು ಓದಿಕೊಂಡರೆ ಸಹಿಸಲು ಸಾಧ್ಯವಿಲ್ಲ. ಪ್ರತಿಷ್ಠೆ ಬಿಟ್ಟು ಕಾನೂನು ಪಾಲಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿ, ಸೋಮವಾರದೊಳಗೆ ಪ್ರಕರಣ ಅಂತ್ಯ ಕಾಣಿಸಿ ಎಂದು ಡಿಸಿಗೆ ಸೂಚಿಸಿದರು.

    ಅಡುಗೆ ಸಿಬ್ಬಂದಿ ನೇಮಕದಲ್ಲಿ ತಾರತಮ್ಯ: ಅಕ್ಷರ ದಾಸೋಹ ಯೋಜನೆಯಲ್ಲಿ ಅಡುಗೆ ತಯಾರಕರ ನೇಮಕದಲ್ಲಿ ತಾರತಮ್ಯವಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ನೇಮಕಾತಿ ನಡೆದಿಲ್ಲ ಎಂದು ಅಂಕಿ ಅಂಶಗಳನ್ನಿಟ್ಟುಕೊಂಡು ಸಚಿವ ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡರು.
    ಶಾಲೆಗೆ ಬೇಳೆ ಹಾಗೂ ಅಡುಗೆ ಎಣ್ಣೆ ನೀಡಿಲ್ಲ ಎಂದು ಶಾಸಕ ಬಿ.ಸಿ.ನಾಗೇಶ್ ಗಮನಸೆಳೆದರು. ಮಂಗಳವಾರದೊಳಗೆ ಶಾಲೆಗಳಿಗೆ ಅಗತ್ಯ ದಾಸ್ತಾನು ತಲುಪದಿದ್ದರೆ ನಿಮ್ಮನ್ನು ಮನೆಗೆ ಕಳುಹಿಸುತ್ತೇನೆ ಎಂದರು.

    ನರಭಕ್ಷಕ ಚಿರತೆ ಕೊಲ್ಲಿ!: ಮನುಷ್ಯರನ್ನು ತಿನ್ನುವ ಚಿರತೆ ಹೊಡೆದಾಕಲು ನೀವು ಹಿಂದೆ, ಮುಂದೆ ನೋಡಿದರೆ ನಾವೇನು ಮಾಡಬೇಕು. ಅನುಮತಿ ತೆಗೆದುಕೊಳ್ಳಿ, ಕೊಡದಿದ್ದರೆ ಅವರನ್ನೇ ತಂದು ಅಲ್ಲಿ ಕೂರಿಸೋಣ. ಬೇರೆ ಜಿಲ್ಲೆಗಳಿಂದ ತಂದು ಚಿರತೆ ಬಿಟ್ಟು
    ಹೋಗುವವರೆಗೂ ನೀವು ಏನು ಮಾಡ್ತಿದ್ರೀ ಎಂದು ಡಿಎಫ್‌ಒ ಎಚ್.ಸಿ.ಗಿರೀಶ್‌ಗೆ ಸಚಿವರು ಪ್ರಶ್ನಿಸಿದರು.

    ಪರಮ್‌ಗೆ ಸಭೆ ನಡೆಯೋದೇ ಗೊತ್ತಿಲ್ವಂತೆ!: ತುಮಕೂರಿನಲ್ಲಿ ಶನಿವಾರ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಪರಮೇಶ್ವರ್ ಕೆಡಿಪಿ ಸಭೆಯ ಕಡೆ ಸುಳಿಯಲಿಲ್ಲ. ಈ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ‘ಹೌದಾ ಇವತ್ತು ಇದ್ಯಾ, ನನಗೆ ಗೊತ್ತೇ ಇಲ್ಲ. ಮುಂದಿನ ಸಾರಿ ಹೋಗ್ತಿನಿ’ ಎಂದು ಪ್ರತಿಕ್ರಿಯಿಸಿದರು. ಡಿಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ಸರ್ಕಾರಿ ಸಭೆಗಳಿಂದ ದೂರವಿರುವ ಪರಮೇಶ್ವರ್ ಮೇಲೆ ಕ್ಷೇತ್ರದ ಜನರೇ ಸಿಟ್ಟಾಗಿದ್ದಾರೆ.

    ರೈತರಿಗೆ ತೊಂದರೆಯಾದ್ರೆ ಕಿತ್ತು ಆಚೆ ಬಿಸಾಕಿ ನಿಮ್ ಸಿಸ್ಟಮ್!: ಪಹಣಿಯಲ್ಲಿ ರಾಗಿ ಬೆಳೆ ಎಂದು ನಮೂದಾಗಿದ್ದರೆ ಖರೀದಿ ಮಾಡಿಕೊಳ್ಳುತ್ತಿದ್ದು ಪಹಣಿ ತಿದ್ದುಪಡಿಯಾಗದ ರೈತರಿಗೆ ತೊಂದರೆಯಾಗಿದೆ ಎಂದು ಶಾಸಕ ನಾಗೇಶ್ ಗಮನಸೆಳೆದರು. ಪಹಣಿಯಲ್ಲಿ ಬೆಳೆ ಬೇರೆ ಇದ್ದರೆ ಸಿಸ್ಟಮ್ ತಗೆದುಕೊಳ್ಳುತ್ತಿಲ್ಲ ಎಂದು ಹೇಳಿದ ಆಹಾರ ಇಲಾಖೆ ಡಿಡಿ ಶ್ರೀನಿವಾಸ್ ಮಾತಿಗೆ ಸಿಟ್ಟಾದ ಸಚಿವರು ಕಿತ್ತು ಬಿಸಾಕಿ ನಿಮ್ ಸಿಸ್ಟಮ್, ಜನಕ್ಕೆ ಒಳ್ಳೆಯದಾಗದ ಯಾವ ಸಿಸ್ಟಮ್ ನಿಮ್ದು. ಕಳೆದ ವರ್ಷ ವ್ಯಾಪಾರಸ್ಥರಿಂದ ಖರೀದಿ ಮಾಡಿ ನಿಮ್ಮ ಗೋಡೌನ್ ತುಂಬಿಸಿಕೊಂಡ್ರಿ, ಈಗ ರೈತರೇ ಮಾರ್ತಿನಿ ಅಂತ ಬಂದ್ರೆ ಕಥೆ ಹೇಳ್ತಿರಾ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್‌ಗೆ ಚಾಟಿ ಬೀಸಿದರು.

    319 ಮಕ್ಕಳ ಸಾವು ನಾಚಿಕೆಗೇಡು!: ಜಿಲ್ಲೆಯಲ್ಲಿ 319 ಮಕ್ಕಳು ಮರಣ ಹೊಂದಿದ್ದಾರೆ, ನಾವು ಸಹಿಸಬೇಕಾ? ಎಲ್ಲ ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರು ಇದ್ದರೂ ಏಕೆ ಮಾಡುತ್ತಿಲ್ಲ. ಏನು ನಡೀತಿದೆ ಜಿಲ್ಲೆಯಲ್ಲಿ ಎಂದು ಡಿಎಚ್‌ಇ ಡಾ.ಚಂದ್ರಿಕಾ ವಿರುದ್ಧ ಸಚಿವ ಮಾಧುಸ್ವಾಮಿ ಹರಿಹಾಯ್ದರು. ಜಿಲ್ಲೆಯಲ್ಲಿ 28 ಲಕ್ಷ ಜನರಿದ್ದು 3 ಲಕ್ಷ ಆರೋಗ್ಯ ಕಾರ್ಡ್ ನೀಡಿದ್ದೀರಾ…ಗ್ರಾಪಂ ಕಚೇರಿಯಲ್ಲಿಯೂ ಆರೋಗ್ಯಕಾರ್ಡ್ ಮಾಡಲು ಅವಕಾಶ ನೀಡಲಾಗಿದೆ ಎಂದರು. ವಿದ್ಯಾರ್ಥಿವೇತನ ಖರ್ಚಾಗುತ್ತಿಲ್ಲ, ನೇರವಾಗಿ ವಿದ್ಯಾರ್ಥಿಗಳ ಅಕೌಂಟ್‌ಗೆ ಹಾಕೋದಕ್ಕೆ ನಿಮಗೆ ಬೇಜಾರಾ? ಎಂದು ಸಮಾಜ ಕಲ್ಯಾಣ ಇಲಾಖೆ ಜೆಡಿ ಎಚ್.ಎಸ್.ಪ್ರೇಮನಾಥ್ ವಿರುದ್ಧ ಸಚಿವರು ಹರಿಹಾಯ್ದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‌ಸಿಂಗ್, ಸಂಸದ ಜಿ.ಎಸ್.ಬಸವರಾಜು, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಪಂ ಸಿಇಒ ಶುಭಾಕಲ್ಯಾಣ್, ಜಿಪಂ ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಶಾರದಾ ಇದ್ದರು.

    ಒಂದು ಶೌಚಗೃಹ ನಿರ್ಮಿಸಲು ವರ್ಷ ಬೇಕಾ? ವರ್ಷದಿಂದ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡ್ತಿರಾ ನೀವು ಶೌಚಗೃಹ ಕಟ್ತಿದ್ದಿರೊ ತಾಜ್ ಮಹಲ್ ಕಟ್ತಿದಿರೊ?
    ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts