ಆತ್ಮವಿಶ್ವಾಸದಿಂದ ಕೈಗೊಂಡ ಕಾರ್ಯಕ್ಕೆ ಶ್ಲಾಘನೆ

ಹಾಸನ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ನಾನೇ ಆತ್ಮವಿಶ್ವಾಸದಿಂದ ಕೈಗೊಂಡ ಕೆಲವು ಕಾರ್ಯಕ್ರಮಗಳ ಬಗ್ಗೆ ಗೊತ್ತಿದ್ದರಿಂದ ಸಚಿವ ಎಚ್.ಡಿ. ರೇವಣ್ಣ ನನ್ನ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ರಾಜ್ಯಕ್ಕೆ ನಂ.1 ಸ್ಥಾನ ಪಡೆಯುವುದಕ್ಕೆ ನಮ್ಮ ಕುಟುಂಬ ವರ್ಗ ಮಾತ್ರ ಕಾರಣವಲ್ಲ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಹೇಳಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವುದು ಸಂತೋಷದ ವಿಷಯವಾಗಿದೆ. ಇದಕ್ಕಾಗಿ ನಾನು ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಮತ್ತು ನಮ್ಮ ಜಿಲ್ಲೆಯ ಮಕ್ಕಳ ಶ್ರಮವನ್ನು ಪ್ರಶಂಶಿಸುತ್ತೇನೆ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
ಮೊದಲು ನಾನು ಎಲ್ಲ ವಿಷಯದಲ್ಲಿಯೂ ರೇವಣ್ಣ ಸಾಹೇಬರ ಮೇಲೆ ಅವಲಂಬಿತಳಾಗುತ್ತಿದ್ದೆ. ಆದರೆ ಇತ್ತೀಚೆಗೆ ನಾನೇ ಮುಂದಡಿಯಿಡುವ ಆತ್ಮಸ್ಥೈರ್ಯ ಬೆಳೆಸಿಕೊಂಡಿದ್ದೇನೆ. ಪಾಲಕರ ಸಭೆ ಕರೆದಿದ್ದು ಇಡೀ ರಾಜ್ಯದಲ್ಲಿ ನಾವೇ ಮೊದಲು. ಹೀಗಾಗಿ ಪಾಲಕರು ಹಾಗೂ ಡಿಡಿಪಿಐಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ಬಾರಿಯೂ ಇದೇ ಸ್ಥಾನವನ್ನು ಕಾಯ್ದುಕೊಳ್ಳುತ್ತೇವೆ, ಆ ಛಲ ಇದೆ. ನಾನೇ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೆ. ಮಕ್ಕಳು ಹೆಚ್ಚಿನ ಕಲಿಕೆಗೆ ಅನುಕೂಲಕರ ಕಾರ್ಯಕ್ರಮ ರೂಪಿಸಿದ್ದೆವು. ಭಗವಂತ ಅದಕ್ಕೆ ಫಲಿತಾಂಶ ಕೊಟ್ಟಿದ್ದಾನೆ ಎಂದರು.
ಫಲಿತಾಂಶದಲ್ಲಿ ಹಾಸನ ಮೊದಲ ಸ್ಥಾನಕ್ಕೆ ಬರಲು ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಕಾರಣ ಎಂಬ ಚರ್ಚೆಗೆ ಪ್ರತಿಕ್ರಿಯಿಸಿದ ಭವಾನಿ, ಯಾರು ಏನಾದರೂ ಹೇಳಿಕೊಳ್ಳಲಿ, ಕೆಲಸ ಮಾಡಿರುವವರಿಗೆ ಗೊತ್ತಿರುತ್ತದೆ. ನಾನು ನಡೆಸಿದ ಎಲ್ಲ ಸಭೆಗಳಿಗೂ ಮಾಧ್ಯಮಗಳೇ ಸಾಕ್ಷಿಯಾಗಿದ್ದವು. ಯಾರು ಎಷ್ಟೆಷ್ಟು ಕೆಲಸ ಮಾಡಿದ್ದಾರೆ ಎನ್ನುವುದು ಅಧಿಕಾರಿ, ಸಿಬ್ಬಂದಿ ವರ್ಗ, ಮಕ್ಕಳಿಗೆ ಗೊತ್ತು ಎಂದು ಟಾಂಗ್ ನೀಡಿದರು.

ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ನಾವು ಹಾಸನ, ಮಂಡ್ಯ, ತುಮಕೂರು(ಎಚ್‌ಎಂಟಿ)ಗಳಲ್ಲಿಯೂ ಗೆಲ್ಲುತ್ತೇವೆ ಎಂದು ಭವಾನಿ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪರವಾಗಿ ಎಲ್ಲರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ನಮಗೆ ಗೆಲುವಿನ ಕುತೂಹಲ ಇಲ್ಲ. ಮುನ್ನಡೆ ಬಗ್ಗೆ ಮಾತ್ರವೇ ಕುತೂಹಲ ಇದೆ. ಹೀಗಾಗಿ ತಮ್ಮ ಪುತ್ರನ ಗೆಲುವು ನಿಶ್ಚಿತ ಎಂದರು.

Leave a Reply

Your email address will not be published. Required fields are marked *