ದೆಹಲಿಯ ಕರ್ನಾಟಕ ಭವನ ನಿರ್ಮಾಣದ ಅಡಿಗಲ್ಲು ಕಾರ್ಯಕ್ರಮಕ್ಕೆ ಬಿಎಸ್​ವೈರನ್ನು ಕೈ ಹಿಡಿದು ಎಳೆದೊಯ್ದ ರೇವಣ್ಣ

ನವದೆಹಲಿ: ಬದ್ಧ ವೈರಿಗಳಂತೆಯೇ ಬಿಂಬಿತರಾಗುವ ಸಚಿವ ಎಚ್‌ ಡಿ ರೇವಣ್ಣ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಜಂಟಿಯಾಗಿ ದೆಹಲಿಯಲ್ಲಿ ಕರ್ನಾಟಕ ಭವನದ ಹೊಸ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿದ್ದಾರೆ.

ಕರ್ನಾಟಕ ಭವನದ ಹೊಸ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸುವ ವೇಳೆ ಭವನದ ಹೊರಗೆ ಯಡಿಯೂರಪ್ಪ ವಾಕಿಂಗ್ ಮಾಡುತ್ತಿದ್ದಾಗ ಬಿಎಸ್‌ವೈ ಅವರನ್ನು ನೋಡಿದ ರೇವಣ್ಣ ಕೈ ಹಿಡಿದು ಬನ್ನಿ ಎಂದು ಕರೆ ತಂದಿದ್ದಾರೆ.

ಯಡಿಯೂರಪ್ಪ ಅವರಿಗೆ ಅಧಿಕೃತ ಆಹ್ವಾನ ಇರಲಿಲ್ಲವಾದ್ದರಿಂದಾಗಿ ಬೆಳಗ್ಗಿನ ವಾಕಿಂಗ್‌ಗೆಂದು ದೆಹಲಿಯ ನೆಹರು ಪಾರ್ಕ್‌ಗೆ ತೆರಳುತ್ತಿದ್ದ ಯಡಿಯೂರಪ್ಪ ಅವರನ್ನು ಅಡಿಗಲ್ಲು ನೆರವೇರಿಸಿ ಹೋಗಿ ಎಂದು ರೇವಣ್ಣ ಕರೆದಿದ್ದಾರೆ. ನಂತರ ಒಟ್ಟಾಗಿ ಅಡಿಗಲ್ಲನ್ನು ಇರಿಸಿದ್ದಾರೆ.

83 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು, ಕಟ್ಟಡ ಹಳೆಯದಾಗಿದೆ, ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎಂದು ತಾಂತ್ರಿಕ ವರದಿ ಇದೆ ಎಂದು ರೇವಣ್ಣ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)