ಗ್ರಾಮೀಣ ಕ್ರೀಡೆಗಳಿಗೆ ಮರುಜೀವ ತುಂಬಿ

ಮೈಸೂರು: ಗ್ರಾಮೀಣ ಕ್ರೀಡೆಗಳಿಗೆ ಯುವಜನರು ಮರುಜೀವ ತುಂಬಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ದಸರಾ ಕುಸ್ತಿ ಪಂದ್ಯಾವಳಿಯ ಜೋಡಿ ಕಟ್ಟುವ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪುರುಷರಿಗೆ ಸೀಮಿತ ಎಂಬಂತಿದ್ದ ಕುಸ್ತಿ, ಕರಾಟೆ, ಕಬಡ್ಡಿಯಲ್ಲೂ ಇತ್ತೀಚೆಗೆ ಮಹಿಳೆಯರು ಭಾಗವಹಿಸಿ ಪ್ರಶಸ್ತಿ ಪಡೆಯುತ್ತಿರುವುದು ಸಂತಸದ ವಿಷಯ ಎಂದರು.
ಕುಸ್ತಿಪಟುಗಳಾದ ಕನಕಪುರದ ಸ್ವರೂಪ್‌ಗೌಡ, ಬಾಬೂರಾಯನಕೊಪ್ಪಲಿನ ಕಿರಣ್ ಹಾಗೂ ರೆಹಮಾನ್, ಸುಹಾಷ್ ಜೋಡಿ ಕಟ್ಟಲಾಯಿತು. ಇದೇ ವೇಳೆ ಕುಸ್ತಿಪಟುಗಳು ಬಸ್ಕಿ, ದಂಡ, ಸಪೋರ್ಟ್, ಕಲ್ಲನ್ನು ಹೆಗಲ ಮೇಲೆ ಹೊತ್ತು ಬಸ್ಕಿ ಹೊಡೆಯುವ ಪ್ರದರ್ಶನ ನೀಡಿದರು.
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಕರ್ನಾಟಕ ಕುಸ್ತಿ ಅಸೋಸಿಯೇಷನ್ ಕಾರ್ಯದರ್ಶಿ ಪ್ರೊ.ಕೆ.ಆರ್.ರಂಗಯ್ಯ, ಕುಸ್ತಿ ಉಪ ಸಮಿತಿ ವಿಶೇಷಾಧಿಕಾರಿ ಸ್ನೇಹಾ, ಕಾರ್ಯಾಧ್ಯಕ್ಷ ಅರುಣಾಂಶು ಗಿರಿ, ಪೈಲ್ವಾನರಾದ ಕೆಂಪೇಗೌಡ, ಅಮೃತ್ ಪುರೋಹಿತ್, ಸೋಮಣ್ಣ, ಮಲ್ಲುಸ್ವಾಮಿ, ಕೇಶವರಾಜು, ನಂಜನಗೂಡು ಸಿದ್ದರಾಜು, ರಮೇಶ್, ಬನ್ನೂರು ರವಿ ಮುಂತಾದವರು ಭಾಗವಹಿಸಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಹಾಗೂ ಕರ್ನಾಟಕ ರೆಸ್ಲಿಂಗ್ ಅಸೋಸಿಯೇಷನ್‌ನಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅ.14 ರಂದು ಪೂರ್ವಸಿದ್ಧತಾ ಜಂಬೂಸವಾರಿ:
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜಂಬೂಸವಾರಿಯನ್ನು ಕಣ್ಮುಂಬಿಕೊಳ್ಳಲು ದೇಶ, ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಬಾರಿ ಅ.14 ರಂದು ಪೂರ್ವಸಿದ್ಧತಾ ಜಂಬೂ ಸವಾರಿ ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ಅರಮನೆ ಅಂಗಳದಲ್ಲಿ 29 ಸಾವಿರ ಜನರು ಮಾತ್ರ ಕೂರಲು ಅಕಾಶವಿರುವುದರಿಂದ ಎಲ್ಲರಿಗೂ ಜಂಬೂಸವಾರಿ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಿರಾಸೆಯಾಗಬಾರದು ಎನ್ನುವ ಉದ್ದೇಶದಿಂದ ಅ.14ರಂದು ಅರಮನೆ ಅಂಗಳದಲ್ಲಿ ಜಂಬೂ ಸವಾರಿ ಉತ್ಸವ ಆಯೋಜಿಸಲಾಗಿದೆ. ಅಂಬಾರಿ, ಸ್ತಬ್ದಚಿತ್ರ ಹೊರತುಪಡಿಸಿ ಸ್ಥಳೀಯ ಕಲಾವಿದರು, ಜಾನಪದ ಕಲಾತಂಡಗಳು, ಆನೆಗಳು, ಕುದುರೆಗಳು ಮೆರವಣಿಗೆ ನಡೆಸಲಿವೆ ಎಂದರು.