‘ಪುಟ್ಟ’ ಬ್ಯಾಗ್​ಗೆ ಕೈಸುಸ್ತು

ಬೆಂಗಳೂರು: ಸಚಿವ ಪುಟ್ಟರಂಗ ಶೆಟ್ಟಿ ಕಚೇರಿ ಸಿಬ್ಬಂದಿ ವಿಧಾನಸೌಧದಲ್ಲೇ ಹಣ ಸಮೇತ ಸಿಕ್ಕಿಬಿದ್ದಿರುವ ಘಟನೆಯಿಂದ ಕಾಂಗ್ರೆಸ್​ಗೆ ಮುಜುಗರವಾದಂತಾಗಿದೆ. ಇದೇ ವೇಳೆ ಜೆಡಿಎಸ್ ಕಡೆಯಿಂದ ಪುಟ್ಟರಂಗ ಶೆಟ್ಟಿ ವಿರುದ್ಧ ವಾಗ್ದಾಳಿ ನಡೆದಿದ್ದರೆ, ಸಚಿವ ಸ್ಥಾನಕ್ಕೆ ಪುಟ್ಟರಂಗ ಶೆಟ್ಟಿ ರಾಜೀನಾಮೆ ಕೊಡಬೇಕೆಂದು ಬಿಜೆಪಿ ಒತ್ತಾಯಿಸಿದೆ. ಇಂಥ ಬೆಳವಣಿಗೆ ಪಕ್ಷಕ್ಕೆ ಹಾಗೂ ಸರ್ಕಾರ ವರ್ಚಸ್ಸಿಗೆ ಧಕ್ಕೆ ತರುತ್ತದೆ ಎಂದು ಕಾಂಗ್ರೆಸ್ ನಾಯಕರೇ ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣ ಏನೇ ಇದ್ದರೂ ಜನರಲ್ಲಿ ಸರ್ಕಾರದ ಬಗ್ಗೆ ತಪ್ಪು ಕಲ್ಪನೆ ಮೂಡುತ್ತದೆ, ಸಚಿವರಾದವರು ಇನ್ನಾದರೂ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಸರ್ಕಾರದ ತಪ್ಪುಗಳಿಗಾಗಿ ಪ್ರತಿಪಕ್ಷ ಕಾದು ಕುಳಿತಿರುವಾಗ ಆಡಳಿತ ಪಕ್ಷ ಎಡವಬಾರದು. ಇನ್ನು ಮುಂದೆ ಇಂಥ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಕರಣದ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿ, ಈಗಲೇ ಯಾರ ಮೇಲೂ ಆರೋಪ ಸರಿಯಲ್ಲ. ಪೊಲೀಸರು ಪುಟ್ಟರಂಗ ಶೆಟ್ಟಿ ಸಿಬ್ಬಂದಿಯೊಬ್ಬರಿಂದ ಹಣ ಜಪ್ತಿ ಮಾಡಿದ್ದಾರೆ. ಆದರೆ, ಆ ಹಣ ಯಾರದ್ದು ಎಂಬುದು ತನಿಖೆಯಿಂದ ಗೊತ್ತಾಗಲಿದೆ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದರು.

ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಪಿಸಿಸಿ ಕಚೇರಿಯಲ್ಲಿ ಸಾಕಷ್ಟು ಸಿಬ್ಬಂದಿ ಇದ್ದಾರೆ, ಅವರ ಬಳಿ ಹಣ ಸಿಕ್ಕರೆ ನಾನು ಹೇಗೆ ಜವಾಬ್ದಾರನಾಗುತ್ತೇನೆ ಎಂದು ಪ್ರಶ್ನಿಸಿದರು. ಯಡಿಯೂರಪ್ಪ ಮತ್ತು ಈಶ್ವರಪ್ಪ ಪಿಎಗಳು ಏನೇನು ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಆಗ ಯಡಿಯೂರಪ್ಪ, ಈಶ್ವರಪ್ಪ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟಿದ್ದರೇ? ಪ್ರಕರಣದ ಬಗ್ಗೆ ಉನ್ನತಮಟ್ಟದ ತನಿಖೆ ನಡೆಯಲಿ, ಸಚಿವರು ಅಥವಾ ಪಕ್ಷದ ಯಾರೇ ಇದರಲ್ಲಿ ಭಾಗಿಯಾಗಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

 

ವಿಧಾನಸೌಧದ ಆವರಣದಲ್ಲಿ ಹಣದ ವ್ಯವಹಾರ ಸರಿಯಲ್ಲ. ವಿಧಾನಸೌಧದ ಸಿಬ್ಬಂದಿ, ಯಾವುದೇ ರಾಜಕಾರಣಿ ನಡೆಸಿದ್ದರೂ ಅದು ಅಕ್ಷಮ್ಯ ಅಪರಾಧ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು.

| ವಿ.ಎಸ್. ಉಗ್ರಪ್ಪ, ಬಳ್ಳಾರಿ ಸಂಸದ

 

ಸಿದ್ದರಾಮಯ್ಯರನ್ನು ಟೀಕಿಸಿ ಬಿಜೆಪಿ ಟ್ವೀಟ್

ಸಿದ್ದರಾಮಯ್ಯ ಅವರೇ, ಟ್ವಿಟರ್​ನಲ್ಲಿ ಒಣ ಪೌರುಷ ತೋರಿಸುವುದನ್ನು ನಿಲ್ಲಿಸಿ. ನಿಮ್ಮ ಆತ್ಮೀಯ, ಸಚಿವ ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ 25.76 ಲಕ್ಷ ರೂ. ಸಿಕ್ಕಿದೆ. ವಿಧಾನಸೌಧದಲ್ಲೇ ದಂಧೆ ಶುರು ಮಾಡಿದ್ದೀರಿ. ಇದೇನಾ ನಿಮ್ಮ ಭ್ರಷ್ಟಮುಕ್ತ ಸರ್ಕಾರ? ಮೊದಲು ಪುಟ್ಟರಂಗಶೆಟ್ಟಿ ಅವರಿಂದ ರಾಜೀನಾಮೆ ಕೊಡಿಸಿ ನಿಮ್ಮ ಪೌರುಷ ತೋರಿಸಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಸಿಕ್ಕಿದ್ದು 1ಬ್ಯಾಗ್, ದಾಟಿದ್ದು 3 ಬ್ಯಾಗ್?

ವಿಧಾನಸೌಧದಲ್ಲಿ ಹಣ ಪತ್ತೆ ಪ್ರಕರಣದ ಸುದ್ದಿ ಶುಕ್ರವಾರ ಸೌಧದ ಕಾರಿಡಾರ್​ನಲ್ಲಿ ಬಿಸಿಬಿಸಿ ಚರ್ಚೆಗೆ ಆಹಾರವಾಗಿತ್ತು.

ಇಂಥ ಪ್ರಕರಣ ಮುಜುಗರ ತರುವಂಥದ್ದು ಎಂದು ಕೆಲವು ಸಿಬ್ಬಂದಿ ಅಭಿಪ್ರಾಯಪಟ್ಟರೆ, ಮತ್ತೆ ಕೆಲವರು ಇದು ಮಾಮೂಲಿ, ಸಿಕ್ಕಿಬಿದ್ದಿದ್ದಾರಷ್ಟೇ ಎಂದಿದ್ದಾರೆ. ಸಚಿವರು ತಪ್ಪಿಸಿಕೊಳ್ಳಲು ಮೂರನೇ ವ್ಯಕ್ತಿಯನ್ನು ಬಲಿಕೊಡಲಾಗುತ್ತದೆ. ಸಾಮಾನ್ಯ ಸಿಬ್ಬಂದಿಯೊಬ್ಬ 25 ಲಕ್ಷ ರೂ. ತರಲು ಸಾಧ್ಯವೇ ಎಂದು ಅವರದೇ ಕಚೇರಿ ಸಮೀಪದಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಸಿಬ್ಬಂದಿ ಪ್ರಶ್ನಿಸುತ್ತಾರೆ.

ಶುಕ್ರವಾರ ಕಚೇರಿಯಿಂದ ಬ್ಯಾಗ್​ನಲ್ಲಿ 25.76 ಲಕ್ಷ ರೂ. ಕೊಂಡೊಯ್ಯುವಾಗ ಸಿಕ್ಕಿಬಿದ್ದ ಮೋಹನ್ ಅದನ್ನು 4 ಗುತ್ತಿಗೆದಾರರಿಂದ ಸಂಗ್ರಹಿಸಿದ್ದ ಎಂಬ ಮಾಹಿತಿ ಇದೆ. ಹಿಂದುಳಿದ ವರ್ಗಗಳಿಂದ ಇಲಾಖೆಯ ಗುತ್ತಿಗೆ ಪಡೆದ ಚಾಮರಾಜನಗರ ಮೂಲದ ನಾಲ್ವರು ಗುತ್ತಿಗೆದಾರರಿಂದ ಈ ಹಣ ಸಂಗ್ರಹಿಸಲಾಗಿದೆ. ಇವರಿಂದ ವಿಧಾನಸೌಧದ ಸುತ್ತಮುತ್ತವೇ ಹಣ ಸಂಗ್ರಹಿಸಲಾಗಿದೆ ಎನ್ನಲಾಗಿದೆ. ಈ ಹಿಂದೆ ಸಚಿವರ ಕಚೇರಿಯಲ್ಲಿದ್ದ ಮಂಜುನಾಥ್, ಕೃಷ್ಣಪ್ಪ ಎಂಬುವವರನ್ನು ಕೆಲಸದಿಂದ ಬಿಡಿಸಲಾಗಿತ್ತು. ಅವರೇ ಶುಕ್ರವಾರ ಹಣ ಸಂಗ್ರಹಣೆ ಬಗ್ಗೆ ಮಾಹಿತಿ ಬಹಿರಂಗ ಮಾಡಿದ್ದಾರೆ ಎಂಬುದು ಮೋಹನ್ ಅನುಮಾನ. ಗುರುವಾರ ಸಂಜೆ ಸಿಕ್ಕಿದ್ದು 1 ಬ್ಯಾಗ್ ಮಾತ್ರ, ಇನ್ನೂ 3 ಬ್ಯಾಗ್ ಹಣ ಬೇರೆ ವ್ಯಕ್ತಿಗಳು ವಿಧಾನಸೌಧದಿಂದ ದಾಟಿಸಿದ್ದಾರೆ. ಮೋಹನ್ ಮಾತ್ರ ಸಿಕ್ಕಿಬಿದ್ದಿದ್ದಾರೆ ಎಂದು ವಿಧಾನಸೌಧ ಸಿಬ್ಬಂದಿಯೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.


ಹಣದ ಚೀಲ ಸಿಕ್ಕ ಪ್ರಕರಣ ಎಸಿಬಿ ತನಿಖೆಗೆ ವರ್ಗಾವಣೆ

ಬೆಂಗಳೂರು: ವಿಧಾನಸೌಧ ಪಶ್ಚಿಮದ್ವಾರದಲ್ಲಿ ಸಚಿವ ಪುಟ್ಟರಂಗ ಶೆಟ್ಟಿ ಕಚೇರಿಯ ಟೈಪಿಸ್ಟ್ ಮೋಹನ್ ಎಂಬಾತನ ಬಳಿ ಸಿಕ್ಕ 25.76 ಲಕ್ಷ ರೂ. ಹಣದ ಪ್ರಕರಣ ಶನಿವಾರ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದ್ದು, ಹೆಚ್ಚಿನ ತನಿಖೆಗಾಗಿ ಕೇಸನ್ನು ಎಸಿಬಿಗೆ ವರ್ಗಾಯಿಸಲು ಗೃಹ ಇಲಾಖೆ ತೀರ್ಮಾನಿಸಿದೆ.

ಮೋಹನ್​ನನ್ನು ವಶಕ್ಕೆ ಪಡೆದಿದ್ದ ಪೊಲೀಸರು ತಡರಾತ್ರಿವರೆಗೆ ವಿಚಾರಣೆ ನಡೆಸಿದ್ದು, ಶನಿವಾರ ಬೆಳಗ್ಗೆ ಠಾಣೆಗೆ ಹಾಜರಾದ ನಂತರ ದುಡ್ಡು ಯಾರಿಗೆ ಸೇರಿದ್ದು ಎಂಬ ಬಗ್ಗೆ ಸುದೀರ್ಘ ವಿಚಾರಣೆ ನಡೆಸಲಾಯಿತು. ವೈಯಕ್ತಿಕ ವಿಚಾರಕ್ಕೆ ಹಣ ಒಯ್ಯುತ್ತಿದ್ದೆ, ಇದು ರಾಜಕೀಯ ಮುಖಂಡರಿಗೆ ಸೇರಿದ್ದಲ್ಲ ಎಂದು ಮೋಹನ್ ಹೇಳಿಕೆ ಕೊಟ್ಟಿದ್ದಾನೆ ಎಂದು ಗೊತ್ತಾಗಿದೆ.

ಮೋಹನ್ ಸರ್ಕಾರಿ ನೌಕರನಾಗಿರುವುದರಿಂದ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಎಸಿಬಿಗೆ ವರ್ಗಾಯಿಸಲು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಸೂಚಿಸಿದ್ದಾರೆ ಎನ್ನಲಾಗಿದ್ದು, ಹಸ್ತಾಂತರ ಪ್ರಕ್ರಿಯೆ ಶುರುವಾಗಿದೆ. ಪ್ರಕರಣದಲ್ಲಿ ಪಾತ್ರವಿರುವ ಅನುಮಾನದ ಮೇರೆಗೆ ಕಾರ್ವಿುಕ ಸಚಿವ ವೆಂಕಟರಮಣಪ್ಪ ಅವರ ಪಿಎ ಕೃಷ್ಣಮೂರ್ತಿಗೆ ವಿಚಾರಣೆಗೆ ಹಾಜರಾಗುವಂತೆ ವಿಧಾನಸೌಧ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಸಚಿವರನ್ನು ಸಿಕ್ಕಿಸುವ ಸಂಚು?: ಸಚಿವ ಪುಟ್ಟರಂಗ ಶೆಟ್ಟಿ ಅವರನ್ನು ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿಸುವ ಸಂಚು ಇದಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ. ಈ ಹಿಂದೆ ಅವರ ಕಚೇರಿಯಲ್ಲಿ ಮಂಜು ಮತ್ತು ಕೃಷ್ಣ ಎಂಬುವವರು ಕೆಲಸ ಮಾಡುತ್ತಿದ್ದರು. ಅವರು ಲಂಚ ಪಡೆದು ನಡೆಸುತ್ತಿದ್ದ ಅಕ್ರಮ ಸಚಿವರ ಗಮನಕ್ಕೆ ಬಂದು ಇಬ್ಬರನ್ನೂ ಕೆಲಸದಿಂದ ತೆಗೆದಿದ್ದರು. ಈ ದ್ವೇಷದ ಹಿನ್ನೆಲೆಯಲ್ಲಿ ಅವರೇ ಸಚಿವರ ಹೆಸರಿಗೆ ಮಸಿ ಬಳಿಯಲು ಈ ಕೃತ್ಯ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.

ಸಚಿವರಿಗೆ ಏನು ಸಂಬಂಧ?

ಹುಬ್ಬಳ್ಳಿ: ವಿಧಾನಸೌಧ ಬಳಿ ಶುಕ್ರವಾರ ಜಪ್ತಿ ಮಾಡಲಾದ 25 ಲಕ್ಷ ರೂ. ಪ್ರಕರಣದ ಬಗ್ಗೆ ಸಂಬಂಧಪಟ್ಟವರು ಹೇಳಿಕೆ ಕೊಡುತ್ತಾರೆ. ಸಚಿವರ ಕಚೇರಿಯಲ್ಲಿ ಪಿಎ, ಸಿಬ್ಬಂದಿ, ಡ್ರೖೆವರ್ ಇರುತ್ತಾರೆ. ಅವರಲ್ಲಿ ಯಾರಾದರೂ ಈ ರೀತಿ ಮಾಡಿದರೆ ಸಚಿವರಿಗೇನು ಸಂಬಂಧ ಎಂದು ಗೃಹಸಚಿವ ಎಂ.ಬಿ. ಪಾಟೀಲ ಪ್ರಶ್ನಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಹಣ ಯಾರದ್ದು, ಹೇಗೆ ಬಂತು? ಎಂಬ ತನಿಖೆ ನಡೆಯುತ್ತಿದೆ ಎಂದರು.