ಡಿಕೆಶಿ ಬೇನಾಮಿ ಆಸ್ತಿ ಅಂತಿಮ ವರದಿ ಸಿದ್ಧ

ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್ ನಿವಾಸ-ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಕೈಗೊಂಡ ತನಿಖೆ ಮುಕ್ತಾಯ ಹಂತದಲ್ಲಿದ್ದು, ಐಟಿ ಅಧಿಕಾರಿಗಳು ಅಂತಿಮ ವರದಿ ಸಿದ್ಧಪಡಿಸುತ್ತಿದ್ದಾರೆ.

2017ರ ಆ. 2ರಂದು ಸಚಿವ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದಲ್ಲಿರುವ ನಿವಾಸ ಸೇರಿ ಅವರ ಒಡೆತನದ ಅನೇಕ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ರ, ದಾಖಲೆ ವಶಪಡಿಸಿಕೊಂಡಿದ್ದರು. ಸಚಿವರು ವ್ಯವಹಾರ ನಡೆಸಿದವರ ನಿವಾಸ-ಕಚೇರಿ ಮೇಲೂ ದಾಳಿ ನಡೆಸಿ ಪ್ರಕರಣಕ್ಕೆ ಸಂಬಂಧಿತ ಮಹತ್ವದ ದಾಖಲೆ ವಶಕ್ಕೆ ಪಡೆದಿದ್ದಾರೆ.

ಒಂದೂವರೆ ವರ್ಷದಿಂದ ಐಟಿ ತನಿಖಾಧಿಕಾರಿಗಳು ಡಿಕೆಶಿ ಆಸ್ತಿ, ವ್ಯವಹಾರ, ಬ್ಯಾಂಕ್ ಖಾತೆ ದಾಖಲೆಗಳನ್ನು ಪರಿಶೀಲಿಸುತ್ತಿದ್ದರು. ಇದೀಗ ಪರಿಶೀಲನೆ ಮುಕ್ತಾಯಗೊಂಡಿದ್ದು, ಫೆಬ್ರವರಿಯಲ್ಲಿ ಅಂತಿಮ ವರದಿ ಸಿದ್ಧಪಡಿಸಲಿದ್ದಾರೆ. ಅದನ್ನು ಗಮನಿಸಿ ಹಿರಿಯ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಐಟಿ ತನಿಖಾಧಿಕಾರಿಗಳು ಹಂತ ಹಂತವಾಗಿ ನಡೆಸಿದ ತನಿಖೆಯ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಸಚಿವರು ಐಟಿ ಕಾಯ್ದೆ ಉಲ್ಲಂಘಿಸಿರುವುದು ಕಂಡು ಬಂದಿದ್ದು, ಈಗಾಗಲೇ ಹಲವು ಬಾರಿ ಸಚಿವರ ವಿಚಾರಣೆ ನಡೆಸಿ, ಅಘೋಷಿತ ಆಸ್ತಿಗೆ ಸಂಬಂಧಿಸಿದ ಕೆಲ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಡಿಕೆಶಿ 402 ಕೋಟಿ ರೂ.ಗೂ ಅಧಿಕ ಪ್ರಮಾಣದಲ್ಲಿ ಅಘೋಷಿತ ಆಸ್ತಿ ಹೊಂದಿರುವುದು ಐಟಿ ತನಿಖೆಯಲ್ಲಿ ದೃಢಪಟ್ಟಿದೆ ಎನ್ನಲಾಗಿದೆ.

ಕೋಟ್ಯಂತರ ರೂ. ಬೇನಾಮಿ ಆಸ್ತಿ: ಡಿಕೆಶಿ ತಮ್ಮ ಸಂಬಂಧಿಕರ ಹೆಸರಿನಲ್ಲಿ, ವಿವಿಧ ಸಂಸ್ಥೆಗಳ ವ್ಯವಹಾರದಲ್ಲಿ ಕೋಟ್ಯಂತರ ರೂ. ಬಂಡವಾಳ ಹೂಡಿರುವುದು ಮತ್ತು ಕೋಟ್ಯಂತರ ರೂ. ಬೆಲೆ ಬಾಳುವ ಬೇನಾಮಿ ಆಸ್ತಿ ಹೊಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ವಿರುದ್ಧ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸದ್ಯದಲ್ಲೇ ಬೇನಾಮಿ ಆಸ್ತಿ ವಿಚಾರಣಾ ನ್ಯಾಯಾಧೀಕರಣಕ್ಕೆ ಐಟಿ ಅಧಿಕಾರಿಗಳು ವರದಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ದಾಖಲಿತ ಪ್ರಕರಣ

ಆದಾಯ ತೆರಿಗೆ ಕಾಯ್ದೆ (ಐಟಿ) ಸೆಕ್ಷನ್ 120(ಬಿ) ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ 277, 276ಸಿ(1), 278, 193, 199ರ ಪ್ರಕಾರವೂ ಪ್ರಕರಣ ದಾಖಲಿಸಿಕೊಳ್ಳಲು ಐಟಿ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.

ಜಾರಿ ನಿರ್ದೇಶನಾಲಯ ಸಂಕಷ್ಟ

ಮತ್ತೊಂದೆಡೆ ಸಚಿವರಿಗೆ ಜಾರಿ ನಿರ್ದೇಶನಾಲಯದ ಸಂಕಷ್ಟ ಎದುರಾಗಿದ್ದು, ಡಿ.ಕೆ. ಶಿವಕುಮಾರ್ ಒಡೆತನದ ದೆಹಲಿ ಅಪಾರ್ಟ್​ವೆುಂಟ್​ವೊಂದರ ಪ್ಲ್ಯಾಟ್​ನಲ್ಲಿ 8.57 ಕೋಟಿ ರೂ. ಪತ್ತೆಯಾದ ಪ್ರಕರಣದಲ್ಲಿ ಸ್ಪಷ್ಟೀಕರಣ ನೀಡುವಂತೆ ಇ.ಡಿ. ಈಗಾಗಲೇ ನೋಟಿಸ್ ನೀಡಿದೆ. ಫೆಮಾ (ಫಾರಿನ್ ಎಕ್ಸ್​ಚೇಂಜ್ ಮ್ಯಾನೇಜ್​ವೆುಂಟ್ ಆಕ್ಟ್), ಪಿಎಮ್​ಲ್ಎ (ಪ್ರಿವೆನ್ಷನ್ ಆಫ್ ಮನಿ ಲ್ಯಾಂಡರಿಂಗ್ ಆಕ್ಟ್) ಕಾಯ್ದೆ ಉಲ್ಲಂಘಿಸಿರುವುದು ಕಂಡು ಬಂದರೆ ಅಂಥ ಪ್ರಕರಣಗಳನ್ನು ಇ.ಡಿ ಅಧಿಕಾರಿಗಳು ತನಿಖೆ ನಡೆಸುತ್ತಾರೆ. ಸಚಿವ ಡಿಕೆಶಿ ಈ ಕಾಯ್ದೆ ಉಲ್ಲಂಘಿಸಿ ವ್ಯವಹಾರ ನಡೆಸಿದ ಹಿನ್ನೆಲೆಯಲ್ಲಿ ಇವರ ವಿರುದ್ಧ ಇ.ಡಿ.ಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.