ರಿಪೋರ್ಟ್ ಕಾರ್ಡ್ ಕೊಡಿ: ನಳಿನ್‌ಗೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಸವಾಲ್

ಮಂಗಳೂರು: ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ 10 ವರ್ಷಗಳಲ್ಲಿ ಮಾಡಿರುವ ಸಾಧನೆಯ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿ ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.

ದ.ಕ ಜಿಲ್ಲೆಯ ಅಭಿವೃದ್ಧಿಗೆ ವಿಪುಲ ಅವಕಾಶವಿದ್ದರೂ ನಳಿನ್ ನಿರ್ಲಕ್ಷೃ ವಹಿಸಿದ್ದರು. ಜಿಲ್ಲೆಗೆ ಹೊಸ ಯೋಜನೆ ತಂದಿಲ್ಲ. ಇಲ್ಲಿನ ಯುವಕರು ಉದ್ಯೋಗವಿಲ್ಲದೆ ವಲಸೆ ಹೋಗುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರನ್ನು ಗೆಲ್ಲಿಸುವ ಮೂಲಕ ಪಾರ್ಲಿಮೆಂಟ್‌ನಲ್ಲಿ ಜಿಲ್ಲೆಯ ಸಮಸ್ಯೆಗಳಿಗೆ ಧ್ವನಿ ಎತ್ತುವಂತೆ ಮಾಡಬೇಕು ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಜಯ ಬ್ಯಾಂಕ್ ವಿಲೀನವನ್ನು ಕರಾವಳಿಯ ಬಿಜೆಪಿಯ ಸಂಸದರು, ಸಚಿವರು ವಿರೋಧಿಸಿಲ್ಲ. ಈಗ ಜಿಲ್ಲೆಯ ಜನತೆ ಬದಲಾವಣೆ ಬಯಸಿದ್ದಾರೆ. ಹನುಮಂತನ ಭಕ್ತ, ಹಿಂದು ಸಂಸ್ಕೃತಿ ಮತ್ತು ಜಾತ್ಯತೀತ ತತ್ವದಲ್ಲಿ ಅಪಾರ ನಂಬಿಕೆಯುಳ್ಳ ಮಿಥುನ್‌ರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ಮಾಡಿ ತೋರಿಸಲಿದ್ದಾರೆ ಎಂದರು.

ಮಿಥುನ್ ರೈ ಅಂತಹ ಹೃದಯ ವೈಶಾಲ್ಯವಿರುವ ಯುವಕನನ್ನು ಗೆಲ್ಲಿಸುವ ಮೂಲಕ ಬಿಜೆಪಿಯ ಸೋಲಿಗೆ ಮಂಗಳೂರಿನಿಂದಲೇ ಮುನ್ನುಡಿ ಬರೆಯಬೇಕಾಗಿದೆ. ಸತತ 28 ವರ್ಷದಿಂದ ಬಿಜೆಪಿ ತೆಕ್ಕೆಯಲ್ಲಿರುವ ಈ ಕ್ಷೇತ್ರವನ್ನು ಬಿಡಿಸಿಕೊಳ್ಳಲು ಮತದಾರರು ಮುಕ್ತ ಮನಸ್ಸು ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ಮೊದೀನ್ ಬಾವಾ, ಕಾಂಗ್ರೆಸ್ ನಾಯಕರಾದ ಇಬ್ರಾಹಿಂ ಕೋಡಿಜಾಲ್, ಭಾಸ್ಕರ್ ಮೊಯ್ಲಿ, ಮಹಾಬಲ ಮಾರ್ಲ, ಶಶಿಧರ ಹೆಗ್ಡೆ, ನವೀನ್ ಡಿಸೋಜ, ಸಂತೋಷ್ ಶೆಟ್ಟಿ, ಎ.ಸಿ.ವಿನಯರಾಜ್, ಎ.ಸಿ.ಭಂಡಾರಿ, ಉಪಸ್ಥಿತರಿದ್ದರು.

ಮಂಗಳೂರು ವಿಮಾನ ನಿಲ್ದಾಣ ಇಳಿದಾಗ ಅಧಿಕಾರಿಗಳು ಕಾರು, ಜೇಬು ತಪಾಸಣೆ ಮಾಡಿದರು. ಅದೇ ಕೇಂದ್ರ ಸಚಿವ ಸುರೇಶ್ ಪ್ರಭು ಅವರನ್ನು ತಪಾಸಣೆ ಮಾಡಿಲ್ಲ. ಇದು ಅಧಿಕಾರಿಗಳಿಗೆ ನಮ್ಮ ಮೇಲೆ ಇರುವ ಪ್ರೀತಿಗೆ ಸಾಕ್ಷಿ.
|ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಮುಖಂಡ