ಉಡುಪಿ ಬಸ್‌ನಿಲ್ದಾಣ 18 ತಿಂಗಳಲ್ಲಿ ಸಿದ್ಧ

ಉಡುಪಿ: 31.34 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಉಡುಪಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿ 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಭರವಸೆ ನೀಡಿದರು.

ಶುಕ್ರವಾರ ನಗರದ ಬನ್ನಂಜೆಯಲ್ಲಿ ನಿರ್ಮಾಣ ಕಾಮಗಾರಿ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಸ್ ನಿಲ್ದಾಣ ಕಟ್ಟಡದಲ್ಲಿ 2 ಮಹಡಿ ವಾಣಿಜ್ಯ ಸಂಕೀರ್ಣ ಇರಲಿದ್ದು, ಮಲ್ಟಿಪ್ಲೆಕ್ಸ್‌ಗೂ ಯೋಜನೆಯಲ್ಲಿ ಅವಕಾಶ ಇಡಲಾಗಿದೆ. ಕಾಮಗಾರಿ ಗುಣಮಟ್ಟದಿಂದ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಉಡುಪಿ ಡಿಪೊ ಆವರಣದಲ್ಲಿ ಡಾಂಬರು ಬದಲು 1 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ಅಳವಡಿಸಲಾಗುವುದು. ನಗರ ಸಾರಿಗೆ ಬಸ್ ನಿಲ್ದಾಣವನ್ನು 4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈಗಾಗಲೇ ಶೇ.70 ಕಾಮಗಾರಿ ಮುಗಿದಿದೆ. ಒಟ್ಟು 45 ಕೋಟಿ ರೂ. ಅನುದಾನವನ್ನು ಉಡುಪಿ ಜಿಲ್ಲೆಗೆ ತಂದಿದ್ದೇವೆ ಎಂಬ ಮಾಹಿತಿ ನೀಡಿದರು.

ಹೊಸದಾಗಿ ನಿರ್ಮಿಸಲಾದ ತಾಲೂಕುಗಳಲ್ಲಿ ಸರ್ಕಾರಿ ಕಚೇರಿಗಳ ಸಮೀಪವೇ ಬಸ್‌ಸ್ಟಾಂಡ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದರು.

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ದೀಪಕ್ ಕುಮಾರ್, ವಿಭಾಗೀಯ ಸಂಚಾರ ನಿಯಂತ್ರಕ ಜೈಶಾಂತ್, ಉಡುಪಿ ಆರ್‌ಟಿಒ ರಮೇಶ್ ವರ್ಣೇಕರ್ ಉಪಸ್ಥಿತರಿದ್ದರು.

ಆರ್‌ಟಿಒ ನೇರ ನೇಮಕಾತಿ ಜನವರಿಯಲ್ಲಿ ಚಾಲನೆ: ಆರ್‌ಟಿಒ, ಬ್ರೇಕ್ ಇನ್ಸ್‌ಪೆಕ್ಟರ್ ಹುದ್ದೆ ಸೇರಿದಂತೆ ಸಾರಿಗೆ ಇಲಾಖೆಯಲ್ಲಿ ಇನ್ನಿತರ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆಗೆ ಜನವರಿಯಿಂದ ಚಾಲನೆ ಕೊಡುತ್ತೇವೆ ಎಂದು ಸಚಿವ ತಮ್ಮಣ್ಣ ತಿಳಿಸಿದರು.
ನ್ಯಾಯಾಲಯ ಮತ್ತು ಕೆಪಿಎಸ್‌ಸಿಯಲ್ಲಿ ಆರ್‌ಟಿಒ ಮತ್ತು ಬ್ರೇಕ್ ಇನ್ಸ್‌ಪೆಕ್ಟರ್ ಹುದ್ದೆ ನೇಮಕಾತಿ ಸಂಬಂಧ ಕಾನೂನು ತೊಡಕುಗಳನ್ನು ನಿವಾರಿಸಲಾಗುವುದು. ಜನವರಿಯಲ್ಲಿ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಸಾರಿಗೆ ಇಲಾಖೆೆ ಮೂಲಕವೇ ನೇಮಕಾತಿ ನಡೆಸಲಾಗುವುದು. ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರಿಗೆ ಸಮರ್ಪಕ ಸೇವೆ ಲಭ್ಯವಾಗುತ್ತಿಲ್ಲ. ಮೂರ್ನಾಲ್ಕು ಮಂದಿ ಮಾಡುವ ಕೆಲಸವನ್ನು ಒಬ್ಬರು ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಕುಂದಾಪುರ ಡಿಪೋ ಮರುನಿರ್ಮಾಣ: ಕುಂದಾಪುರ ಕೆಎಸ್‌ಆರ್‌ಟಿಸಿ ಬಸ್ ಡಿಪೊ ಸಾಕಷ್ಟು ವರ್ಷಗಳಿಂದ ಅಭಿವೃದ್ಧಿಯಾಗಿಲ್ಲ ಎನ್ನುವುದು ಗಮನಕ್ಕೆ ಬಂದಿದ್ದು, ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 4.5 ಕೋಟಿ ರೂ. ವೆಚ್ಚದಲ್ಲಿ ಡಿಪೊ ಮರುನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಡಿಪೊಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ತಿಳಿಸಿದ್ದಾರೆ. ಬೈಂದೂರಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ಕಾಮಗಾರಿ ಹಿಂದೆ ಗುರುತಿಸಿರುವ ಜಾಗದಲ್ಲೇ ನಿರ್ಮಾಣವಾಗಲಿದ್ದು, ಅದರ ಮೇಲ್ಭಾಗದಲ್ಲಿ ವಿವಿಧ ಸರ್ಕಾರಿ ಕಚೇರಿಗಳು ಕೆಲಸ ನಿರ್ವಹಿಸಲಿವೆ. ಒಂದು ವರ್ಷದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದರು. ಮಂಗಳೂರು ವಿಮಾನ ನಿಲ್ದಾಣದಿಂದ ಭಟ್ಕಳಕ್ಕೆ ಸರ್ಕಾರಿ ಬಸ್ ಸಂಚಾರಕ್ಕೆ ಅನುಮತಿ ಲಭಿಸಿದೆ. ವೇಳಾಪಟ್ಟಿ ನಿಗದಿಯಾಗಿಲ್ಲ. ಆರ್‌ಟಿಒ ಪರವಾನಗಿ ಕೊಟ್ಟ ಬಳಿಕ ಬಸ್ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ತಿಳಿಸಿದರು.

ಕೊಲ್ಲೂರಿಗೆ ಭೇಟಿ: ಸಚಿವ ಡಿ.ಸಿ ತಮ್ಮಣ್ಣ ಶುಕ್ರವಾರ ಬೆಳಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿದರು.