ಅಂಬರೀಷ್ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ನಿಖಿಲ್​ಗೆ ಆಶೀರ್ವಾದ ಮಾಡಿ ಗೆಲ್ಲಿಸಿ: ಡಿಕೆಶಿ

ಮಂಡ್ಯ: ದಿವಂಗತ ನಟ ಅಂಬರೀಷ್​ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ನೀವೆಲ್ಲಾ ಮೈತ್ರಿ ಸರ್ಕಾದ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಅವರಿಗೆ ಆಶೀರ್ವಾದ ಮಾಡಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್​ ಅವರು ತಿಳಿಸಿದರು.

ನಿಖಿಲ್​ ಕುಮಾರಸ್ವಾಮಿ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ವನ ಬಳಿ ನಡೆದ ಮೈತ್ರಿ ಸರ್ಕಾರದ ಬೃಹತ್​​ ಸಮಾವೇಶದಲ್ಲಿ ಮತದಾರರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಎಲ್ಲರೂ ಚರ್ಚೆ ಮಾಡಿ ಸರ್ಕಾರ ರಚಿಸಿದ್ದೇವೆ
ನಮ್ಮನ್ನು ಸಿಎಂ ಮಾಡಿ ಎಂದು ಕುಮಾರಸ್ವಾಮಿ ಅವರು ಕೇಳಿರಲಿಲ್ಲ. ನಮಗೆ ಬೆಂಬಲ ನೀಡಿ ಎಂದು ಎಚ್​ಡಿಡಿ ಅವರು ಕರೆದಿರಲಿಲ್ಲ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಖರ್ಗೆ, ನಾನು ಮತ್ತು ಪರಮೇಶ್ವರ್ ಚರ್ಚೆ ಮಾಡಿ, ನಾವೆಲ್ಲ ಒಟ್ಟಾಗಿ ಸೇರಿ ಸರ್ಕಾರ ರಚನೆ ಮಾಡಿದ್ದೇವೆ. ಒಗ್ಗಟ್ಟಿನಿಂದ ರಾಜ್ಯದಲ್ಲಿ ಆಡಳಿತ ಮಾಡುತ್ತಿದ್ದೇವೆ ಎಂದರು.

ಉಪಚುನಾವಣೆ ರೀತಿಯಲ್ಲೇ ನಮ್ಮ ಗೆಲುವು
ಉಪಚುನಾವಣೆಯಲ್ಲಿ ಶಿವರಾಮೇಗೌಡರನ್ನು ಅಭ್ಯರ್ಥಿ ಮಾಡಿದ್ವಿ, ಅವರು ಗೆದ್ದರು. ರಾಮನಗರ, ಬಳ್ಳಾರಿ, ಮಂಡ್ಯ, ಜಮಖಂಡಿ ಹಾಗೂ ಶಿವಮೊಗ್ಗದಲ್ಲಿ ಒಗ್ಗಟ್ಟಾಗಿ ಚುನಾವಣೆ ನಡೆಸಿದೆವು. ಶಿವಮೊಗ್ಗ ಬಿಟ್ಟು ಎಲ್ಲೆಡೆ ಚುನಾವಣೆಯನ್ನು ಗೆದ್ದೆವು. ರಾಮನಗರದಲ್ಲಿ ಹೆಚ್ಚು ಮತಗಳಿಂದ ಅನಿತಾ, ಬಳ್ಳಾರಿಯಲ್ಲಿ 2.43 ಲಕ್ಷ ಮತಗಳ ಅಂತರದಿಂದ ಉಗ್ರಪ್ಪ ಅವರು ಆಯ್ಕೆ ಆದರು ಎಂದು ತಿಳಿಸಿದರು.

ಮಂಡ್ಯದ ಋಣ ತೀರಿಸಲು ನಿಖಿಲ್ ಸ್ಪರ್ಧೆ ಮಾಡುತ್ತಿದ್ದಾರೆ
ಮಂಡ್ಯವನ್ನು ನಾವು ಜೆಡಿಎಸ್​ಗೆ ಬಿಟ್ಟು ಕೊಟ್ಟಿದ್ದೇವೆ. ಈಗಾಗಲೇ ನಮ್ಮ ಸರ್ಕಾರ ನೀರಾವರಿಗಾಗಿ 6000 ಕೋಟಿ ರೂ. ಹಣವನ್ನು ಕೊಟ್ಟಿದೆ. ಹೀಗಾಗಿ ಮಂಡ್ಯದ ಋಣ ತೀರಿಸಲು ನಿಖಿಲ್ ಸ್ಪರ್ಧೆ ಮಾಡುತ್ತಿದ್ದಾರೆ. ನಿಖಿಲ್​ಗೆ ಆಶೀರ್ವಾದ ಮಾಡಲು ನಾವು ಬಂದಿದ್ದೇವೆ. ದೇಶದ ಶಾಂತಿ, ಐಕ್ಯತೆ, ಸಮಗ್ರತೆಗಾಗಿ ಚುನಾವಣೆ ನಡೆಯುತ್ತಿದೆ. ಇಲ್ಲಿ ನಿಖಿಲ್​ ಹಾಗೂ ಸುಮಲತಾ ವಿರುದ್ಧ ಚುನಾವಣೆ ನಡೆಯುತ್ತಿಲ್ಲ. ಮೋದಿ, ಯಡಿಯೂರಪ್ಪ ಹಾಗೂ ದೇವೇಗೌಡರ ನಡುವೆ ಚುನಾವಣೆ ನಡೆಯುತ್ತಿದೆ ಎಂದು ವಿಶ್ಲೇಷಿಸಿದರು.

ಮಂಡ್ಯದಲ್ಲಿ ತಂತ್ರ, ಕುತಂತ್ರಗಳು ನಡೆಯುವುದಿಲ್ಲ
ಈ ಚುನಾವಣೆಗೆ ಪ್ರಜ್ಞಾವಂತಿಕೆ ಇರಬೇಕು. ಮಂಡ್ಯದಲ್ಲಿ ತಂತ್ರ, ಕುತಂತ್ರಗಳು ನಡೆಯುವುದಿಲ್ಲ. ನಿಮ್ಮ ಹೆಣ ಹೊರುವವರೂ ನಾವೇ, ಪಲ್ಲಕ್ಕಿ ಹೊರುವವರೂ ನಾವೇ. ಕುಮಾರಸ್ವಾಮಿ ಸರ್ಕಾರ ರಾಜ್ಯಕ್ಕೆ ಬೇಕು ಎಂದು ಅಂಬಿ ಹೇಳಿದ್ದರು. ಮಂಡ್ಯಕ್ಕೆ ಅಂಬರೀಷ್​ ಪಾರ್ಥಿವ ಶರೀರವನ್ನು ತರುವುದು ಬೇಡ ಎಂದಿದ್ದರು. ಆದರೆ, ತಂದಿದ್ದು ಕುಮಾರಸ್ವಾಮಿ, ಅಂಬರೀಷ್ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ನಿಖಿಲ್​ಗೆ ಆಶೀರ್ವಾದ ಮಾಡಿ ಎಂದು ತಿಳಿಸಿದರು.

ಅಂಬರೀಷ್​ ಕೂಡ ಆಶೀರ್ವಾದ ಮಾಡಿದ್ದರು
ನಾನು ಮತ್ತು ಕುಮಾರಸ್ವಾಮಿ ಅವರು ಬೇಕಾದಷ್ಟು ಜಗಳ ಮಾಡಿದ್ದೇವೆ. ಆದರೆ ರಾಜ್ಯ, ರೈತ ಹಾಗೂ ಬಡವರ ಬೆಂಬಲಕ್ಕೆ ನಿಲ್ಲಬೇಕು ಎಂಬ ಉದ್ದೇಶದಿಂದ ಕುಮಾರಸ್ವಾಮಿ ಸರ್ಕಾರ ಇರಬೇಕೆಂದು ನಾನು ಮತ್ತು ಸಿದ್ದರಾಮಯ್ಯ ಅವರು ಅರ್ಜಿ ತೆಗೆದುಕೊಂಡು ಹೋಗಿ ರಾಜ್ಯಪಾಲರಿಗೆ ಕೊಟ್ಟೆವು. ಅಂಬರೀಷ್​ ಅವರು ಕೂಡ ಕುಮಾರಸ್ವಾಮಿ ಅವರಿಗೆ ಆಶೀರ್ವಾದ ಮಾಡಿದ್ದರು ಎಂದರು.

ಸುಮಲತಾಗೆ ಹಿಂದಿನಿಂದ ಕೀ ಕೊಡುತ್ತಿದ್ದಾರೆ
ನನ್ನನ್ನು ಮತ್ತು ಸಿದ್ದರಾಮಯ್ಯರನ್ನು ಸುಮಲತಾ ಭೇಟಿ ಮಾಡಿದ್ದರು. ಮಂಡ್ಯ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟು ಕೊಟ್ಟಿದ್ದೇವೆ. ಮೈಸೂರು ಅಥವಾ ಬೇರೆ ಕಡೆ ಸ್ಪರ್ಧೆ ಮಾಡಿ ಎಂದು ಹೇಳಿದ್ದೆವು. ಎಂಎಲ್​ಸಿ ಮಾಡುತ್ತೇವೆ ಎಂದೂ ಸಹ ಹೇಳಿದ್ದೆವು. ಸುಮಲತಾಗೆ ಯಾರೋ ಹಿಂದಿನಿಂದ ಕೀ ಕೊಡುತ್ತಿದ್ದಾರೆ. ಮಂಡ್ಯದಿಂದ ಇಂಡಿಯಾವರೆಗೂ ರಾಜಕಾರಣ ಮಾಡಬಹುದು. ಆದರೆ, ಮಂಡ್ಯದವರು ಸ್ವಾಭಿಮಾನ ಮತದಾರರು ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)