ವರಿಷ್ಠರ ಸೂಚನೆ ಮೇರೆಗೆ ಬಾಯಿ ಮುಚ್ಚಿಕೊಂಡಿದ್ದೇನೆ: ಸಚಿವ ಡಿ.ಕೆ.ಶಿವಕುಮಾರ್

ಮದ್ದೂರು: ಪಕ್ಷದ ಬಗ್ಗೆ ಮಾತನಾಡದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಹಾಗಾಗಿ ಬಾಯಿಮುಚ್ಚಿಕೊಂಡು ಇದ್ದೇನೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದರು.

ಸೋಮವಾರ ಎಸ್.ಎಂ.ಶಂಕರ್ ಅವರ ಸೋಮನಹಳ್ಳಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಬಾರದು ಎಂಬ ಹಿನ್ನೆಲೆಯಲ್ಲಿ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡಿದ್ದೇನೆ. ನೀವು ಕೂಡ ಒಂದು ಪ್ಲಾಸ್ಟರ್ ಕೊಟ್ಟರೆ ಅದನ್ನು ಹಾಕಿಕೊಳ್ಳುತ್ತೇನೆ ಎಂದು ತಮಾಷೆ ಮಾಡಿದರು.

ಶ್ರೀರಾಮುಲು ಅವರು ಡಿ.ಕೆ.ಶಿವಕುಮಾರ್ ಎಲ್ಲಿದ್ದೀಯಪ್ಪ ಎಂದಿರುವ ಟ್ವೀಟ್ ಮಾಡಿ ಸರ್ಕಾರ ಪತನವಾಗಲು ಕಾರಣ ಎಂದಿರುವ ಪ್ರಶ್ನೆಗೆ, ಶ್ರೀರಾಮುಲು ಅಣ್ಣನವರಿಗೆ ಮುಂದೆ ಉತ್ತರ ನೀಡುತ್ತೇನೆ ಎಂದರು.

ಬೆಳೆಗಳಿಗೆ ನೀರು ಹರಿಸುವಂತೆ ರೈತ ಸಂಘ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಗಮನ ಸೆಳೆದಾಗ ಕಾವೇರಿ ನೀರನ್ನು ಹರಿಸುವ ಅಧಿಕಾರ ನಮ್ಮ ಅಧಿಕಾರಿಗಳಿಗೆ ಇಲ್ಲ. ಈ ಸಂಬಂಧ ಜೂನ್ 25ರಂದು ಸಭೆ ಕರೆದಿದ್ದು, ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಕಳೆದ ತಿಂಗಳು ತಮಿಳುನಾಡಿಗೆ ಹರಿಸಬೇಕಾದ ನೀರನ್ನು ಮಳೆ ಕೊರತೆಯಿಂದ ನೀರು ಹರಿಸಿಲ್ಲ. ಅಲ್ಲಿನ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ ಹಾಗೂ ಇಲ್ಲಿ ನಮ್ಮ ರೈತರು ನೀರು ಬೇಕು ಎಂದು ಒತ್ತಾಯ ಮಾಡುತ್ತಿರುವುದರಿಂದ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರೈತರು ಮೊದಲಿನಂತೆ ಇಷ್ಟ ಬಂದ ರೀತಿಯಲ್ಲಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಮಳೆಯ ಕೊರತೆ. ಕಟ್ಟೆಯಲ್ಲಿರುವ ನೀರನ್ನು ಕುಡಿಯಲು ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ದಿ.ಎಸ್.ಎಂ.ಶಂಕರ್ ಪುತ್ರ ಎಸ್. ಗುರುಚರಣ್, ಪತ್ನಿ ನಾಗಮ್ಮ, ಸೊಸೆ ಶ್ರುತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ತಾಪಂ ಸದಸ್ಯ ಕೆ.ಆರ್.ಮಹೇಶ ಮುಖಂಡರಾದ ಸಂದರ್ಶ, ಅಮರ್ ಬಾಬು, ಕೃಷ್ಣ, ಜಯರಾಮು, ಪ್ರಸನ್ನ ಇದ್ದರು.

Leave a Reply

Your email address will not be published. Required fields are marked *