ಚಿಕ್ಕಮಗಳೂರು: ಸರ್ಕಾರ ಜಾನಪದ ಜಾತ್ರೆಗೆ ಮೀಸಲಿರಿಸಿರುವ ಅನುದಾನವನ್ನು ಜಿಲ್ಲಾ ಉತ್ಸವಕ್ಕೆ ಬಳಸಲಾಗುತ್ತಿದೆಯೇ ವಿನಃ ಯಾವುದೇ ಅಭಿವೃದ್ಧಿ ಅನುದಾನ ಬಳಸಿಕೊಳ್ಳುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.
ಜಿಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಉತ್ಸವ ಉಪ ಸಮಿತಿಗಳ ಕಾರ್ಯ ಪ್ರಗತಿ ಮತ್ತು ಜಿಪಂ, ತಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಒಳಗೊಂಡಂತೆ ಜಿಲ್ಲಾ ಉತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಜಾನಪದ ಜಾತ್ರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 30 ಲಕ್ಷ ರೂ. ಬಳಕೆ ಮಾಡಬಹುದು. ನಾನೇ ಆ ಇಲಾಖೆ ಸಚಿವರಾದ್ದರಿಂದ 77 ಲಕ್ಷ ರೂ. ಅನುದಾನ ಒದಗಿಸುತ್ತಿದ್ದು, ಪ್ರವಾಸೋದ್ಯಮ ಇಲಾಖೆ ಉತ್ಸವಕ್ಕೆ ವಿನಿಯೋಗಿಸುವ ಅನುದಾನ ಬಳಸಿಕೊಳ್ಳಲಾಗುತ್ತಿದೆ. ಜಿಲ್ಲಾ ಉತ್ಸವಕ್ಕೆ 50 ಲಕ್ಷ ರೂ. ಅನುದಾನ ಲಭ್ಯವಿದೆ. ಒಟ್ಟು ಸುಮಾರು 2.60 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಜಿಲ್ಲಾ ಉತ್ಸವ ಯಶಸ್ವಿಯಾಗಲು ನಾಡಿನ ಸಂಸ್ಕೃತಿ, ಕಲೆ ಹಾಗೂ ಈ ರೀತಿ ಉತ್ಸವಗಳ ಆಯೋಜನೆಯಲ್ಲಿ ಹೆಚ್ಚಿನ ಅನುಭವವಿರುವ ಆಳ್ವಾಸ್ ಶಿಕ್ಷಣ ಸಂಸ್ಥೆ ಡಾ. ಮೋಹನ್ ಆಳ್ವಾ ಅವರ ಮಾರ್ಗದರ್ಶನ ಪಡೆಯಲಾಗಿದೆ. ಸಾಂಸ್ಕೃತಿಕ ಲೋಕ ಬಲಪಡಿಸಲು, ಅದರ ಬೇರುಗಳನ್ನು ಆಳವಾಗಿ ಇಳಿಸಲು ಚಿಂತನೆ ನಡೆಸಲಾಗಿದೆ ಎಂದರು.
ಉತ್ಸವದಲ್ಲಿ ಎಲ್ಲ ಸಮುದಾಯಗಳು, ಸಂಘ-ಸಂಸ್ಥೆಗಳು ಕೈಜೋಡಿಸಬೇಕು. ಆಯಾ ಪ್ರಾದೇಶಿಕ ಕಲೆ ಹಾಗೂ ಆಹಾರದ ಪರಿಚಯ ಈ ಜಿಲ್ಲೆಯ ಜನರಿಗೆ ಉತ್ಸವದ ಮೂಲಕ ಆಗಬೇಕಿದೆ. ಉತ್ಸವದಲ್ಲಿ 3500ಕ್ಕೂ ಹೆಚ್ಚು ವೇಷಧಾರಿ ಕಲಾವಿದರ ಮೆರವಣಿಗೆ ನಡೆಯಲಿದೆ. ರಾಜ್ಯದ ಅತ್ಯಂತ ಉತ್ಕೃಷ್ಟ ದರ್ಜೆಯ ಜಾನಪದ ತಂಡಗಳು, ಸುಗಮ ಸಂಗೀತದ ದಿಗ್ಗಜರು ಪಾಲ್ಗೊಳ್ಳಲಿದ್ದು, ಜಿಲ್ಲೆಯ ಎಲ್ಲ ರೀತಿಯ ಪ್ರತಿಭೆಗಳಿಗೂ ಅವಕಾಶವಿದೆ. ಚಿತ್ರಕಲಾ ಪರಿಷತ್ ಸಹ ಇಲ್ಲಿ ಕಲೆಯ ವೈಶಿಷ್ಟ್ಯೆ ಪರಿಚಯಿಸಲಿದೆ. ಒಟ್ಟಿನಲ್ಲಿ ಜಿಲ್ಲೆಯ 8 ತಾಲೂಕುಗಳು ಸಂಭ್ರಮದಿಂದ ಪಾಲ್ಗೊಳ್ಳಬೇಕೆಂಬುದು ನನ್ನ ಆಶಯ ಎಂದು ಹೇಳಿದರು.
ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಉಪಾಧ್ಯಕ್ಷ ಜಿ.ಎನ್.ವಿಜಯಕುಮಾರ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಜಿಪಂ ಸಿಇಒ ಪೂವಿತಾ ಹಾಜರಿದ್ದರು.