More

    ಸಚಿವ ರ ಅನಗತ್ಯ ಮಾತುಗಳಿಗೆ ತಡೆ ಹಾಕಿ: ಸಿಎಂ ಸಿದ್ದುಗೆ ಶಾಸಕ ವಿಜಯೇಂದ್ರ ಒತ್ತಾಯ

    ಚಿತ್ರದುರ್ಗ: ಕೆಲ ಹಿರಿಯ ಸಚಿವರು ನೀಡುತ್ತಿರುವ ಅನಗತ್ಯ ಹೇಳಿಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಡಿವಾಣ ಹಾಕಬೇಕೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.

    ಸಿರಿಗೆರೆ ತರಳಬಾಳು ಮಠಕ್ಕೆ ಸೋಮವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

    ಆರ್‌ಎಸ್‌ಎಸ್, ಬಜರಂಗದಳ ನಿಷೇಧ, ಕಾನೂನು ಉಲ್ಲಂಘನೆ ಮಾಡಿ ನೋಡಿ ಎಂಬ ಸವಾಲಿನ ಮಾತುಗಳನ್ನು ಕೆಲ ಸಚಿವರು ಆಡುತ್ತಿದ್ದಾರೆ.

    ಇಂಥ ಹೇಳಿಕೆಗಳನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

    ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಆಡಳಿತ ಕುರಿತು ಜನರ ನಿರೀಕ್ಷೆ ಆಪಾರವಾಗಿವೆ.

    ಅಭಿವೃದ್ಧಿ ಕೆಲಸಗಳಿಗೆ ಚಾಲನೆ

    ಆದ್ದರಿಂದ ಸಚಿವರ ಅನಗತ್ಯ ಮಾತುಗಳಿಗೆ ಕಡಿವಾಣ ಹಾಕಿ, ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಬೇಕು ಎಂದು ಮನವಿ ಮಾಡಿದರು.

    ಗ್ಯಾರಂಟಿ ಕಾರ್ಡ್‌ ಯಾರೂ ಕೇಳಿರಲಿಲ್ಲ. ಹೇಗಾದರೂ ಅಧಿಕಾರಕ್ಕೆ ಬರಬೇಕೆಂದು ಕಾರ್ಡ್‌ ಕೊಟ್ಟು ಜನರ ಮನಸ್ಸಿನಲ್ಲಿ ಸಾಕಷ್ಟು ನಿರೀಕ್ಷೆ ಕಾಂಗ್ರೆಸ್ ಹುಟ್ಟು ಹಾಕಿದೆ.

    ಈಗ ಎಲ್ಲ ಐದು ಗ್ಯಾರಂಟಿಗಳನ್ನೂ ಈಡೇರಿಸುವ ಕರ್ತವ್ಯ ಕಾಂಗ್ರೆಸ್ಸಿನದ್ದಾಗಿದೆ ಎಂದರು.

    ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮಾ ಯಾವಾಗ ಎಂಬ ಕಾಂಗ್ರೆಸ್ ನಾಯಕರ ಪ್ರಶ್ನೆ ನೋಡಿದರೆ, ಗ್ಯಾರಂಟಿಗಳು ಹುಸಿಯಾಗುವ ಶಂಕೆ ಇದೆ.

    ಜನರ ಪ್ರಶ್ನೆಗಳಿಗೆ ಕಾಂಗ್ರೆಸ್ ಉತ್ತರಿಸಬೇಕಿದೆ

    ಐದು ಗ್ಯಾರಂಟಿಗಳ ಜತೆಗೆ, ಸಿದ್ದರಾಮಯ್ಯ ಅವರು 5 ವರ್ಷಗಳ ಕಾಲ ಆಡಳಿತ ನಡೆಸುತ್ತಾರೆಯೇ ಎಂಬ 6ನೇ ಗ್ಯಾರಂಟಿಯ ಬಗ್ಗೆ ಜನರ ಪ್ರಶ್ನೆಗಳಿಗೆ ಕಾಂಗ್ರೆಸ್ ಉತ್ತರಿಸಬೇಕಿದೆ ಎಂದು ಹೇಳಿದರು.

    ಒಂದು ಕಡೆ ಸಿಎಂ, ಡಿಸಿಎಂ ನಡುವೆ ಈಗಾಗಲೇ ವ್ಯತ್ಯಾಸಗಳು, ಗೊಂದಲಗಳು ಮೆಲ್ನೋಟಕ್ಕೆ ಕಾಣುತ್ತಿವೆ.

    ಸಿದ್ದರಾಮಯ್ಯ 5 ವರ್ಷ ಆಡಳಿತ ನಡೆಸುತ್ತಾರೆಂದು ಕೆಲವು ಮಂತ್ರಿಗಳು ಹೇಳಿದರೆ, ಇನ್ನು ಕೆಲವರು ಇಲ್ಲ ಎನ್ನುತ್ತಿದ್ದಾರೆ.

    ಬರುವಂಥ ದಿನಗಳಲ್ಲಿ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಬಹುದು, ನಾವು ಕೂಡ ಹೋರಾಟ ಮಾಡಬೇಕಾಗುತ್ತದೆ ಎಂದರು.

    ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ನಾನಿಲ್ಲ

    ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ನನ್ನ ಹೆಸರು ಇರುವುದು ನನಗೆ ಗೊತ್ತಿಲ್ಲ.

    ನಾನು ಯಾವತ್ತೂ ಯಾವ ರೇಸ್‌ನಲ್ಲೂ ಇಲ್ಲ. ವರಿಷ್ಠರು, ಕಾರ‌್ಯಕರ್ತರು ಹಾಗೂ ಮತದಾರರ ಆಶೀರ್ವಾದದಿಂದ ಶಾಸಕನಾಗಿದ್ದೇನೆ. ಕ್ಷೇತ್ರದ ಅಭಿವೃದ್ಧಿ ನನ್ನ ಮೊದಲ ಆದ್ಯತೆ.

    ಸಂಸತ್ ಭವನ ಉದ್ಘಾಟನೆಯಲ್ಲಿ ಮಗ್ನರಾಗಿದ್ದ ವರಿಷ್ಠರು, ಶೀಘ್ರದಲ್ಲೇ ಪ್ರತಿಪಕ್ಷ ನಾಯಕನ ವಿಷಯ ಇತ್ಯರ್ಥಗೊಳಿಸುತ್ತಾರೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

    ವಿಶ್ವಾಸಕ್ಕೆ ತೆಗೆದುಕೊಂಡು ಬೆಳೆಯಬೇಕು

    ಶಾಸಕನಾದ ಬಳಿಕ ಕಾರ‌್ಯಕರ್ತರು, ಕ್ಷೇತ್ರದ ಮುಖಂಡರೊಂದಿಗೆ ತರಳಬಾಳು ಮಠದ ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ‌್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದೇನೆ.

    ಮಠದ ಕೋರ್ಟ್ ಕಲಾಪ ನೋಡಿ ಸಂತೋಷವಾಗಿದೆ. ತಂದೆಯವರಂತೆ ನೀನು ಕೂಡ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬೆಳೆಯುವಂತೆ ಗುರುಗಳು ನನಗೆ ಸೂಚಿಸಿದ್ದಾರೆ ಎಂದು ವಿಜಯೇಂದ್ರ ಹೇಳಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts