More

    ಬಿಜೆಪಿಗೆ ಎಂಪಿ ಚುನಾವಣೆಯಲ್ಲಿ ಸೋಲುವ ಭಯ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯ

    ಮಂಡ್ಯ: ಹಣ ಕೊಟ್ಟರೂ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ. ಅಂದರೆ ಜನರಿಗೆ ಒಳ್ಳೆಯ ಕಾರ್ಯಕ್ರಮ ಕೊಡುವುದು ಬಿಜೆಪಿಗೆ ಇಷ್ಟವಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸೋಲುವ ಭಯದಲ್ಲಿ ಈ ರೀತಿ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಏನೇನು ಮಾಡುತ್ತಾರೋ ಮಾಡಲಿ. ನಾವು ನಮ್ಮ ಪಾಡಿಗೆ ಕೆಲಸ ಮಾಡುತ್ತೇವೆ. ಬಿಜೆಪಿಯಲ್ಲಿನ ಬಾಂಬೆ ಟೀಂ ಮೇಲೆ ಈಶ್ವರಪ್ಪ ಕಿಡಿಕಾರಿರುವುದನ್ನು ನೋಡಿದೆ. ಅವರ ಪಕ್ಷದಲ್ಲಿ ಆಂತರಿಕ ಜಗಳ ಆಡಬೇಡಿ ಎಂದು ನಾವು ಹೇಳೋಕೆ ಆಗುತ್ತಾ?. ಅವರಿಗೆ ಏನೇನು ಸಮಸ್ಯೆ ಇದ್ಯೋ, ಏನೇನೂ ನೋವಿದ್ಯೋ?. ಅದನ್ನು ಅವರು ಮತ್ತು ಅವರ ನಾಯಕರು ಸರಿಪಡಿಸಿಕೊಳ್ಳಬೇಕು. ಪಕ್ಷದ ಶಿಸ್ತು ಕಾಂಗ್ರೆಸ್‌ನಿಂದ ಬಂದವರಿಂದ ಹೋಗಿದೆ ಎನ್ನುವುದನ್ನು ಅಲ್ಲಿಗೆ ಕರೆದುಕೊಂಡು ಹೋದವರೇ ಹೇಳಬೇಕು. ಕಾಂಗ್ರೆಸ್‌ನಿಂದ ಕರೆದುಕೊಂಡು ಹೋಗಿ ಸರ್ಕಾರ ಮಾಡಿದರು. ಆದರೆ ಅವರ ಆಡಳಿತದಲ್ಲಿ ಜನರಿಗೆ ಉಪಯೋಗ ಆಗಲಿಲ್ಲ. ಆಡಳಿತ ಕೊಡುವುದಕ್ಕೆ ಆಗದೇ ಕೆಟ್ಟ ಹೆಸರು ತಂದರು. ಅದಕ್ಕಾಗಿ ಜನರು 135 ಸ್ಥಾನ ಗೆಲ್ಲಿಸಿ ಕಾಂಗ್ರೆಸ್ ಸ್ಥಿರ ಸರ್ಕಾರವನ್ನ ಕೊಟ್ಟಿದ್ದಾರೆ ಎಂದರು.
    ಲೋಕಸಭೆಗೆ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೊಂದಾಣಿಕೆ ಆ ಎರಡು ಪಕ್ಷಕ್ಕೆ ಬಿಟ್ಟ ವಿಚಾರ. ಮೈತ್ರಿ ಮಾಡಿಕೊಳ್ಳುತ್ತಾರೋ, ಅವರ ಪರೋಕ್ಷವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೋ ಅಥವಾ ಪೂರ್ಣ ವಿಲೀನ ಮಾಡಿಕೊಳ್ಳುತ್ತಾರೋ ಅದು ಆ ಪಕ್ಷಕ್ಕೆ ಬಿಟ್ಟಿದ್ದು. ನಮಗೆ ಜನ ಜವಾಬ್ದಾರಿ ಕೊಟ್ಟಿದ್ದಾರೆ. ಅದರಂತೆ ಕೆಲಸ ಮಾಡುತ್ತಿದ್ದೇವೆ. ಚುನಾವಣೆ ಬಂದಾಗ ನಮ್ಮ ಪಕ್ಷ ಎದುರಿಸುತ್ತೇವೆ. ಯಾವ ಪಕ್ಷ ಮೈತ್ರಿ ಆಗುತ್ತೋ ಎನ್ನುವ ನಮಗೆ ಅವಶ್ಯಕತೆ ಇಲ್ಲ. ಬಿಜೆಪಿ-ಜೆಡಿಎಸ್‌ಗೆ ಕಾಂಗ್ರೆಸ್ ಟಾರ್ಗೆಟ್ ಅಲ್ಲದೇ ಬೇರೆ ಯಾವ ಪಕ್ಷ ಟಾರ್ಗೆಟ್ ಆಗುವುದಕ್ಕೆ ಸಾಧ್ಯ ಎಂದ ಅವರು, ರಮ್ಯಾ ಮಂಡ್ಯ ಲೋಕಸಭೆಗೆ ಮತ್ತೆ ಸ್ಪರ್ಧಿಸುತ್ತಾರೋ ಎನ್ನುವುದು ನನಗೆ ಗೊತ್ತಿಲ್ಲ. ಅದು ಇನ್ನು ತೀರ್ಮಾನ ಮಾಡಿಲ್ಲ. ಇಲ್ಲಿದೆ ಬಹಳಷ್ಟು ಜನ ಪಾರ್ಲಿಮೆಂಟ್‌ಗೆ ಆಕಾಂಕ್ಷಿತರಿದ್ದಾರೆ. ಹೊರಗಡೆಯಿಂದ ತರುವ ಅವಶ್ಯಕತೆ ಇಲ್ಲ. ಎಲ್ಲರೂ ಕೂತು ಇಲ್ಲಿಯೆ ಒಂದು ತೀರ್ಮಾನ ಮಾಡುತ್ತೇವೆ. ಹೊಂದಾಣಿಕೆಯಾದರೂ ನಮ್ಮ ಅಭ್ಯರ್ಥಿ ಹಾಕಿ ಗೆಲ್ಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಮೈಸೂರು-ಬೆಂಗಳೂರು ಆಕರ್ಷಣಿಯವಾಗಿದೆ ಎಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಕೆಂಪೇಗೌಡರ ಕೊಡುಗೆ. ಸದಾ ಅವರನ್ನ ನೆನಪಿಸಿಕೊಳ್ಳೋದು ನಮ್ಮೆಲ್ಲರ ಕರ್ತವ್ಯ. ಕೆಂಪೇಗೌಡರ ಜಯಂತಿ ಆರಂಭಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತದೆ. ಬಹಳಷ್ಟು ಜನ ಸಮಾಜ, ಜಾತಿ ಅದು, ಇದು ಅಂತ ಉಪಯೋಗಿಸಿಕೊಳ್ತಾರೆ. ಆದರೆ ಜಯಂತಿ ಆಚರಿಸಲು ಅವಕಾಶಕೊಟ್ಟಿದ್ದು ಕಾಂಗ್ರೆಸ್ ಎಂದ ಅವರು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಿಸಿದ್ದು ಬಿಜೆಪಿ ಎಂಬ ಮಾಜಿ ಸಚಿವ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿದ್ದು ಕಾಂಗ್ರೆಸ್. ಹೆಸರಿಟ್ಟ ಮೇಲೆ ಪ್ರತಿಮೆ ನಿರ್ಮಿಸುವುದು ಅನಿವಾರ್ಯ. ಯಾರಿದ್ದರೂ ಪ್ರತಿಮೆ ಮಾಡುತ್ತಿದ್ದರು. ಇನ್ನೊಂದು ಪ್ರತಿಮೆ ಇಡಲು ಆಗುತ್ತಿರಲಿಲ್ಲ. ಬಿಜೆಪಿಯವರು ಬೇರೆ ಪ್ರತಿಮೆ ಇಟ್ಟಿರೋರು ಎಂದು ಟೀಕಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts