ಜಟಿಲ ಸಮಸ್ಯೆ ಚರ್ಚಿಸುವಲ್ಲಿ ಎಡವಿದ್ದೇವೆ ಎಂದ ಸಚಿವ ಶಿವಾನಂದ ಪಾಟೀಲ್

ಕೊಪ್ಪಳ: ಸದನ ನಡೆದರೆ ಮಾತ್ರ ಸರ್ಕಾರದ ಕೆಲಸಗಳಾಗುತ್ತವೆ ಎಂಬುದಲ್ಲ. ಸಚಿವರು ಅವರವರ ಕೆಲಸ ಮಾಡುತ್ತಿದ್ದಾರೆ. ಆದರೂ, ಗಂಭೀರ ವಿಷಯಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಎಡವಿದ್ದೇವೆ ಎನಿಸುತ್ತಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಖಾಸಗಿ ಆಸ್ಪತ್ರೆ ಉದ್ಘಾಟನೆಗೆ ಬಂದಿದ್ದ ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ವಿರೋಧ ಪಕ್ಷದವರು ತಮ್ಮ ಕೆಲಸ ಮಾಡಿರುತ್ತಾರೆ. ಅದರೆ, ಸದನ ಅನ್ನೋದು ಸೂಕ್ತ ವ್ಯವಸ್ಥೆ. ಅಲ್ಲಿ ಜಟಿಲ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಇದರಲ್ಲಿ ನಾವು ಎಡವಿದ್ದೇವೆ ಎಂದರೆ ತಪ್ಪಾಗಲಿಕ್ಕಿಲ್ಲ. ನಾನು ಪಕ್ಷಾತೀತವಾಗಿ ಹೇಳುತ್ತಿದ್ದೇನೆ . ಶಾಸಕರಿಗೆ ಆಮಿಷ ಒಡ್ಡಿದ ಆಡಿಯೋ, ವಿಡಿಯೋ ಬಗ್ಗೆ ಈಗಾಗಲೇ ಆಯಾ ಪಕ್ಷದವರು ಮಾತನಾಡಿದ್ದಾರೆ. ನನಗೂ ಅದಕ್ಕೂ ಸಂಬಂಧವಿಲ್ಲ. ಸ್ವಹಿತ ಯಾರಿಗೆ ಮುಖ್ಯ ಅವರಿಗೆ ಈ ಬಗ್ಗೆ ಕೇಳಿ ಎಂದು ತೀಕ್ಷ್ಣವಾಗಿ ಉತ್ತರಿಸಿದರು.