ಕಲ್ಲುಕ್ವಾರಿ ತ್ಯಾಜ್ಯ ಕೊಂಪೆ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್
ದೇಶದೆಲ್ಲೆಡೆ ಸ್ವಚ್ಛಗ್ರಾಮ ಪರಿಕಲ್ಪನೆಯಡಿ ಜಾಗೃತಿ ಅಭಿಯಾನ ನಡೆಯುತ್ತಿದ್ದು, ಪರಿಸರ ಸ್ವಚ್ಛತೆ ಕಾಪಾಡುವಲ್ಲಿ ಸ್ಥಳೀಯ ನಿವಾಸಿಗಳೂ ಕೈಜೋಡಿಸುತ್ತಿದ್ದಾರೆ. ಆದರೆ, ಬೆಳ್ಮಣ್ ಗ್ರಾಪಂ ವ್ಯಾಪ್ತಿಯಲ್ಲಿ ಮಾತ್ರ ಸ್ವಚ್ಛತೆ ಕನಸಿನ ಮಾತು ಎಂಬಂತಾಗಿದೆ. ಗ್ರಾಪಂ ವ್ಯಾಪ್ತಿಯ ಜಂತ್ರ ಎಂಬಲ್ಲು ನಿರುಪಯುಕ್ತ ಕಲ್ಲು ಕ್ವಾರಿಯೊಂದಿದ್ದು, ಪ್ರಸ್ತುತ ಈ ಕ್ವಾರಿ ಅನಧಿಕೃತ ತ್ಯಾಜ್ಯ ಸಂಗ್ರಹ ಕೊಂಪೆಯಾಗಿ ಪರಿವರ್ತನೆಯಾಗಿದೆ.

ಬೆಳ್ಮಣ್‌ನಿಂದ ಶಿರ್ವಕ್ಕೆ ಸಾಗುವ ದಾರಿ ಮಧ್ಯೆ ಜಂತ್ರ ಎಂಬಲ್ಲಿ ರಾಜ್ಯ ಹೆದ್ದಾರಿಗೆ ಅನತಿ ದೂರದಲ್ಲಿರುವ ಕಲ್ಲು ಕ್ವಾರಿಗೆ ಪರಿಸರದ ಜನತೆ ಪ್ರತಿನಿತ್ಯ ಮೂಟೆಗಟ್ಟಲೆ ತ್ಯಾಜ್ಯ ತಂದು ಸುರಿಯುತ್ತಿದ್ದರೂ ಗ್ರಾಪಂ ಆಡಳಿತ ಮೌನ ವಹಿಸಿದೆ. ಕ್ವಾರಿಯಲ್ಲಿ ತ್ಯಾಜ್ಯ ಸಂಗ್ರಹದಿಂದ ಪರಿಸರವಾಸಿಗಳು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಗ್ರಾಪಂ ಗಮನಕ್ಕೆ ತಂದರೂ ಫಲಿತಾಂಶ ಶೂನ್ಯ. ಪ್ಲಾಸ್ಟಿಕ್ ತ್ಯಾಜ್ಯಗಳ ಜತೆ ಹಸಿ ಕಸವನ್ನೂ ಇಲ್ಲು ತಂದು ಸುರಿಯಲಾಗುತ್ತಿದೆ. ಈ ತ್ಯಾಜ್ಯ ಅಲ್ಲೇ ಕೊಳೆತು ಪರಿಸರವಿಡೀ ದುರ್ನಾತ ಬೀರುತ್ತಿದೆ. ಸ್ಥಳೀಯ ಜನತೆ ತ್ಯಾಜ್ಯ ರಾಶಿ ಹಾಗೂ ದುರ್ನಾತದ ನಡುವೆಯೇ ದಿನ ಕಳೆಯುವಂತಾಗಿದೆ.

ರಕ್ಷಣೆಯೂ ಇಲ್ಲ: ನಿರುಪಯುಕ್ತ ಕಲ್ಲುಕ್ವಾರಿಗಳಿಗೆ ತಡೆ ಬೇಲಿ ಅಳವಡಿಸಬೇಕು ಎಂದು ಈ ಹಿಂದೆಯೇ ಜಿಲ್ಲಾಧಿಕಾರಿ ಆದೇಶಿಸಿದ್ದರು. ಆದರೆ ಈ ಕ್ವಾರಿಗೆ ಯಾವುದೇ ತಡೆ ಬೇಲಿ ಅಳವಡಿಸಿಲ್ಲ. ಮಳೆಗಾಲದಲ್ಲಿ ಕ್ವಾರಿಯಲ್ಲಿ ನೀರು ನಿಂತು ಅಪಾಯಕ್ಕೆ ಆಹ್ವಾನ ನೀಡುವಂತಿರುತ್ತದೆ. ಜತೆಗೆ ನಿಂತ ನೀರಲ್ಲಿ ತ್ಯಾಜ್ಯಗಳು ಕೊಳೆತು ದುರ್ವಾಸನೆ ಜತೆಗೆ ಸೊಳ್ಳೆಗಳ ಉತ್ಪಾದನಾ ತಾಣವಾಗಿ ಪರಿವರ್ತನೆಗೊಂಡಿವೆ. ದೇಶಾದ್ಯಂತ ಸ್ವಚ್ಛತೆಯ ಕೂಗು ಕೇಳೀ ಬರುತ್ತಿದ್ದರೂ ಬೆಳ್ಮಣ್ ಗ್ರಾಪಂ ಆಡಳಿತ ಈ ನಿಟ್ಟಿನಲ್ಲಿ ನಿರ್ಲಕ್ಷೃ ವಹಿಸಿದೆ ಎಂದು ಗ್ರಾಮಸ್ಥರ ಆರೋಪ. ಕಲ್ಲು ಕ್ವಾರಿಗೆ ತ್ಯಾಜ್ಯ ತಂದು ಸುರಿಯುತ್ತಿರುವ ಬಗ್ಗೆ ಗ್ರಾಪಂ ಸಾಮಾನ್ಯ ಸಭೆಯಲ್ಲೂ ಸದಸ್ಯರೊಬ್ಬರು ಪ್ರಸ್ತಾಪಿಸಿದ್ದರು. ಆದರೆ ಈ ನಿಟ್ಟಿನಲ್ಲಿ ಸ್ಥಳೀಯಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ.

ಬಸ್ಸು ನಿಲ್ದಾಣ ಸ್ವಚ್ಛತೆ: ಕೆಲ ದಿನಗಳ ಹಿಂದೆ ಬೆಳ್ಮಣ್ ಬಸ್ ನಿಲ್ದಾಣದಲ್ಲಿನ ಅಶುಚಿತ್ವದ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಪ್ರಯಾಣಿಕರು ವಿಶ್ರಾಂತಿ ಪಡೆಯಲು ಅಳವಡಿಸಿರುವ ಕುರ್ಚಿಗಳು ಧೂಳು ಹಿಡಿದು ನಿರುಪಯುಕ್ತವಾಗಿದ್ದ ಬಗ್ಗೆ ಮಾಧ್ಯಮಗಳು ಗಮನಸೆಳೆದಿದ್ದವು. ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯಾಡಳಿತ ತರಾತುರಿಯಲ್ಲಿ ಬಸ್ ನಿಲ್ದಾಣ ಸ್ವಚ್ಛಗೊಳಿಸಿತ್ತು. ಪ್ರಸಕ್ತ ಕಲ್ಲು ಕ್ವಾರಿ ಸಮಸ್ಯೆ ಬಗ್ಗೆ ಗ್ರಾಪಂ ತಕ್ಷಣ ಗಮನ ಹರಿಸಬೇಕಿದೆ.

ಕಲ್ಲು ಕ್ವಾರಿಗೆ ಕಸ ತಂದು ಸುರಿಯುತ್ತಿರುವ ಬಗ್ಗೆ ನಾವು ಹಲವು ಬಾರಿ ಗ್ರಾಮ ಪಂಚಾಯಿತಿ ಗಮನಕ್ಕೆ ತಂದಿದ್ದೇವೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಕ್ವಾರಿಗೆ ತ್ಯಾಜ್ಯ ಸುರಿಯುವವರ ವಿರುದ್ಧ ಗ್ರಾಪಂ ಕಠಿಣ ಕ್ರಮ ಕೈಗೊಳ್ಳಬೇಕು.
– ಪೂರ್ಣಿಮ, ಸ್ಥಳೀಯರು.

ಕಲ್ಲುಕ್ವಾರಿಗೆ ತ್ಯಾಜ್ಯ ಸುರಿಯುತ್ತಿರುವುದು ಈಗಾಗಲೇ ಗ್ರಾಪಂ ಗಮನಕ್ಕೆ ಬಂದಿದೆ. ಗ್ರಾಪಂ ಸಾಮಾನ್ಯ ಸಭೆಯಲ್ಲೂ ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ತ್ಯಾಜ್ಯ ವಿಲೇವಾರಿಗೆ ಗ್ರಾಪಂ ಸೂಕ್ತ ಕ್ರಮ ಕೈಗೊಳ್ಳಬೇಕು.
– ಮಲ್ಲಿಕಾ ರಾವ್ ಬೆಳ್ಮಣ್ ಗ್ರಾಪಂ ಸದಸ್ಯೆ

Leave a Reply

Your email address will not be published. Required fields are marked *