ಹುಣಸೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರಸಭೆ ಮತ್ತು ಸಂತ ಜೋಸೆಫರ ಪಿಯು ಕಾಲೇಜಿನ ಸಹಯೋಗದಲ್ಲಿ ಪಟ್ಟಣದ ವಿವಿಧೆಡೆ ‘ಪ್ಲಾಸ್ಟಿಕ್ ಭೂತ ಓಡಿಸಿ, ಪರಿಸರ ಕಾಪಾಡಿ’ ಕುರಿತು ಮೈಮ್ ಪ್ರದರ್ಶನ ನಡೆಸಲಾಯಿತು.
ಬಸ್ ನಿಲ್ದಾಣ, ಕಲ್ಪತರು ವೃತ್ತ, ರೋಟರಿ ವೃತ್ತ ಮುಂತಾದ ಜನನಿಬಿಡ ಸ್ಥಳಗಳಲ್ಲಿ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮಗಳ ಕುರಿತು ಮೈಮ್ ಪ್ರದರ್ಶನ ನಡೆಸಿಕೊಟ್ಟರು. ‘ಪ್ಲಾಸ್ಟಿಕ್ ತ್ಯಜಿಸಿ, ಜಲಚರಗಳು ಮತ್ತು ಜಾನುವಾರುಗಳ ಜೀವ ಉಳಿಸಿ’ ಎಂಬ ಘೋಷವಾಕ್ಯ ಪ್ರದರ್ಶಿಸಿದರು. ವಿದ್ಯಾರ್ಥಿಗಳ ನಟನೆಯನ್ನು ಸಾರ್ವಜನಿಕರು ತಲ್ಲೀನತೆಯಿಂದ ವೀಕ್ಷಿಸಿದರು.
ನಗರಸಭೆ ಪೌರಾಯುಕ್ತೆ ವಾಣಿ ವಿ.ಆಳ್ವಾ ಮಾತನಾಡಿ, ಪಟ್ಟಣದ 15 ಪಾರ್ಕ್ಗಳ ಪೈಕಿ ಈ ಬಾರಿ 5 ಪಾರ್ಕ್ಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು. ಅದಕ್ಕೂ ಮೊದಲು ವರ್ತಕರಲ್ಲಿ ಮತ್ತು ಗ್ರಾಹಕರಲ್ಲಿ ಪ್ಲಾಸ್ಟಿಕ್ ಬಳಕೆ ದುರಂತಗಳ ಕುರಿತು ಅರಿವು ಮೂಡಿಸುವ ಕಾರ್ಯ ನಡೆಸಲಾಗುವುದು. ನಗರಸಭೆ ನಿವೇಶನಗಳಲ್ಲಿ 1500ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸಲಾಗುವುದೆಂದರು.
ಸಿಸ್ಟರ್ ಅನಿತಾ, ನಗರಸಭೆಯ ಆರೋಗ್ಯ ನಿರೀಕ್ಷಕರಾದ ಸತೀಶ್, ಮೋಹನ್, ರಾಜೇಂದ್ರ ಇತರರಿದ್ದರು.