ಸಿಲಿಂಡರ್ ಸ್ಫೋಟ, ಮನೆ ಜಖಂವಿಜಯವಾಣಿ ಸುದ್ದಿಜಾಲ ಮಂಡ್ಯ
ನಗರದ ಹೌಸಿಂಗ್ ಬೋರ್ಡ್‌ನ ಮನೆಯೊಂದರಲ್ಲಿ ಅಡುಗೆ ಅನಿಲದ ರೆಗ್ಯೂಲೇಟರ್ ತೆರೆದುಕೊಂಡು ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆ ಜಖಂ ಆಗಿ, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ನಾಶವಾಗಿವೆ.
ಬಡಾವಣೆಯ ತಿಮ್ಮಯ್ಯ ಹಾಗೂ ಸುಶೀಲಾ ದಂಪತಿ ಮನೆಯಲ್ಲಿ ಶುಕ್ರವಾರ ರಾತ್ರಿ 8 ಗಂಟೆ ವೇಳೆಗೆ ತರಬೇತಿ ಮುಗಿಸಿಕೊಂಡು ಶಿಕ್ಷಕಿ ಸುಶೀಲಾ ಮನೆಗೆ ಬಂದಿದ್ದಾರೆ. ಅವರಿಗೆ ಪುತ್ರ ಶನತ್‌ಕುಮಾರ್ ಕಾಫಿ ಮಾಡಿಕೊಡಲು ಮುಂದಾಗಿದ್ದಾರೆ.
ಕಾಫಿ ರೆಡಿ ಆಗುತ್ತಿದ್ದಂತೆ ರೆಗ್ಯೂಲೇಟರ್ ಬಳಿ ಸೋರಿಕೆ ಆರಂಭವಾಗಿದೆ. ಅದನ್ನು ಗಮನಿಸಿದ ಶನತ್‌ಕುಮಾರ್ ಅದು ಮಿಡಿದುಕೊಂಡು ತಂದೆ, ತಾಯಿಯನ್ನು ಮನೆಯಿಂದ ಹೊರಗೆ ಹೋಗುವಂತೆ ಕೂಗಿಕೊಂಡಿದ್ದಾರೆ. ತಂದೆ, ತಾಯಿ ಮನೆಯಿಂದ ಹೊರ ಹೋದ ಬೆನ್ನಲ್ಲೇ ತಾವು ಕೂಡ ಹೊರಗೆ ಓಡಿ ಬಂದಿದ್ದಾರೆ.
ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಉದ್ದೇಶದಿಂದ ಮನೆಗೆ ವಾಪಸ್ ಆದಾಗ ಸ್ಪೋಟವಾಗಿದೆ. ಗಾಬರಿಯಲ್ಲಿ ಬಿದ್ದ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸ್ಪೋಟದಿಂದ ಮನೆಯ ಗೋಡೆಗಳು ಜಖಂ ಆಗಿವೆ. ಟಿವಿ, ಪ್ರಿಡ್ಜ್, ಹೋಮ್ ಥೀಯೆಟರ್, ಲ್ಯಾಪ್‌ಟಾಪ್ ಸೇರಿ ಎಲೆಕ್ಟ್ರಾನಿಕ್ಸ್ ವಸ್ತುಗಳು ಸುಟ್ಟು ಹೋಗಿವೆ. ಜತೆಗೆ ಬಟ್ಟೆ, ಬರೆ ಮೊದಲಾದ ದಿನ ಬಳಕೆ ವಸ್ತುಗಳು ಕೂಡ ಹಾನಿಯಾಗಿದೆ. ಸುದ್ದಿ ತಿಳಿದ ಬಳಿಕ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಇತರೆಡೆ ವ್ಯಾಪಿಸುವುದನ್ನು ತಡೆದರು.
ಸದ್ಯ ಮನೆ ವಾಸಕ್ಕೆ ಯೋಗ್ಯವಿಲ್ಲದಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಕುಟುಂಬ ಸದಸ್ಯರು ಅಳಲು ತೋಡಿಕೊಂಡಿದ್ದಾರೆ. ಅಗ್ನಿ ಶಾಮಕ ದಳಕ್ಕೆ ದೂರು ಸಲ್ಲಿಸಿದ್ದು, ಪೊಲೀಸ್ ಠಾಣೆಗೆ ಹೋದ ಕುಟುಂಬ ಸದಸ್ಯರಿಗೆ ಪೊಲೀಸರು ಗ್ಯಾಸ್ ಏಜೆನ್ಸಿಗೆ ದೂರು ನೀಡಿದ ಬಳಿಕ ಅದರ ಆಧಾರದ ಮೇಲೆ ದೂರು ಕೊಡಿ ಎಂದು ತಿಳಿಸಿದ್ದಾರೆ. ಬೆಳಗ್ಗೆಯಿಂದ 5 ಗಂಟೆ ತನಕ ಅಲೆದ ಕುಟುಂಬ ಸದಸ್ಯರಿಂದ ದೂರು ಸ್ವೀಕರಿಸಿಲ್ಲ. ನಗರದ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *