More

    ಮಳೆ ಅಭಾವಕ್ಕೆ ಕಮರುತ್ತಿದೆ ರಾಗಿ ಮೊಳಕೆ

    11.43% ಬಿತ್ತನೆ : ಕುಂಠಿತವಾಗಲಿದೆ ಆಹಾರಧಾನ್ಯ, ಎಣ್ಣೆ ಕಾಳು ಉತ್ಪಾದನೆ

    ಕೋಲಾರ: ಜಿಲ್ಲೆಯಲ್ಲಿ ರಾಗಿ ಬಿತ್ತನೆಗೆ ಮಳೆ ಅಭಾವ ತಲೆದೋರಿದ್ದು, ಇದುವರೆಗೆ ಬಿತ್ತನೆಯಾಗಿರುವ ಶೇ.11.43 ರಾಗಿ ಮೊಳಕೆ ಹಂತದಲ್ಲೇ ಕಮರುತ್ತಿದೆ.
    ಈ ವರ್ಷ 1.25 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಮಳೆ ಕಣ್ಣಾಮುಚ್ಚಾಲೆಯಿಂದ ಸರಿಯಾಗಿ ಬಿತ್ತನೆ ಆಗಲಿಲ್ಲ. ಬಿತ್ತನೆಯಾಗಿರುವ ಹೊಲಗಳಲ್ಲಿ ಅವರೆ, ಅಲಸಂದೆ, ಮೇವಿನ ಜೋಳದ ಸಾಲುಗಳು ಮೊಳಕೆಯೊಡೆದಿದ್ದರೂ, ರಾಗಿ ಮೊಳಕೆ ಬಂದು ಒಣಗಿದೆ.
    ಕಳೆದ ವರ್ಷ ಈ ವೇಳೆಗೆ 99,200 ಹೆಕ್ಟೇರ್​ ಗುರಿಯಲ್ಲಿ 38,533 ಹೆಕ್ಟೇರ್​ ಬಿತ್ತನೆಯಾಗಿತ್ತು. ಆ.15ರ ವರೆಗೆ ಬಿತ್ತನೆಗೆ ಕಾಲಾವಕಾಶ ವಿದೆ ಯಾದರೂ ಹೊಲಗಳಲ್ಲಿ ಮಿಶ್ರ ಬೆಳೆಗಳನ್ನಾಗಿ ಬೆಳೆಯುವ ಅವರೆ, ತೊಗರಿ ಬೆಳೆ ಕಾಣ ಲಾಗುವುದಿಲ್ಲ. ಮುಂದಿನ 2 ವಾರದಲ್ಲಿ ಮಳೆ ಇದೇ ರೀತಿ ಕೈಕೊಟ್ಟರೆ ರಾಗಿ ಬಿತ್ತನೆಗೂ ಅವಧಿ ಮೀರುತ್ತದೆ.
    ಜೂನ್​ ಆರಂಭದಿಂದ ಆ.1ರವರೆಗೆ ವಾಡಿಕೆಯಂತೆ 147ಮಿ.ಮೀ ಮಳೆ ಬರಬೇಕಿದ್ದು, ಈ ಬಾರಿ 146 ಮಿ.ಮೀ ಮಳೆಯಾಗಿದೆ. ಜುಲೈ ತಿಂಗಳಲ್ಲಿ 79 ಮಿ.ಮಿ. ಮಳೆಯನ್ನು ನಿರೀಸಲಾಗಿತ್ತಾದರೂ 58 ಮಿಮೀ ಮಾತ್ರ ಬಂದಿದೆ. ಕಳೆದ ವಾರ 20.5ಮಿಮೀ ವಾಡಿಕೆ ಮಳೆಗೆ
    ಬದಲಾಗಿ 15.6 ಮಿ.ಮೀ. ಮಳೆಯಾಗಿದೆ. ಕಳೆದ
    ವಾರದ ಆರಂಭದಲ್ಲಿ ಮಳೆಗೆ ರೈತರು ಬಿತ್ತನೆ ಮಾಡಿದ್ದು, ಬಳಿಕ ಮಳೆ ಕೈ ಕೊಟ್ಟಿದ್ದು, ಶೇ. 24 ಕೊರತೆಯಾಗಿದೆ.
    ಆ.17ರ ತನಕ ಬಿತ್ತನೆಗೆ ಅವಕಾಶವಿದೆ. ಜೂನ್​ನಲ್ಲಿ ಎಂಆರ್​ಇ 1 ಮತ್ತು 6 ತಳಿಗಳ ಬಿತ್ತನೆ ಮಾಡಬೇಕಿದ್ದು, ಅಷ್ಟಾಗಿ ಈ ತಳಿ ಬಿತ್ತನೆ ಮಾಡಲಾಗಿಲ್ಲ. ಇನ್ನು ಜಿಪಿಯು 28 ತಳಿ ಮಾತ್ರ ಬಿತ್ತನೆ ಮಾಡಬೇಕಾಗುತ್ತದೆ. ತೊಗರಿ, ಅವರೆ ಬಿತ್ತನೆ ಅವಧಿ ಮುಗಿಯುತ್ತಿರುವುದರಿಂದ ದ್ವಿದಳ ಧಾನ್ಯಗಳ ಇಳುವರಿಯಲ್ಲಿ ಭಾರಿ ಕುಸಿತವಾಗಲಿದೆ.

    ದುಬಾರಿ ವೆಚ್ಚ: ಎತ್ತುಗಳನ್ನು ಕಟ್ಟಿ ಬಿತ್ತನೆ ಮಾಡಬೇಕಾದರೆ ಎಕರೆಗೆ 1,500ರೂ., ಡೀಸೆಲ್​ ದರ ಏರಿಕೆ ಪರಿಣಾಮ ಎಕರೆ ಉಳುಮೆಗೆ ಟ್ರಾ$್ಯಕ್ಟರ್​ಗೆ 1500 ರೂ. ಕೊಡಬೇಕು. ಈ ಹಿಂದೆ 900 ರೂ.ಇದ್ದ ಎಂಒಪಿ ರಸಗೊಬ್ಬರ 1700 ರೂ.ಗೆ ಏರಿಕೆಯಾಗಿದೆ. ಡಿಎಪಿ (ಖಾಸಗಿ ಸಂಸ್ಥೆಗಳದ್ದು) 1350 ರೂ. ಇದ್ದರೂ 1,500 ರೂ. ಮೇಲೆ ಮಾರಾಟ ಮಾಡಲಾಗುತ್ತಿದೆ. ಕಾಂಪ್ಲೆಕ್ಸ್​ ಗೊಬ್ಬರ 1500ರೂ.ಗೆ ಏರಿಕೆಯಾಗಿದೆ.

    ಬಿತ್ತನೆ ಕಡಿಮೆ: ಜಿಲ್ಲೆಯಲ್ಲಿ ನೆಲಗಡಲೆ 10,980 ಹೆಕ್ಟೇರ್​ ಗುರಿ ಹೊಂದಲಾಗಿದ್ದು, 2,962 ಹೆಕ್ಟೇರ್​ ಬಿತ್ತನೆಯಾಗಿದೆ. ತೊಗರಿ ಕೇವಲ 961ಹೆಕ್ಟೇರ್​ನಲ್ಲಿ ಮಾತ್ರ ಬಿತ್ತನೆ
    ಯಾಗಿದೆ.

    ರಸಗೊಬ್ಬರ ದಾಸ್ತಾನು: ನೆಲಗಡಲೆ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ತೊಗರಿ, ಅವರೆ ಜುಲೈನಲ್ಲಿ ಬಿತ್ತನೆ ಮಾಡಿದರೆ ಇಳುವರಿ ಚೆನ್ನಾಗಿ ಬರುತ್ತದೆ. ತೇವವಾಗುವಂತೆ ಮಳೆ ಬಂದರೆ ಬಿತ್ತನೆ ಬಿರುಸು ಪಡೆದುಕೊಳ್ಳಲಿದೆ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

    ಪೂರ್ವ ಮುಂಗಾರು, ಮುಂಗಾರು ಪ್ರಾರಂಭದಲ್ಲಿ ಸಮರ್ಪಕವಾಗಿ ಮಳೆಯಾಗಿದೆ. ಆದರೆ ರಾಗಿ ಬಿತ್ತನೆಗೆ ಸಕಾಲವಾದ ಜುಲೈನಲ್ಲಿ ಮಳೆ ಕೊರತೆಯಿಂದಾಗಿ ಬಿತ್ತನೆಗೆ ಹಿನ್ನಡೆಯಾಗಿದೆ. ಕಳೆದ ವಾರ ಚದುರಿದಂತೆ ಮಳೆಯಾಗಿದ್ದು, ಶೇ.10ಕ್ಕೂ ಹೆಚ್ಚು ರೈತರು ಬಿತ್ತನೆ ಮಾಡಿದ್ದಾರೆ. ನಂತರ ಮಳೆ ಕೈಕೊಟ್ಟಿರುವುದರಿಂದ ಮೊಳಕೆಯಲ್ಲೇ ರಾಗಿ ಒಣಗುವಂತಾಗಿದೆ. ಪ್ರಸ್ತುತ ಅಗತ್ಯದಷ್ಟು ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿದೆ.
    | ರೂಪಾದೇವಿ ಜಂಟಿ ನಿರ್ದೇಶಕಿ ಕೃಷಿ ಇಲಾಖೆ, ಕೋಲಾರ

    ಒಣಬೇಸಾಯ ಲಾಭಕರವಲ್ಲ. ರಾಗಿ ಬೆಳೆಯಲು ಎಕರೆಗೆ 50 ಕೆಜಿ ಡಿಎಪಿ ರಸಗೊಬ್ಬರ ಬೇಕಾಗುತ್ತದೆ. ಅದಕ್ಕೆ 1500 ರೂ., ಉಳುಮೆ, ಬಿತ್ತನೆ, ಕಳೆ ಕೀಳುವುದು, ಕುಂಟೆ ಹಾಕಿಸುವುದು, ಯೂರಿಯಾ ಗೊಬ್ಬರ ಕೊಡುವುದು, ತೆನೆ ಕಟಾವು, ಒಕ್ಕಣಿ ಮಾಡಿಸುವುದು, ತಾಳು ಕಟಾವು ಸೇರಿ 15ರಿಂದ 20 ಸಾವಿರ ರೂ.ಖರ್ಚು ಬರುತ್ತದೆ. ಕಾಡುಪ್ರಾಣಿಗಳ ಕಾಟದಿಂದ ಪಾರಾಗಿ 10 ಚೀಲ ರಾಗಿ ನೋಡುವುದು ಕಷ್ಟ.
    | ಯಲ್ಲಣ್ಣ ರೈತ, ಪೆಮ್ಮದೊಡ್ಡಿ

    ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ

    ಧಾನ್ಯ – ಗುರಿ – ಬಿತ್ತನೆಯಾಗಿರುವುದು(ಹೆಕ್ಟೇರ್​)

    • ನೆಲಗಡಲೆ – 10,980 – 2,962
    • ತೊಗರಿ – 4,620 – 961
    • ಅಲಸಂದೆ – 2,095 – 527
    • ರಾಗಿ – 68,400 – 6,273
    • ಭತ್ತ – 3,300 – 97
    • ಮು.ಜೋಳ – 2,100 – 163
    • ಮೇವಿನ ಜೋಳ – 1,750 – 706
    • ಸಿರಿಧಾನ್ಯ – 845 – 131
    • ಅವರೆ – 9,000 – 554
    • ಎಳ್ಳು – 341 – 40

    ಜುಲೈನಲ್ಲಿ ಮಳೆಯಾಗಿರುವುದು

    ತಾಲೂಕು – ವಾಡಿಕೆಮಳೆ – ಮಳೆಬಂದಿರುವುದು(ಮಿಮೀ) – ಕೊರತೆ (ಶೇ)

    • ಬಂಗಾರಪೇಟೆ – 69 – 47 – 32
    • ಕೋಲಾರ – 82 – 62 – 25
    • ಮಾಲೂರು – 87 – 51 – 42
    • ಮುಳಬಾಗಿಲು – 79 – 60 – 24
    • ಶ್ರೀನಿವಾಸಪುರ – 87 – 72 – 17
    • ಕೆಜಿಎಫ್​ – 89 – 39 – 56
    • ಒಟ್ಟು – 79 – 58 – 26

    ರಸಗೊಬ್ಬರ ಆ.1ರವರೆಗೆ ದಾಸ್ತಾನು

    ಉತ್ಪನ್ನ – ಸರಬರಾಜು – ಮಾರಾಟ – ಲಭ್ಯ(ಮೆಟ್ರಿಕ್​ ಟನ್​)

    • ಯೂರಿಯಾ – 6,899 – 7,807 – 2,806
    • ಡಿಎಪಿ – 4129 – 4362 – 2397
    • ಎಂಒಪಿ – 471 – 265 – 469
    • ಎನ್​ಪಿಕೆ – 7497 – 9673 – 6951
    • ಎಸ್​ಎಸ್​ಪಿ – 31 – 152 – 58
    • ಒಟ್ಟು – 19028 – 22260 – 12680

    ಬಿತ್ತನೆ ಬೀಜ ದಾಸ್ತಾನು(ಕ್ವಿಂಟಾಲ್​)
    ಉತ್ಪನ್ನ – ದಾಸ್ತಾನು – ಮಾರಾಟ – ಲಭ್ಯ
    ರಾಗಿ – 996 – 620 – 375
    ನೆಲಗಡಲೆ – 1046 – 598 – 448

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts