ಹುಣಸೂರು: ನಗರದ ಎಪಿಎಂಸಿ ಯಾರ್ಡ್‌ನಲ್ಲಿ ಮಾ.5ರಿಂದ ರಾಗಿ ಖರೀದಿ ಕೇಂದ್ರ ಕಾರ್ಯಾರಂಭ ಮಾಡಲಿದೆ ಎಂದು ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಬೋರ್ಡ್‌ನ ಹುಣಸೂರು ಕೇಂದ್ರದ ಖರೀದಿ ಅಧಿಕಾರಿ ಸುರೇಶ್‌ಬಾಬು ತಿಳಿಸಿದರು.
ಈ ಕುರಿತು ವಿಜಯವಾಣಿಗೆ ಮಾಹಿತಿ ನೀಡಿದ ಅವರು, ಕಳೆದ ಡಿಸೆಂಬರ್ 6ರಿಂದ ರೈತರಿಂದ ನೋಂದಣಿಗೆ ಅವಕಾಶವಿತ್ತು. ತಾಲೂಕಿನಲ್ಲಿ 5 ಸಾವಿರಕ್ಕೂ ಹೆಚ್ಚು ರೈತರು ನೋಂದಾಯಿಸಿಕೊಂಡಿದ್ದಾರೆ. ನೋಂದಾಯಿಸಿಕೊಂಡ ದಿನಾಂಕದ ಸೀನಿಯಾರಿಟಿ ಆಧಾರದಡಿ ಪ್ರತಿಯೊಬ್ಬ ರೈತರಿಗೆ ನಿರ್ದಿಷ್ಟ ದಿನಾಂಕವನ್ನು ಮುಂಚಿತವಾಗಿ ತಿಳಿಸಿ ಮಾರುಕಟ್ಟೆಗೆ ರಾಗಿಯನ್ನು ತರಲು ಸೂಚಿಸುತ್ತೇವೆ ಮತ್ತು ಟೋಕನ್‌ಗಳನ್ನು ನೀಡುತ್ತಿದ್ದೇವೆ. ಇದರಿಂದಾಗಿ ಖರೀದಿ ಕೇಂದ್ರದ ಆವರಣದಲ್ಲಿ ಗೊಂದಲಗಳಿಗೆ ಅವಕಾಶವಿಲ್ಲದಂತೆ ಮಾಡಲಾಗಿದೆ. ರೈತರಿಗೂ ಇದರಿಂದ ಅನುಕೂಲವಾಗಲಿದೆ. ದಿನಗಟ್ಟಲೆ, ಹಗಲುರಾತ್ರಿ ಕಾದುಕುಳಿತುಕೊಳ್ಳುವ ಪ್ರಮೇಯವಿರುವುದಿಲ್ಲ. ಕಾರಣಾಂತರಗಳಿಂದ ರೈತರಿಗೆ ತಿಳಿಸಿದ ದಿನಾಂಕದಂದು ರಾಗಿ ಮಾರಾಟ ಮಾಡಲು ಸಾಧ್ಯವಾಗದಿದ್ದರೆ ಅವರ ಸರದಿಯ ದಿನಾಂಕವನ್ನು ಮತ್ತೆ ತಿಳಿಸುತ್ತೇವೆ. ಮೊದಲ ದಿನ 200 ಕ್ವಿಂಟಾಲ್‌ನಷ್ಟು ರಾಗಿ ಖರೀದಿಸಲಿದ್ದೇವೆ. ನಂತರದ ದಿನಗಳಲ್ಲಿ ಪ್ರಮಾಣ ಹೆಚ್ಚಲಿದೆ ಎಂದರು.
ಕ್ವಿಂಟಾಲ್‌ಗೆ 4290 ರೂ.ಗಳು: ಈ ಬಾರಿ ಪ್ರತಿ ಕ್ವಿಂಟಾಲ್ ರಾಗಿಗೆ 4290ರೂ.ಗಳ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸಿದೆ. ಪ್ರತಿ ಎಕರೆಗೆ 10ಕ್ವಿಂಟಾಲ್ ರಾಗಿಯನ್ನು ಖರೀದಿಸಲು ನಿಗದಿಪಡಿಸಲಾಗಿದ್ದು, ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ರಾಗಿಯನ್ನು ಕೇಂದ್ರದಿಂದ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ರೈತರು ಖರೀದಿ ಕೇಂದ್ರಕ್ಕೆ ರಾಗಿಯನ್ನು ತರುವ ಮುನ್ನ ಚೆನ್ನಾಗಿ ಒಣಗಿಸಿ, ಸ್ವಚ್ಛಗೊಳಿಸಿ ಎಫ್‌ಎಕ್ಯೂ ಮಾನದಂಡಗಳಿಗೆ ಅನುಗುಣವಾಗಿ ತರಲು ಕೋರುತ್ತೇವೆ. ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಜಮಾ ಮಾಡಲಾಗುವುದೆಂದು ಅವರು ತಿಳಿಸಿದರು.
ಹೋರಾಟಕ್ಕೆ ಜಯ ಸಿಕ್ಕಿದೆ: ರಾಗಿ ಖರೀದಿ ಕೇಂದ್ರ ಆರಂಭಗೊಳ್ಳುತ್ತಿರುವುದರ ಕುರಿತು ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ವಿಜಯವಾಣಿಯೊಂದಿಗೆ ಮಾತನಾಡಿ, ಎರಡು ದಿನಗಳ ಹಿಂದೆ ರೈತಸಂಘವು ರಾಗಿ ಖರೀದಿ ಕೇಂದ್ರ ಕಾರ್ಯಾರಂಭಕ್ಕೆ ಆಗ್ರಹಿಸಿ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿತ್ತು. ರಸ್ತೆ ತಡೆ ಚಳವಳಿಯನ್ನು ಕೈಗೊಂಡಿತ್ತು. ನಮ್ಮ ಹೋರಾಟಕ್ಕೆ ಜಯಸಿಕ್ಕಿದೆ. ಆದರೆ ಪ್ರತಿವರ್ಷವೂ ರೈತರು ಹೋರಾಟ ನಡೆಸಿದ ನಂತರವೇ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ ಎನ್ನುವದೇ ಖೇದದ ಸಂಗತಿಯಾಗಿದೆ. ಸಮಯಕ್ಕೆ ಸರಿಯಾಗಿ ಕೇಂದ್ರಗಳನ್ನು ತೆರದು ರೈತರಿಗೆ ಅನುಕೂಲ ಮಾಡಿಕೊಡುವ ಜವಾಬ್ದಾರಿ ಸರ್ಕಾರದ್ದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.