ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಮುಂಗಾರು ಮಳೆ ಕೊರತೆ, ಹಿಂಗಾರು ಜಿಟಿ ಜಿಟಿ ಮಳೆ ನಡುವೆಯೂ ಜಿಲ್ಲೆಯಲ್ಲಿ ಹೊಲಗಳಲ್ಲಿ ರಾಗಿ ತೆನೆಗಳು ಹಚ್ಚ ಹಸಿರಾಗಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಜಿಲ್ಲೆಯಲ್ಲಿ ಮಾವು, ರೇಷ್ಮೆ ಪ್ರಮುಖ ಬೆಳೆಯಾಗಿದ್ದು, ಹೈನುಗಾರಿಕೆಯನ್ನೂ ಹೆಚ್ಚಿನ ರೈತರು ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ರಾಗಿಯನ್ನೂ ಸಾಕಷ್ಟು ರೈತರು ಬೆಳೆಯುತ್ತಿದ್ದು, ಈ ಬಾರಿ ಬಿತ್ತನೆ ವೇಳೆ ಕೆರೆಕಟ್ಟೆ ತುಂಬುವಂತಹ ಮಳೆಯಾಗದಿದ್ದರೂ ಅಲ್ಪಸ್ವಲ್ಪ ಸುರಿದ ಮಳೆಗೆ ರೈತರು ರಾಗಿ ಬಿತ್ತನೆ ನಡೆಸಿದ್ದರು. ಬಳಿಕವೂ ಮುಂಗಾರು ಮಳೆ ವಿರಳಕಂಡು ರಾಗಿ ಬೆಳೆ ನಷ್ಟವಾಗುತ್ತದೆಯೇ ಎಂಬ ಆತಂಕದ ನಡುವೆ ಹಿಂಗಾರು ಮಳೆ ಸಂತಸ ತಂದಿದೆ. ಉತ್ತಮ ರಾಗಿ ಫಸಲು ನಳನಳಿಸುತ್ತಿದ್ದು, ಕೊಯ್ಲು ಸಮಯದಲ್ಲಿ ಜಿಟಿ ಜಿಟಿ ಮಳೆ ಸುರಿಯದೆ ಇದೇ ವಾತಾವರಣ ಮುಂದುವರಿದರೆ ಉತ್ತಮ ಫಸಲು ಕೈಸೇರುತ್ತದೆ ಎನ್ನುತ್ತಾರೆ ಬನ್ನಿಕುಪ್ಪೆ ರೈತ ಶಿವಣ್ಣ.
ವಾರದಲ್ಲಿ ಕೊಯ್ಲು: ಮುಂಗಾರು ಮಳೆ ಒಂದಷ್ಟು ಕೊರತೆ ಕಂಡರೂ ಹಿಂಗಾರು ಮಳೆ ಆಗಿಂದಾಗ್ಗೆ ಉತ್ತಮವಾಗಿ ಸುರಿದ ಕಾರಣ ರಾಗಿ ಪೈರು ಹುಲುಸಾಗಿ ಬಂದು ರಾಗಿ ತೆನೆಗಳು ನಳ ನಳಿಸುತ್ತಿವೆ. ಇನ್ನೊಂದು ವಾರದಲ್ಲಿ ಕೊಯ್ಲು ಪ್ರಾರಂಭವಾಗಲಿದೆ.
ಸಾಲು ಬೆಳೆ: ರಾಗಿ ಜತೆಯಲ್ಲಿ ಜಿಲ್ಲೆಯಲ್ಲಿ್ಲ ಸಾಲು ಬೆಳೆಗಳಾಗಿ ತೊಗರಿ, ಹುಚ್ಚೆಳ್ಳು, ಸಾಸಿವೆ, ಹಲಸಂದೆ, ಜೋಳ, ಅವರೆ, ಹರಳು ಬೆಳೆಯುವ ಸಂಪ್ರದಾಯವಿದೆ. ಜಿಲ್ಲೆಯಲ್ಲಿ 1778 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ರಾಗಿ ಫಸಲಿಗೆ ಸಾಲು ಬೆಳೆಗಳಿಗೆ ತೇವಾಂಶದ ಕೊರತೆ ಬಾರದೆ ಉತ್ತಮ ಸಾಲು ಬೆಳೆ ಫಸಲು ಕೂಡ ಬರುತ್ತಿದೆ. ರಾಗಿ ಕಟಾವಿನ ನಂತರ ಸಾಲು ಬೆಳೆಗಳು ಬರಲಿವೆ.
ಮೇವು ಕೊರತೆ ದೂರ: ರಾಗಿ ಫಸಲು ಬಂದಷ್ಟು ಜಾನುವಾರು ಮೇವಿಗೆ ಲಾಭವಾಗುತ್ತದೆ ರಾಗಿ ಬೆಳೆ ಸಾಲಿನಲ್ಲಿ ಉತ್ತಮ ಜೋಳ ಬಂದಿದೆ. ರಾಗಿ ಬೆಳೆ ಬೆಳೆದಿರುವುದರಿಂದ ಉತ್ತಮ ರಾಗಿ ಪೈರು ಮೇಲೆದ್ದಿದ್ದು, ಹುಲುಸಾಗಿ ಬೆಳೆ ಕಾಣುತ್ತಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಿದೆ ಎನ್ನಲಾಗಿದೆ.
ಬಿತ್ತನೆ ವಿಸ್ತೀರ್ಣ: ಕೃಷಿ ಇಲಾಖೆ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ್ಲ ಒಟ್ಟು 70 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆಯಾಗಿದ್ದು, ರಾಮನಗರ 6,460, ಚನ್ನಪಟ್ಟಣ 4,788, ಮಾಗಡಿ 33,500, ಕನಕಪುರ 17,785, ಹಾರೋಹಳ್ಳಿ 7,580 ಹೆಕ್ಟೇರ್ ವಿಸ್ತೀರ್ಣದಲ್ಲಿ ರಾಗಿ ಬೆಳೆಯಲಾಗಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.
ಜಿಲ್ಲೆಯಲ್ಲಿ ಈ ಭಾರಿ ಅಂದಾಜು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ರಾಗಿ ಬಿತ್ತನೆ ಕೈಗೊಂಡಿದ್ದಾರೆ. ರಾಗಿ ಬೆಳೆಗೆ ಮುಂಗಾರಿನಿಂದ ಉತ್ತಮ ಮಳೆಯಾದ ಕಾರಣ ಶೇ.82 ಉತ್ತಮ ರಾಗಿ ಫಸಲು ಬಂದಿದೆ. ಈಗಾಗಲೇ ಶೇ.5 ರಾಗಿ ಕಟಾವು ಪ್ರಾರಂಭ ಗೊಂಡಿದೆ. 15 ದಿನಗಳಲ್ಲಿ ರಾಗಿ ಕಟಾವು ಸಂಪೂರ್ಣವಾಗಿ ಬರಲಿದೆ. ವಾತಾವರಣದಲ್ಲಿ ಬದಲಾವಣೆ ಕಾಣದೆ ಇದೇ ವಾತಾವರಣ ಇದ್ದರೆ ಉತ್ತಮ ರಾಗಿ ಫಸಲು ರೈತರ ಕೈ ಸೇರಲಿದೆ.
| ಎನ್. ಅಂಬಿಕಾ ಜಂಟಿ ಕೃಷಿ ನಿರ್ದೇಶಕ, ರಾಮನಗರ
ಮುಂಗಾರು ಮಳೆ ಕೊರತೆ ಕಂಡ ಕಾರಣ ರಾಗಿ ಫಸಲು ಕೈ ಸೇರುವುದಿಲ್ಲ ಎಂಬ ಚಿಂತನೆ ಮನೆ ಮಾಡಿತ್ತು. ಹಿಂಗಾರು ಮಳೆ ಉತ್ತಮವಾಗಿ ಆಗಿದ್ದರಿಂದ ಫಸಲು ಭರಪೂರವಾಗಿ ಬಂದಿದ್ದು, ಹೊಲಗಳಲ್ಲಿ ರಾಗಿ ತೆನೆಗಳನ್ನು ನೋಡಿ ಆನಂದವಾಗುತ್ತಿದೆ.
| ಸಿದ್ದರಾಜು ರೈತ, ಕಾಡನಕುಪ್ಪೆ
ಪಾಕ್ಗೆ ತೆರಳಲು ಅನುಮತಿ ನೀಡದ ಕೇಂದ್ರ ಸರ್ಕಾರ; ಹೈಬ್ರಿಡ್ ಮಾದರಿಯಲ್ಲಿ Champions Trophy?
ಉಸಿರಿರುವವರೆಗೂ Darshan ನನ್ನ ಮಗ, ಅದು ಎಂದಿಗೂ ಬದಲಾಗಲ್ಲ: ಸುಮಲತಾ ಅಂಬರೀಷ್