More

    ಲೀಟರ್ ಹಾಲಿಗೆ 1 ರೂ. ಹೆಚ್ಚಳ, ಫೆ.8ರಿಂದ ಪರಿಷ್ಕೃತ ದರ ಜಾರಿ

    ಕೋಲಾರ: ಇತ್ತೀಚೆಗಷ್ಟೆ ಕೆಎಂಎಫ್ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಿರುವ ಬೆನ್ನಲ್ಲೇ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ರೈತರಿಗೆ ಲೀಟರ್‌ಗೆ 1 ರೂ. ಹೆಚ್ಚಿಸಲು ತೀರ್ಮಾನಿಸಿದೆ.

    ಜಿಲ್ಲಾ ಹಾಲು ಒಕ್ಕೂಟದ ಕಚೇರಿಯಲ್ಲಿ ಮಂಗಳವಾರ ನಡೆದ ಆಡಳಿತ ಮಂಡಳಿ ತುರ್ತು ಸಭೆಯಲ್ಲಿ ಸರ್ವ ಸಮ್ಮತ ನಿರ್ಧಾರ ಕೈಗೊಳ್ಳಲಾಗಿದ್ದು, ಪರಿಷ್ಕೃತ ದರ ಫೆ.8ರಿಂದ ಜಾರಿಗೆ ಬರಲಿದೆ.

    ಹಾಲು ಉತ್ಪಾದಕರು ಸಂಕಷ್ಟದಲ್ಲಿರುವುದರಿಂದ ಖರೀದಿ ದರ ಹೆಚ್ಚಿಸಬೇಕೆಂದು ನಿರ್ದೇಶಕರು ಒತ್ತಾಯಿಸಿದಾಗ ಪ್ರತಿಕ್ರಿಯಿಸಿದ ಅಧ್ಯಕ್ಷ ಕೆ.ವೈ.ನಂಜೇಗೌಡ, ಒಕ್ಕೂಟದ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ರೈತರ ಬೇಡಿಕೆ, ಅಗತ್ಯ ಆಧರಿಸಿ 1 ರೂ. ಹೆಚ್ಚಿಸೋಣ ಎಂದಾಗ ಸಮ್ಮತಿಸಿದ ನಿರ್ದೇಶಕರು, ರೈತರ ವಿಚಾರದಲ್ಲಿ ವಿಳಂಬ ಸಲ್ಲದು, ತ್ವರಿತಗತಿಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಿ ಎಂದರು.

    ಕೆಎಂಎಫ್ ಫೆ.1ರಿಂದ ಅನ್ವಯವಾಗುವ ರೀತಿಯಲ್ಲಿ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 2 ರೂ.ನಂತೆ ಹೆಚ್ಚಿಸಿ ಪರಿಷ್ಕರಿಸಿರುವ ಮೊತ್ತದಲ್ಲಿ ಹಾಲು ಉತ್ಪಾದಕರ ರಾಸುಗಳ ವಿಮೆ, ಏಜೆಂಟ್ ಕಮಿಷನ್, ಸಂಘದ ಸಿಬ್ಬಂದಿಗೆ ಹಂಚಿಕೆ ಮಾಡಿ ಕನಿಷ್ಠ 1 ರೂ. ನಂತೆ ಹಾಲು ಉತ್ಪಾದಕರಿಗೆ ಖರೀದಿ ದರ ಹೆಚ್ಚಿಸಲು ನಿರ್ಧರಿಸಲಾಯಿತು.

    ಒಕ್ಕೂಟದ ತುರ್ತು ಆಡಳಿತ ಮಂಡಳಿ ಸಭೆಯಲ್ಲಿ ಕೆಎಂಎಫ್ ಪರಿಷ್ಕರಿಸಿರುವ ಹಾಲು ಮಾರಾಟ ದರವು ಒಕ್ಕೂಟದಿಂದ ಸ್ಯಾಚೆ ರೂಪದಲ್ಲಿ ಮಾರಾಟವಾಗುತ್ತಿರುವ ಅಂದಾಜು 3,60,000 ಲೀಟರ್‌ಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ನಿರ್ದೇಶಕರು ಅಧ್ಯಕ್ಷರ ಗಮನಕ್ಕೆ ತಂದು ಪರಿಷ್ಕೃತ ದರದ ಸಾಧಕ-ಬಾಧಕಗಳನ್ನು ವಿವರಿಸಿದರು.

    ಪ್ರಸ್ತುತ ಒಕ್ಕೂಟದಲ್ಲಿ ಶೇಖರಣೆಯಾಗುತ್ತಿರುವ ಸರಾಸರಿ 8,41,000 ಲೀಟರ್ ಗಳಿಗೆ ಹಂಚಿಕೆ ಮಾಡಿದಲ್ಲಿ 65 ಪೈಸೆ ಆಗುವುದಿದ್ದು, ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಹಾಲಿನ ಗುಣಮಟ್ಟದಲ್ಲಿ ಶೇ.3.5 ಫ್ಯಾಟ್, ಶೇ.8.5 ಎಸ್‌ಎನ್‌ಎಫ್ ಪರಿಗಣಿಸಿ ಹಾಲು ಉತ್ಪಾದಕರಿಗೆ ಪಾವತಿಸುತ್ತಿರುವ 25 ರೂ. ಗಳನ್ನು ಫೆ.8ರಂದು ಬೆಳಗ್ಗೆಯಿಂದಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಪ್ರತಿ ಲೀಟರ್‌ಗೆ 1ರೂ. ನಂತೆ ಹಾಲು ಖರೀದಿ ದರ ಹೆಚ್ಚಿಸಿ ಹಾಲು ಉತ್ಪಾದಕರಿಗೆ 26 ರೂ. ಪಾವತಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

    ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹಧನವಾಗಿ 5 ರೂ. ನೀಡುತ್ತಿದ್ದು ಜಿಲ್ಲಾ ಒಕ್ಕೂಟ ಖರೀದಿಸುವ ಹಾಲಿಗೆ 26 ರೂ. ನೀಡುವುದರಿಂದ ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 31 ರೂ. ಸಿಗಲಿದೆ. ಪ್ರತಿ ಟನ್ ಪಶು ಆಹಾರಕ್ಕೆ 1000 ರೂ. ಗಳ ರಿಯಾಯಿತಿ ನೀಡಿರುವುದಕ್ಕೆ ಕೆಎಂಎಫ್ ಅಧ್ಯಕ್ಷರು, ಮಂಡಳಿ ನಿರ್ದೇಶಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ಅಭಿನಂದನಾ ನಿರ್ಣಯ ಕೈಗೊಳ್ಳಲಾಯಿತು.

    ನಿರ್ದೇಶಕರಾದ ಕೆ.ಎನ್.ನಾಗರಾಜ್, ವಿ.ಮಂಜುನಾಥರೆಡ್ಡಿ, ಜೆ.ಕಾಂತರಾಜ್, ವೈ.ಬಿ.ಅಶ್ವತ್ಥನಾರಾಯಣ, ಡಿ.ವಿ. ಹರೀಶ್, ಎನ್.ಸಿ.ವೆಂಕಟೇಶ್, ಎನ್.ಹನುಮೇಶ್, ಸುನಂದಮ್ಮ, ಕಾಂತಮ್ಮ, ಎಸ್.ವಿ. ಸುಬ್ಬಾರೆಡ್ಡಿ, ಡಾ.ಎನ್.ಜಗದೀಶ್ ಕುಮಾರ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಎಚ್.ವಿ.ತಿಪ್ಪಾರೆಡ್ಡಿ ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts