ಖಾಸಗಿ ಬಳಕೆಗೆ ಮಿಲಿಟರಿ ಏರ್ ಆಂಬುಲೆನ್ಸ್ ನೀಡಿದ ರಕ್ಷಣಾ ಸಚಿವೆ ರಾಜೀನಾಮೆಗೆ ಆಗ್ರಹ

ನವದೆಹಲಿ: ಮಿಲಿಟರಿ ಏರ್​ ಆಂಬುಲೆನ್ಸ್ (ಹೆಲಿಕಾಪ್ಟರ್​) ಅನ್ನು ಖಾಸಗಿ ಬಳಕೆಗೆ ಕೊಟ್ಟ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಹಾಗೂ ಅದನ್ನು ಉಪಯೋಗಿಸಿಕೊಂಡ ತಮಿಳುನಾಡು ಉಪಮುಖ್ಯಮಂತ್ರಿ ಪನ್ನೀರಸೆಲ್ವಂ ಕೂಡಲೇ ರಾಜೀನಾಮೆ ನೀಡಬೇಕು ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್​ ಆಗ್ರಹಿಸಿದ್ದಾರೆ.

ಪನ್ನೀರಸೆಲ್ವಂ ತಮ್ಮ ಅನಾರೋಗ್ಯ ಪೀಡಿತ ಸಹೋದರನನ್ನು ಮಧುರೈನಿಂದ ಚೆನ್ನೈ ಆಸ್ಪತ್ರೆಗೆ ಕರೆತರಲು ನಿರ್ಮಲಾ ಸೀತಾರಾಮನ್​ ಮಿಲಿಟರಿ​ ಏರ್​ ಆಂಬುಲೆನ್ಸ್​ ನೀಡಿದ್ದರು. ತನ್ನಿಮಿತ್ತ ರಕ್ಷಣಾ ಸಚಿವೆಯನ್ನು ಭೇಟಿಯಾಗಿ ಕೃತಜ್ಞತೆ ತಿಳಿಸಲು ನವದೆಹಲಿಗೆ ಪನ್ನೀರಸೆಲ್ವಂ ತೆರಳಿದ್ದರು. ಆಗ ಅವರೇ ಈ ಬಗ್ಗೆ ಮಾಧ್ಯಮದವರಿಗೆ ತಿಳಿಸಿದ್ದರು. ಇದಾದ ಒಂದು ದಿನದ ಬಳಿಕ ಸ್ಟಾಲಿನ್​ ಅವರಿಬ್ಬರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಮಿಲಿಟರಿ ಹೆಲಿಕಾಪ್ಟರ್​ನ್ನು ಸ್ವಂತ ಬಳಕೆಗೆ ಅದು ಹೇಗೆ ಕೊಟ್ಟರು ಎಂದು ತಿಳಿಯುತ್ತಿಲ್ಲ ಎಂದಿದ್ದಾರೆ.

ಪನ್ನೀರಸೆಲ್ವಂ ಸಹೋದರನಿಗೆ ಆರೋಗ್ಯ ತುಂಬ ಹದಗೆಟ್ಟು ಮಧುರೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿನ ವೈದ್ಯರು ಕೂಡಲೇ ಚೆನ್ನೈ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆ ಕೊಡಲು ಸೂಚಿಸಿದರು. ಅದಕ್ಕೆ ಪನ್ನೀರ​ ಸೆಲ್ವಂ ಏರ್ ಆಂಬುಲೆನ್ಸ್​ ಮೊರೆ ಹೋಗಬೇಕಾಯಿತು. ಆದರೆ, ಇದ್ದ ಎರಡು ವಿಮಾನಗಳು ಸಾಧ್ಯವಿಲ್ಲವೆಂದಾಗ ನಿರ್ಮಲಾ ಸೀತಾರಾಮನ್​ ಅವರು ಮಾನವೀಯತೆಯ ದೃಷ್ಟಿಯಿಂದ ಮಿಲಿಟರಿ ಏರ್​ ಆಂಬುಲೆನ್ಸ್​ನಲ್ಲಿ ವ್ಯವಸ್ಥೆ ಮಾಡಿದ್ದರು.

ಆದರೆ ಹೆಲಿಕಾಪ್ಟರ್​ ನೀಡಿದ್ದನ್ನು ಪನ್ನೀರ ಸೆಲ್ವಂ ಸಾರ್ವಜನಿಕವಾಗಿ ಮಾತನಾಡಿದ್ದಕ್ಕೆ ನಿರ್ಮಲಾ ಸೀತಾರಾಮನ್​ ಕೂಡ ಸ್ವಲ್ಪ ಬೇಸರ ವ್ಯಕ್ತಪಡಿಸಿದ್ದು ಅವರು ದೆಹಲಿಗೆ ಬಂದರೂ ಭೇಟಿಗೆ ನಿರಾಕರಿಸಿದ್ದಾರೆ ಎನ್ನಲಾಗಿದೆ.