ಕೃಷಿಕರಿಗೆ ಆಫ್ರಿಕನ್ ಕೊಕ್ಕರೆ ನೆರವು!

ಪ್ರವೀಣ್‌ರಾಜ್ ಕೊಲ ಕಡಬ

ಆಫ್ರಿಕನ್ ಬಸವನಹುಳ ಕಾಟದಿಂದ ಕೃಷಿ ಕಳೆದುಕೊಳ್ಳುವ ಆತಂಕದಲ್ಲಿದ್ದ ಆಲಂಕಾರು ಗ್ರಾಮದ ರೈತಾಪಿ ಜನರಿಗೆ ಈ ವರ್ಷವೂ ಆಫ್ರಿಕನ್ ಕೊಕ್ಕರೆಗಳು ವರವಾಗಿವೆ. ದೈತ್ಯ ಕೊಕ್ಕರೆಗಳಿಗೆ ಆಹಾರವಾಗುವ ಮೂಲಕ ಬಸವನ ಹುಳ ಸಂತಾನ ನಾಶವಾಗುತ್ತಿದೆ.

ಮಳೆಗಾಲ-ಬೇಸಿಗೆ ಎನ್ನದೆ ಕೃಷಿ ತೋಟಗಳಿಗೆ ಮಹಾಮಾರಿಯಾಗಿರುವ ಆಫ್ರಿಕನ್ ಹುಳ ನಾಶಕ್ಕೆ ರೈತರು ಕೀಟನಾಶಕ ಕಂಡು ಹಿಡಿದು ಭಾಗಶಃ ಯಶಸ್ವಿಯಾಗುತ್ತಿದ್ದಂತೆ, ಕಳೆದ ವರ್ಷ ಬಸವನಹುಳು ಪೀಡಿತ ತೋಟಗಳಿಗೆ ಆಫ್ರಿಕನ್ ಕೊಕ್ಕರೆಗಳು ಲಗ್ಗೆಯಿಟ್ಟಿದ್ದರಿಂದ ಶೇ.50ರಷ್ಟು ಹುಳಗಳು ನಾಶವಾಗಿವೆ. ಈ ವರ್ಷವೂ ಆಗಮಿಸಿದ ಕೊಕ್ಕರೆಗಳು ಬಸವನಹುಳಗಳನ್ನು ಹುಡುಕಿ ತಿನ್ನುತ್ತಿವೆ.

ಐದಾರು ವರ್ಷಗಳಿಂದ ಕುಮಾರಧಾರಾ ನದಿ ಪಾತ್ರದ ಅಡಕೆ, ತೆಂಗು ತೋಟಗಳಲ್ಲಿ ಸಂತಾನ ಅಭಿವೃದ್ಧಿ ಮಾಡಿಕೊಂಡು ಕೃಷಿ ತೋಟಗಳಿಗೆ ಕಾಡುತ್ತಿದ್ದ ಬಸವನಹುಳ ನಾಶಕ್ಕೆ ಈ ದೈತ್ಯ ಕೊಕ್ಕರೆಗಳೇ ರಾಮಬಾಣ. ಆಲಂಕಾರು ಪರಿಸರಕ್ಕೆ ವಿಶೇಷ ಅತಿಥಿಗಳ ಆಗಮನದಿಂದ ಸಂತೋಷಗೊಂಡಿರುವ ಜನ, ಈ ಕೊಕ್ಕರೆಗಳನ್ನು ಸಲಹುತ್ತಿದ್ದಾರೆ. ಪಟಾಕಿ ಶಬ್ದಗಳಿಗೆ ಓಡಿ ಹೋಗಬಹುದೆಂಬ ಭೀತಿಯಿಂದ ಈ ಭಾಗದಲ್ಲಿ ಪಟಾಕಿ ಸಿಡಿಸುವುದನ್ನೇ ನಿಲ್ಲಿಸಿ ಕೊಕ್ಕರೆಗಳಿಗೆ ಪೂರಕ ವಾತಾವರಣ ನಿರ್ಮಿಸಿಕೊಡಲಾಗಿದೆ.

ಪ್ರಕೃತಿಯೇ ಕರುಣಿಸಿದ ವರ!
ಕೊಕ್ಕರೆಗಳು ಬೆಳಗ್ಗೆ ಹಾಗೂ ಸಾಯಂಕಾಲ ಅಡಕೆ ತೋಟಕ್ಕೆ ಬಂದು ಬಾಧೆ ನೀಡುತ್ತಿರುವ ಆಫ್ರಿಕನ್ ಬಸವನ ಹುಳಗಳನ್ನು ತಿನ್ನುತ್ತಿವೆ. ಇದು ಪ್ರಕೃತಿಯೇ ರೈತರಿಗೆ ಕರುಣಿಸಿದ ವರ. ಹುಳ ನಾಶ ಮಾಡುವಲ್ಲಿ ಕೀಟನಾಶಕಗಳಿಗಿಂತಲೂ ಈ ಕೊಕ್ಕರೆಗಳು ಪರಿಣಾಮಕಾರಿ. ದೈತ್ಯ ಕೊಕ್ಕರೆಗಳು ಹೊಟ್ಟೆ ತುಂಬಿಸಿಕೊಳ್ಳುವುದರ ಜತೆಗೆ ಸಂತಾನ ಅಭಿವೃದ್ಧಿ ಮಾಡಿಕೊಂಡು ಕೃಷಿಕರಿಗೆ ವರದಾನವಾಗಿವೆ.

ಸಾವಿರಕ್ಕೂ ಅಧಿಕ ರೈತರಿಗೆ ಕಾಟ: ಆಫ್ರಿಕನ್ ಬಸವನಹುಳ ಪುತ್ತೂರು ತಾಲೂಕಿನ ಸವಣೂರು, ಆಲಂಕಾರು, ಕೊಲ ಗ್ರಾಮಗಳಲ್ಲಿ ಸಮಸ್ಯೆ ಸೃಷ್ಟಿಸಿವೆ. ಆಲಂಕಾರಿನಲ್ಲಿ ಎಂಟು ವರ್ಷ ಹಿಂದೆ ಮುಳ್ಳಂಕೊಚ್ಚಿ ಎಂಬಲ್ಲಿ ತೋಟದ ಅಲ್ಲಲ್ಲಿ ಒಂದೊಂದು ಕಾಣಿಸಿಕೊಂಡ ಬೃಹತ್ ಗಾತ್ರದ ಬಸವನಹುಳ, ಈಗ ತೋಟದ ಮೂಲೆಮೂಲೆಯಲ್ಲೂ ಇವೆ. ಆಲಂಕಾರು ಗ್ರಾಮದ ಬುಡೇರಿಯಾ, ಪಜ್ಜಡ್ಕ, ಸೊರ‌್ವಲ್ತಡಿ, ಕಜೆ, ಬಡ್ಡಮೆ, ಪೊಯ್ಯಲಡ್ಡ, ಅರಂತಹಿತ್ಲು, ನಾಡ್ತಿಲ, ತೋಟಂತಿಲ, ನೈಯ್ಯಲ್ಗ, ಸವಣೂರು ಗ್ರಾಮದ ಇಡ್ಯಾಡಿ, ಕುಕ್ಕುಜೆ, ಪೆರಿಯಡ್ಕ ಪರಿಸರದ ತೋಟಗಳಲ್ಲಿ ಹೆಚ್ಚು ಇವೆ. ಕೊಲ ಗ್ರಾಮದ ಕೊಲ್ಯ ಕಡೆಂಬಿಕಲ್, ಏಣಿತಡ್ಕ ಪ್ರದೇಶಕ್ಕೂ ಕಾಲಿಟ್ಟು, ಪ್ರಭಾವ ಹೆಚ್ಚಿಸಿಕೊಳ್ಳುತ್ತಿವೆ. ಸಾವಿರಕ್ಕೂ ಅಧಿಕ ರೈತ ಕುಟುಂಬಗಳ ಕೃಷಿ ಆಸ್ತಿ ಆಕ್ರಮಿಸಿಕೊಂಡಿವೆ.

Leave a Reply

Your email address will not be published. Required fields are marked *