ರಾಜಸ್ಥಾನದ ಬಿಕಾನೇರ್​ ಬಳಿ ಮಿಗ್​ 21 ವಿಮಾನ ಪತನ, ಪೈಲಟ್​ ಸುರಕ್ಷಿತ

ಜೈಪುರ: ರಾಜಸ್ಥಾನದ ಬಿಕಾನೇರ್​ ಬಳಿ ಭಾರತೀಯ ವಾಯುಪಡೆಯ ಮಿಗ್​ 21 ಯುದ್ಧ ವಿಮಾನ ಪತನವಾಗಿದೆ. ವಿಮಾನದಲ್ಲಿದ್ದ ಪೈಲಟ್​ ಸುರಕ್ಷಿತವಾಗಿ ಪ್ಯಾರಚೂಟ್​ ಮೂಲಕ ಕೆಳಗಿಳಿದಿದ್ದಾರೆ.

ಯುದ್ಧ ವಿಮಾನ ಬಿಕಾನೇರ್​ ಬಳಿಯ ನಲ್​ ಏರ್​ಬೇಸ್​ನಿಂದ ಹೊರಟಿದ್ದ ವಿಮಾನ ಬಿಕಾನೇರ್​ ನಗರದಿಂದ 12 ಕಿ.ಮೀ. ದೂರದಲ್ಲಿರುವ ಶೋಭಸರ್​ ಕಿ ಧನಿ ಬಳಿ ಪತನಗೊಂಡಿದೆ. ವಿಮಾನ ಪತನವಾಗುವುದು ಖಚಿತವಾಗುತ್ತಿದ್ದಂತೆ ಪೈಲಟ್​ ಪ್ಯಾರಾಚೂಟ್​ ಮೂಲಕ ವಿಮಾನದಿಂದ ಜಿಗಿದು ಸುರಕ್ಷಿತವಾಗಿ ಪಾರಾಗಿದ್ದಾರೆ. ವಿಮಾನ ಪತನಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.

ವಿಮಾನ ನಿರ್ಜನ ಪ್ರದೇಶದಲ್ಲಿ ಪತನವಾಗಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಬಿಕಾನೇರ್​ ಎಸ್​ಪಿ ಪ್ರದೀಪ್​ ಮೋಹನ್ ಶರ್ಮಾ ತಿಳಿಸಿದ್ದಾರೆ. (ಏಜೆನ್ಸೀಸ್​)