ಎಸ್​ಪಿ ಕಾರ್ಯಕರ್ತರ ಮೇಲೆ ಮುನಿಸಿಕೊಂಡರಾ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ? ನೀವು ಕಲಿಯುವುದು ತುಂಬ ಇದೆ ಎಂದು ಹೇಳಿದ್ದೇಕೆ?

ಫಿರೋಜಾಬಾದ್​ : ನಗರದಲ್ಲಿ ಏರ್ಪಡಿಸಿದ್ದ ಎಸ್​ಪಿ-ಬಿಎಸ್​ಪಿ ಮೈತ್ರಿ ಪ್ರಚಾರ ಸಭೆಯಲ್ಲಿ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಎಸ್​ಪಿ ಕಾರ್ಯಕರ್ತರ ವರ್ತನೆಯಿಂದ ಕಿರಿಕಿರಿ ಅನುಭವಿಸಿದ್ದಾರೆ. ಅದನ್ನು ಅವರು ಹೇಳಿಕೊಂಡಿದ್ದಾರೆ ಕೂಡ.

ಸಮಾಜವಾದಿ ಪಕ್ಷದ ಕಾರ್ಯಕರ್ತರು ಬಹುಜನ ಸಮಾಜ ಪಕ್ಷದ ಕಾರ್ಯಕರ್ತರನ್ನು ನೋಡಿ ಶಿಸ್ತು ಕಲಿಯಬೇಕು. ಮುಖಂಡರು ಭಾಷಣ ಮಾಡುತ್ತಿದ್ದಾಗ ಅದನ್ನು ಶಾಂತಿಯಿಂದ ಆಲಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಮಾಯಾವತಿ ಹೇಳಿದ್ದಾರೆ.

ಫಿರೋಜಾಬಾದ್​ ಸಭೆಯಲ್ಲಿ ಮಾಯಾವತಿ ಮಾತನಾಡುತ್ತಿದ್ದಾಗ ಎಸ್​ಪಿ ಕಾರ್ಯಕರ್ತರು ಘೋಷಣೆಗಳನ್ನು ದೊಡ್ಡ ಧ್ವನಿಯಲ್ಲಿ ಕೂಗುತ್ತಿದ್ದರು. ಅದನ್ನು ನೋಡಿದ ಮಾಯಾವತಿ, ನಾವು ಭಾಷಣ ಮಾಡುತ್ತಿದ್ದಾಗ ನೀವು ಮಧ್ಯ ಜೋರಾಗಿ ಕೂಗುತ್ತಿದ್ದೀರಿ. ಮಾತುಗಳನ್ನು ಹೇಗೆ ಆಲಿಸಬೇಕು ಎಂಬುದನ್ನು ಬಿಎಸ್​ಪಿ ಕಾರ್ಯಕರ್ತರನ್ನು ನೋಡಿ ಕಲಿಯಬೇಕು. ಎಸ್​ಪಿ ಬೆಂಬಲಿಗರು ಕಲಿಯುವುದು ತುಂಬ ಇದೆ ಎಂದಿದ್ದಾರೆ. ಈ ಸಭೆಯಲ್ಲಿ ಎಸ್​ಪಿ ಮುಖ್ಯಸ್ಥ ಅಖಿಲೇಶ್​ ಯಾದವ್​ ಕೂಡ ಭಾಗವಹಿಸಿದ್ದರು.

ನಂತರ ಕಾಂಗ್ರೆಸ್​ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮತದಾರರು ಬಿಜೆಪಿ, ಕಾಂಗ್ರೆಸ್​ ಪಕ್ಷಗಳ ತಂತ್ರಕ್ಕೆ ಬಲಿಯಾಗಬಾರದು. ಆಮಿಷಗಳಿಗೆ ಮರುಳಾಗಬಾರದು ಎಂದು ಕರೆ ನೀಡಿದರು.