ವಿರಾಟ್​ ಕೊಹ್ಲಿ ಕುರಿತು ಮೈಕಲ್​ ವಾನ್​ ನುಡಿದ ಭವಿಷ್ಯವೇನು?

ಲಂಡನ್​: ಇಂಗ್ಲೆಂಡ್​ ವಿರುದ್ಧದ 3ನೇ ಟೆಸ್ಟ್​ ಪಂದ್ಯದಲ್ಲಿ ಗೆದ್ದು 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಕಮ್​ ಬ್ಯಾಕ್​ ಮಾಡಿರುವ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಕುರಿತು ಇಂಗ್ಲೆಂಡ್​ನ ಮಾಜಿ ನಾಯಕ ಮೈಕಲ್​ ವಾನ್​ ಭವಿಷ್ಯ ನುಡಿದಿದ್ದು, ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಕೊಹ್ಲಿ ಶತಕ ಗಳಿಸುವ ಸಾಧ್ಯತೆ ಅತಿ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ನಾಯಕ ವಿರಾಟ್​ ಕೊಹ್ಲಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದು, 3 ಪಂದ್ಯಗಳಿಂದ 2 ಶತಕ, 2 ಅರ್ಧ ಶತಕ ಸೇರಿದಂತೆ 73.33ರ ಸರಾಸರಿಯಲ್ಲಿ 440 ರನ್​ ಕಲೆ ಹಾಕಿದ್ದಾರೆ. ಈ ಮೂಲಕ ಅವರು 2014ರ ಇಂಗ್ಲೆಂಡ್​ ಪ್ರವಾಸದಲ್ಲಿ ಅನುಭವಿಸಿದ್ದ ಬ್ಯಾಟಿಂಗ್​ ವೈಫಲ್ಯದ ಕಹಿ ನೆನಪಿನಿಂದ ಹೊರಬಂದಿದ್ದಾರೆ.

ಆಗಸ್ಟ್​ 30 ರಂದು ಸೌತಾಂಪ್ಟನ್​ನಲ್ಲಿ ನಾಲ್ಕನೇ ಟೆಸ್ಟ್​ ಪಂದ್ಯ ಪ್ರಾರಂಭವಾಗುತ್ತಿದೆ. ಈ ಪಂದ್ಯದಲ್ಲೂ ಕೊಹ್ಲಿ ತಮ್ಮ ಉತ್ತಮ ನಿರ್ವಹಣೆ ತೋರುವ ವಿಶ್ವಾಸ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟ್ವಿಟರ್​ ಬಳಕೆದಾರರೊಬ್ಬರು ನಾಲ್ಕನೇ ಪಂದ್ಯದಲ್ಲಿ ಕೊಹ್ಲಿ ಶತಕ ಗಳಿಸುವ ಸಾಧ್ಯತೆ ಎಷ್ಟಿದೆ ಎಂದು ಮೈಕಲ್​ ವಾನ್​ಗೆ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವಾನ್​ ಸಾಧ್ಯತೆ ಅತಿ ಹೆಚ್ಚಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಕೊಹ್ಲಿ ಮುಂದಿನ ಎರಡು ಪಂದ್ಯಗಳಲ್ಲೂ ಬ್ಯಾಟಿಂಗ್​ನಲ್ಲಿ ಮಿಂಚು ಹರಿಸಲಿದ್ದಾರೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಕೊಹ್ಲಿ ನಾಟಿಂಗ್​ಹ್ಯಾಂನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ತಲಾ 97 ಮತ್ತು 103 ರನ್​ ಗಳಿಸಿದ್ದರು. ಈ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್​ ವಿರುದ್ಧ 203 ರನ್​ಗಳ ಅಂತರದಿಂದ ಗೆಲುವು ಸಾಧಿಸಿತ್ತು. (ಏಜೆನ್ಸೀಸ್​)