ರಾಹುಲ್ ಶತಕ ವ್ಯರ್ಥ, ಮುಂಬೈಗೆ ಜೈ

ಮುಂಬೈ: ಕನ್ನಡಿಗ ಕೆಎಲ್ ರಾಹುಲ್ (100* ರನ್, 64 ಎಸೆತ, 6 ಬೌಂಡರಿ, 6 ಸಿಕ್ಸರ್) ಸಿಡಿಸಿದ ಚೊಚ್ಚಲ ಐಪಿಎಲ್ ಶತಕದ ನಡುವೆಯೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-12ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ 3 ವಿಕೆಟ್​ಗಳಿಂದ ಶರಣಾಯಿತು. ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಹಂಗಾಮಿ ನಾಯಕ ಕೈರಾನ್ ಪೊಲ್ಲಾರ್ಡ್ (83ರನ್, 31 ಎಸೆತ, 3 ಬೌಂಡರಿ, 10 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್​ಗೆ ಬೆದರಿದ ಪಂಜಾಬ್ ತಂಡ ಬೃಹತ್ ಮೊತ್ತ ರಕ್ಷಿಸಿಕೊಳ್ಳಲು ವಿಫಲವಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ ರಾಹುಲ್ ಅಬ್ಬರದ ಬ್ಯಾಟಿಂಗ್ ಹಾಗೂ ಕ್ರಿಸ್ ಗೇಲ್ (63ರನ್, 36 ಎಸೆತ, 3 ಬೌಂಡರಿ, 7 ಸಿಕ್ಸರ್) ಜೋಡಿ ಬಿರುಸಿನ ಫಲವಾಗಿ ಪಂಜಾಬ್ ತಂಡ ವಿಕೆಟ್​ಗೆ 197 ರನ್ ಗಳಿಸಿತು. ಪ್ರತಿಯಾಗಿ ಮುಂಬೈ ತಂಡ 20 ಓವರ್​ಗಳಲ್ಲಿ 7 ವಿಕೆಟ್​ಗೆ 198 ರನ್​ಗಳಿಸಿ ಜಯದ ನಗೆ ಬೀರಿತು. ಅಂತಿಮ ಓವರ್​ನಲ್ಲಿ ಅವಶ್ಯಕತೆ ಇದ್ದ 15 ರನ್ ಕಲೆಹಾಕಿದ ಮುಂಬೈ ತಂಡ ರೋಚಕ ಜಯ ದಾಖಲಿಸಿತು.

ಮುಂಬೈಗೆ ಆರಂಭಿಕ ಆಘಾತ: ಬೃಹತ್ ಮೊತ್ತ ಬೆನ್ನಟ್ಟಿದ ಮುಂಬೈ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರೋಹಿತ್ ಶರ್ಮ ಅನುಪಸ್ಥಿತಿಯಲ್ಲಿ ಇನಿಂಗ್ಸ್ ಜವಾಬ್ದಾರಿ ಹೊತ್ತುಕೊಂಡಿದ್ದ ಕ್ವಿಂಟನ್ ಡಿಕಾಕ್ (24ರನ್, 23 ಎಸೆತ, 2 ಬೌಂಡರಿ) ಹಾಗೂ ಸಿದ್ದೇಶ್ ಲಾಡ್ (15ರನ್, 13 ಎಸೆತ, 1 ಬೌಂಡರಿ, 1 ಸಿಕ್ಸರ್) ಜೋಡಿ ಕೆಲಕಾಲ ಬಿರುಸಿನ ಬ್ಯಾಟಿಂಗ್ ನಡೆಸಿತು. ಆದರೆ, ಉತ್ತಮ ಆರಂಭ ನಿರೀಕ್ಷೆಯಲ್ಲಿದ್ದ ಈ ಜೋಡಿಗೆ ಮೊಹಮದ್ ಶಮಿ ಆಘಾತ ನೀಡಿದರು. ಪದಾರ್ಪಣೆ ಪಂದ್ಯವಾಡಿದ ಸಿದ್ದೇಶ್ ಲಾಡ್, ಶಮಿ ಎಸೆತವನ್ನು ಥರ್ಡ್ ಮ್ಯಾನ್ ಕಡೆಗೆ ತಳ್ಳಲು ಹೋಗಿ ಬೌಲ್ಡ್ ಆದರು. ಬಳಿಕ ಬಂದ ಸೂರ್ಯಕುಮಾರ್ ಯಾದವ್ (21) ಡಿಕಾಕ್ ಜತೆಗೂಡಿ 2ನೇ ವಿಕೆಟ್​ಗೆ 28 ರನ್ ಗಳಿಸಿದ್ದ ವೇಳೆ ಕರ›ನ್​ಗೆ ವಿಕೆಟ್ ನೀಡಿದರು. ಇದಾದ ಕೆಲಹೊತ್ತಿನಲ್ಲೇ ಡಿಕಾಕ್ ಕೂಡ ಅಶ್ವಿನ್ ಎಸೆತದಲ್ಲಿ ಮಿಲ್ಲರ್ ಕ್ಯಾಚ್ ನೀಡಿ ಡಗ್​ಔಟ್ ಸೇರಿಕೊಂಡರು.

ಅಬ್ಬರಿಸಿದ ಕೈರಾನ್ ಪೊಲ್ಲಾರ್ಡ್

ಮುಂಬೈ ತಂಡ ಆರಂಭಿಕ ಕುಸಿತದ ನಡುವೆಯೂ ಕೈರಾನ್ ಪೊಲ್ಲಾರ್ಡ್ ಬಿರುಸಿನ ಬ್ಯಾಟಿಂಗ್ ಮೂಲಕ ಗೆಲುವಿನ ಆಸೆ ಚಿಗುರಿಸಿದರು. ಯುವ ಬ್ಯಾಟ್ಸ್ ಮನ್ ಇಶಾನ್ ಕಿಶನ್ (7) ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (19) ಜತೆಗೂಡಿ 4ನೇ ಹಾಗೂ 5ನೇ ವಿಕೆಟ್​ಗೆ ಕ್ರಮವಾಗಿ 32 ಹಾಗೂ 41 ರನ್ ಕಲೆಹಾಕಿದರು. ಸೋಲಿನ ಸುಳಿಯಲ್ಲಿದ್ದ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದರು. ಬಳಿಕ ಬಂದ ಕೃನಾಲ್ ಪಾಂಡ್ಯ (1) ಇಲ್ಲದ ಹೊಡೆತಕ್ಕೆ ಮುಂದಾಗಿ ಶಮಿಗೆ ವಿಕೆಟ್ ನೀಡಿದರು. ಒಂದೆಡೆ, ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮುಂದುವರಿಸಿದ ಪೊಲ್ಲಾರ್ಡ್, ಅಲ್ಜಾರಿ ಜೋಸೆಫ್ (15*ರನ್, 13 ಎಸೆತ, 2 ಬೌಂಡರಿ) ಜತೆಗೂಡಿ ಬಿರುಸಿನ 54 ರನ್ ಸೇರಿಸಿ ತಂಡದ ಗೆಲುವನ್ನು ಸುಲಭವಾಗಿಸಿದರು. ಅಂತಿಮ ಓವರ್​ನಲ್ಲಿ 15 ರನ್ ಅವಶ್ಯಕತೆ ಇದ್ದಾಗ ತಲಾ ಒಂದು ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದ ಪೊಲ್ಲಾರ್ಡ್ ಗೆಲುವಿನಂಚಿನಲ್ಲಿ ವಿಕೆಟ್ ನೀಡಿದರು. ಜೋಸೆಫ್ ಕೊನೇ ಎಸೆತದಲ್ಲಿ ಅವಶ್ಯಕತೆ ಇದ್ದ 2 ರನ್ ಕದಿಯುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಪೊಲ್ಲಾರ್ಡ್​ಗೆ ಮುಂಬೈ ನಾಯಕತ್ವ

ಗಾಯದ ಸಮಸ್ಯೆಗೆ ತುತ್ತಾಗಿರುವ ರೋಹಿತ್ ಶರ್ಮಗೆ ಮುಂಬರುವ ವಿಶ್ವಕಪ್ ಟೂರ್ನಿ ದೃಷ್ಟಿಯಿಂದ ವಿಶ್ರಾಂತಿ ನೀಡಲಾಯಿತು. ರೋಹಿತ್ ಬದಲಿಗೆ ಕೈರಾನ್ ಪೊಲ್ಲಾರ್ಡ್ ತಂಡ ಮುನ್ನಡೆಸಿದರು. ಕಳೆದ ಐದು ವರ್ಷಗಳಿಂದ ತಂಡದಲ್ಲಿದ್ದರೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ಮುಂಬೈನ ಸಿದ್ದೇಶ್ ಲಾಡ್ ಕಡೆಗೂ ಐಪಿಎಲ್​ಗೆ ಪದಾರ್ಪಣೆ ಮಾಡಿದರು.

ರಾಹುಲ್-ಗೇಲ್ ಭರ್ಜರಿ ಆರಂಭ

ಟಿ20 ಕ್ರಿಕೆಟ್ ಇತಿಹಾಸದ ದೈತ್ಯ ಆಟಗಾರನೆಂದೇ ಗುರುತಿಸಿಕೊಂಡಿರುವ ಕ್ರಿಸ್ ಗೇಲ್, ರಾಹುಲ್​ಗೆ ಅಗತ್ಯ ಸಾಥ್ ನೀಡುವ ಮೂಲಕ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದ್ದರು. ಕ್ರಿಸ್ ಗೇಲ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಜೋಡಿ ಮೊದಲ 4 ಓವರ್​ಗಳಲ್ಲಿ ಕೇವಲ 20 ರನ್ ಗಳಿಸಿತ್ತು. ಬಳಿಕ ಈ ಜೋಡಿ ಏಕಾಏಕಿ ರನ್​ಗತಿ ಏರಿಸಿತು. ಮುಂಬೈ ವೇಗಿ ಜೇಸನ್ ಬೆಹ್ರನ್​ಡಾರ್ಫ್ ಎಸೆದ 5ನೇ ಓವರ್​ನಲ್ಲಿ 3 ಸಿಕ್ಸರ್ ಸಹಿತ 23 ರನ್ ಸಿಡಿಸಿದ ಗೇಲ್ ಬಿರುಸಿನ ಆಟಕ್ಕೆ ಚಾಲನೆ ನೀಡಿದರು. ಬಳಿಕ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಎಸೆದ 9ನೇ ಓವರ್​ನಲ್ಲೂ 17 ರನ್ ಗಳಿಸಿದರು. ಮತ್ತೊಂದು ತುದಿಯಲ್ಲಿದ್ದ ರಾಹುಲ್ ಕೂಡ ಗೇಲ್ ಜತೆ ಪೈಪೋಟಿಗಿಳಿದಂತೆ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಇದರ ಫಲವಾಗಿ 62 ಎಸೆತಗಳಲ್ಲೇ ಪಂಜಾಬ್ ತಂಡ 100ರ ರನ್ ಗಡಿ ದಾಟಿತು. ಇದಾದ ಕೆಲಹೊತ್ತಿನಲ್ಲೇ ಮುಂಬೈ ನಗರದ ತಾಪಮಾನಕ್ಕೆ ಬಳಲಿದಂತೆ ಕಂಡ ಗೇಲ್ ಫಿಸಿಯೋ ಸಹಾಯದ ಮೊರೆ ಹೋದರು. ಆದರೆ, ಬೆಹ್ರನ್​ಡಾರ್ಫ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್​ನಲ್ಲಿದ್ದ ಕೃನಾಲ್ ಪಾಂಡ್ಯಗೆ ಕ್ಯಾಚ್ ನೀಡಿದರು. ಈ ಜೋಡಿ ಮೊದಲ ವಿಕೆಟ್​ಗೆ ಎದುರಿಸಿದ 77 ಎಸೆತಗಳಲ್ಲಿ 116 ರನ್ ಪೇರಿಸಿ ಬೇರ್ಪಟ್ಟಿತು. ಗೇಲ್ ನಿರ್ಗಮನದೊಂದಿಗೆ ಪಂಜಾಬ್ ತಂಡದ ರನ್ ವೇಗವೂ ಕುಸಿತ ಕಂಡಿತು. ಒಂದು ಹಂತದಲ್ಲಿ 200ಕ್ಕೂ ಅಧಿಕ ಮೊತ್ತ ಗಳಿಸುವ ಅವಕಾಶ ಹೊಂದಿದ್ದ ಪಂಜಾಬ್ ತಂಡಕ್ಕೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಡಿವಾಣ ಹಾಕಿದರು. ಕೇವಲ 10 ರನ್ ಅಂತರದಲ್ಲಿ ಡೇವಿಡ್ ಮಿಲ್ಲರ್ (7) ಹಾಗೂ ಕನ್ನಡಿಗ ಕರುಣ್ ನಾಯರ್ (5) ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಮಿಲ್ಲರ್ ವಿಕೆಟ್ ಕೀಪರ್ ಡಿಕಾಕ್​ಗೆ ಕ್ಯಾಚ್ ನೀಡಿದರೆ, ಪ್ರಸಕ್ತ ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದ ಕರುಣ್ ನಾಯರ್ ಕೂಡ ದೊಡ್ಡ ಮೊತ್ತ ಪೇರಿಸಲು ವಿಫಲರಾದರು.

04 ರಾಹುಲ್ ಪ್ರಸಕ್ತ ಐಪಿಎಲ್​ನಲ್ಲಿ ಶತಕ ಸಿಡಿಸಿದ 4ನೇ ಬ್ಯಾಟ್ಸ್ ಮನ್ ಎನಿಸಿಕೊಂಡರು. ಇದಕ್ಕೂ ಮೊದಲು ರಾಜಸ್ಥಾನ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್, ಸನ್​ರೈಸರ್ಸ್ ಹೈದರಾಬಾದ್ ತಂಡದ ಜಾನಿ ಬೇರ್​ಸ್ಟೋ ಮತ್ತು ಡೇವಿಡ್ ವಾರ್ನರ್ ಶತಕ ಸಿಡಿಸಿದ್ದರು.

ಪಾಂಡ್ಯ ಬೆವರಿಳಿಸಿದ ರಾಹುಲ್!

ಹಾರ್ದಿಕ್ ಪಾಂಡ್ಯ ಎಸೆದ ಇನಿಂಗ್ಸ್ 19ನೇ ಓವರ್​ನಲ್ಲಿ 25 ರನ್ ಸಿಡಿಸುವ ಮೂಲಕ ಕೆಎಲ್ ರಾಹುಲ್ ಮುಂಬೈ ಬೌಲರ್​ನ ಬೆವರಿಳಿಸಿದರು. ಆರಂಭಿಕ ನಾಲ್ಕು ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿದ ರಾಹುಲ್ 5ನೇ ಎಸೆತದಲ್ಲಿ ಸಿಂಗಲ್ ಗಳಿಸಿದರು. ಕೊನೇ ಎಸೆತದಲ್ಲಿ ಮಂದೀಪ್ ಸಿಂಗ್ 2 ರನ್ ಕಸಿದರು. ಬುಮ್ರಾ ಎಸೆದ ಅಂತಿಮ ಓವರ್​ನ ಮೊದಲ ಎಸೆತವನ್ನು ಸಿಕ್ಸರ್​ಗೆ ಅಟ್ಟಿದ ರಾಹುಲ್, 2ನೇ, 3ನೇ ಎಸೆತದಲ್ಲಿ ರನ್ ಗಳಿಸಲು ವಿಫಲರಾದರು. 4ನೇ ಎಸೆತವನ್ನು ಲಾಂಗ್​ಆಫ್​ನತ್ತ ತಳ್ಳಿ ಐಪಿಎಲ್​ನಲ್ಲಿ ಚೊಚ್ಚಲ ಶತಕ ಪೂರೈಸಿ ಸಂಭ್ರಮಿಸಿದರು. ರಾಹುಲ್ ಅಬ್ಬರದ ಫಲವಾಗಿ ಪಂಬಾಜ್ ತಂಡ 200ರ ಗಡಿ ಸಮೀಪ ತಲುಪಿತು.

ಕೆಎಲ್ ರಾಹುಲ್ ಐಪಿಎಲ್​ನಲ್ಲಿ ಶತಕ ಸಿಡಿಸಿದ 2ನೇ ಕನ್ನಡಿಗ. 2009ರಲ್ಲಿ ಮನೀಷ್ ಪಾಂಡೆ ಆರ್​ಸಿಬಿ ಪರ ಈ ಸಾಧನೆ ಮಾಡಿದ ಮೊದಲಿಗರೆನಿಸಿದ್ದರು ಮತ್ತು ಐಪಿಎಲ್​ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯರೂ ಆಗಿದ್ದರು.

Leave a Reply

Your email address will not be published. Required fields are marked *