ಪ್ರಭಾವಿ, ಅಧಿಕಾರಿಗಳ ಜೇಬಿಗೆ ಕೂಲಿ ಖಾತ್ರಿ!

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅರ್ಹರಿಗೆ ಅನುಕೂಲ ಆಗಿದ್ದಕ್ಕಿಂತ, ಪ್ರಭಾವಿ ಹಾಗೂ ಅಧಿಕಾರವುಳ್ಳವರ ‘ಬಂಡವಾಳ’ವಾಗಿದ್ದೇ ಹೆಚ್ಚು. ಯೋಜನೆಯಲ್ಲಿ ರಾಜ್ಯಾದ್ಯಂತ ಭಾರಿ ಅವ್ಯವಹಾರ ನಡೆದಿರುವ ಆರೋಪಗಳು ಕೇಳಿಬಂದಿವೆ. ವಿದ್ಯಾರ್ಥಿಗಳು, ಗೃಹಿಣಿಯರು, ಶಿಕ್ಷಕಿಯರು, ಊರಲ್ಲಿ ಇಲ್ಲದವರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಬಳಸಿ ಜಾಬ್​ಕಾರ್ಡ್ ಸೃಷ್ಟಿಸಿ ಅವ್ಯವಹಾರ ನಡೆಸಲಾಗಿದೆ. ಮುಂಚೆ ಅಂಚೆ ಕಚೇರಿಗೆ ಹಣ ಪಾವತಿಸಲಾಗುತ್ತಿತ್ತು. ಅಲ್ಲಿ ದುರುಪಯೋಗವಾಗುವುದನ್ನು ತಪ್ಪಿಸಲು ರಾಷ್ಟ್ರೀಕೃತ ಬ್ಯಾಂಕ್ ಖಾತೆಗೆ ನೀಡುವ ನಿಯಮ ಜಾರಿಯಾಯಿತು. ಶೇ.50ಕ್ಕಿಂತ ಹೆಚ್ಚು ಜಾಬ್​ಕಾರ್ಡ್ ಹೊಂದಿರುವ ವ್ಯಕ್ತಿಗಳು ಕೆಲಸ ಮಾಡದಿದ್ದರೂ ಖಾತೆಗೆ ಹಣ ಜಮಾ ಆಗುತ್ತಿದೆ. ಇದನ್ನು ಬೇರೆ ಬೇರೆ ರೂಪದಲ್ಲಿ ನೌಕರರು, ಜನಪ್ರತಿನಿಧಿಗಳು ವಾಪಸ್ ಪಡೆದು ಅಕ್ರಮವೆಸಗುವುದು ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಬೆಳಕಿಗೆ ಬಂದಿದೆ. ಈ ಕುರಿತ ವಿಸõತ ವರದಿ ಇಲ್ಲಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷನೇ ಕೂಲಿಕಾರ

ಗ್ರಾಪಂ ಅಧ್ಯಕ್ಷನೇ ನರೇಗಾ ಕೂಲಿಕಾರ. ಸಹೋದರ ರೇಷ್ಮೆ ಇಲಾಖೆ ನೌಕರನಿದ್ದರೂ ಜಾಬ್​ಕಾರ್ಡ್ ಹೋಲ್ಡರ್. ಸಹೋದರನ ಪತ್ನಿ ಮೃತಪಟ್ಟು ನಾಲ್ಕು ವರ್ಷವಾದರೂ ಆಕೆ ಕೆಲಸ ಮಾಡಿದ್ದಾಳೆಂದು ಹಣ ಲೂಟಿ ಹಾಗೂ ಅಧಿಕಾರ ದುರುಪಯೋಗ ಪ್ರಕರಣ ವಿಜಯಪುರ ಜಿಲ್ಲೆಯ ಹಡಗಲಿ ಗ್ರಾಪಂನಲ್ಲಿ ಬೆಳಕಿಗೆ ಬಂದಿದೆ.

ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಅವಟಿ 2011ರ ಜೂ.9ರಲ್ಲಿ ಜಾಬ್​ಕಾರ್ಡ್ ಪಡೆದು ಕುಟುಂಬ ಸದಸ್ಯರ ಹೆಸರಿನಲ್ಲಿ ಸರ್ಕಾರಕ್ಕೆ ಲಕ್ಷಾಂತರ ರೂ. ಮೋಸ ಮಾಡಿದ್ದಾನೆ. ಸಹೋದರ ಸುಭಾಷ್ ಅವಟಿ ಪತ್ನಿ ಶೈಲಾ (ಅತ್ತಿಗೆ) 2014ರ ಫೆ.27ರಂದು ಮೃತಪಟ್ಟಿದ್ದಾರೆ. ಆದರೆ, ಅವರ ಹೆಸರಿನಲ್ಲಿ ರಸ್ತೆ ಸುಧಾರಣೆ, ಸಸಿ ನೆಡುವುದು, ದೇವಸ್ಥಾನ ಜೀಣೋದ್ಧಾರ, ಚರಂಡಿ ನಿರ್ವಣ, ಕೃಷಿ ಹೊಂಡ ನಿರ್ವಣದಲ್ಲಿ ಕೂಲಿ ಕೆಲಸ ಮಾಡಿದ್ದಾಳೆ ಎಂದು ದಾಖಲೆ ನೀಡಿ ಹಣ ಗುಳುಂ ಮಾಡಿದ್ದಾನೆ. ಸಹೋದರ ಚಂದ್ರಶೇಖರ ಅವಟಿ ಇಂಡಿ ಪಟ್ಟಣದ ರೇಷ್ಮೆ ಇಲಾಖೆಯಲ್ಲಿ ಸರ್ಕಾರಿ ನೌಕರ. 2017ರ ಜೂ.23ರಲ್ಲಿ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದರೂ, ಅವರ ಖಾತೆಗೆ ಹಣ ಜಮೆಯಾಗಿದೆ.

ಅವಿಶ್ವಾಸ ಗೊತ್ತುವಳಿಗೆ ಆದೇಶ: ಮಲ್ಲಿಕಾರ್ಜುನ ಅವಟಿ ಸರ್ಕಾರದ ಬೊಕ್ಕಸಕ್ಕೆ ಸುಮಾರು -ಠಿ;25 ಲಕ್ಷ ವಂಚಿಸಿರುವ ಕುರಿತು ಪರಿಶೀಲನೆ ನಡೆಸಿದ ಉಪವಿಭಾಗಾಧಿಕಾರಿ, ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಆದೇಶಿಸಿದ್ದಾರೆ.

# 40 ಲಕ್ಷ ರೂ. ಅಕ್ರಮ, 24 ಲಕ್ಷ ರೂ. ವಸೂಲಿ

ಶಿವಮೊಗ್ಗ ಜಿಲ್ಲೆಯಲ್ಲಿ 2.02 ಲಕ್ಷ ಜಾಬ್ ಕಾರ್ಡ್ ದಾರರಿದ್ದಾರೆ. 201011ರಿಂದ ಈವರೆಗೆ 328 ದೂರು ದಾಖಲಾಗಿದ್ದು, 148 ಪ್ರಕರಣ ಸಾಬೀತಾಗಿವೆ. ಅಕ್ರಮದ ಮೊತ್ತ -ಠಿ;40.68 ಲಕ್ಷಗಳಲ್ಲಿ -ಠಿ;24.27 ಲಕ್ಷ ವಸೂಲಿ ಮಾಡಲಾಗಿದೆ. ವಾಸ್ತವಕ್ಕಿಂತಲೂ ಹೆಚ್ಚಿನ ಹಣ ಡ್ರಾ, ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಿನ ಯಂತ್ರೋಪಕರಣಗಳ ಬಳಕೆ, ಕೆಲಸ ಮಾಡ ದವರ ಬ್ಯಾಂಕ್ ಖಾತೆಗೆ ಹಣ ಹಾಕಿರುವ ಪ್ರಕರಣ ಹೆಚ್ಚಿವೆ.

ಹೊಸಪೇಟೆಯಲ್ಲಿ ಪಗಾರ ಪವಾಡ

ಬಳ್ಳಾರಿ ಜಿಲ್ಲೆ ಹೊಸಪೇಟೆ ಗ್ರಾಮದ ವಯೋವೃದ್ಧೆ ಮೋಟಮ್ಮ ನಡೆದಾಡುವುದೇ ಕಷ್ಟ. ತೊಗರಿಹಂಕಲ್ ಪಿಡಿಒ, ತಾಂತ್ರಿಕ ಸಹಾಯಕರ ಪ್ರಕಾರ ಮೋಟಮ್ಮ ಹರಿಜನ ಕಾಲನಿಯಲ್ಲಿ ನೀರುಗಾಲುವೆ ಕಾಮಗಾರಿಯ ಕೂಲಿ ಮಾಡಿ 4,032 ರೂ. ಪಡೆದಿದ್ದಾರೆ. ಅಲ್ಲಂಪುರದ ಶ್ರುತಿ ಮದುವೆಯಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದರೂ ಬ್ಯಾಗದಹಳ್ಳಿ ಗ್ರಾಮದಲ್ಲಿ ಕೂಲಿ ಮಾಡಿ 3,360 ರೂ. ಪಡೆದ ದಾಖಲೆಗಳಿವೆ. ಮೂಗ್ತಿಹಳ್ಳಿಯಲ್ಲಿ 6ನೇ ತರಗತಿ ಓದುತ್ತಿರುವ ಮತ್ತಾವರದ ಕಾರ್ತಿಕ್, ಟಿಎಂಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುವ ಅಶ್ವಿನಿ ರಸ್ತೆ ನಿರ್ಮಾಣ ಕಾಮಗಾರಿಯ ಕೂಲಿ ಮಾಡಿ 3,276 ರೂ. ಗಳಿಸಿದ್ದಾರೆ.

ಹೀಗೂ ಉಂಟು…

ಯಾವುದೇ ಕಾಮಗಾರಿಯನ್ನು ಕ್ರಿಯಾ ಯೋಜನೆ ಅನ್ವಯವೇ ಮಾಡಬೇಕು. ಬದಲಾದರೆ ನಿಯಮಾನುಸಾರ ಕ್ರಿಯಾ ಯೋಜನೆ ಬದಲಾಯಿಸಿಕೊಳ್ಳಲು ಅವಕಾಶವಿದ್ದು, ಈ ಯೋಜನೆ ಪ್ರಕಾರವೇ ಹಣ ಪಾವತಿ ಮಾಡಬೇಕು. ಚಿಕ್ಕಮಗಳೂರು ಜಿಲ್ಲೆಯ ಹಲವು ಪಂಚಾಯಿತಿಗಳಲ್ಲಿ ಕ್ರಿಯಾ ಯೋಜನೆಯಲ್ಲಿ 4 ಲಕ್ಷ ರೂ. ಇದ್ದರೆ 4.20 ಲಕ್ಷ ರೂ. ಪಾವತಿಸಲಾಗಿದೆ. ಒಂದು ಇಂಗುಗುಂಡಿಗೆ 12 ರಿಂಗ್ ಹಾಕಿ ಸುತ್ತಲೂ ಕಲ್ಲು ಹಾಕಿ ಬಿಗಿಗೊಳಿಸಬೇಕು. 6 ಮಾತ್ರ ಬಳಸಿ ಕಲ್ಲಿನ ಬದಲು ಮಣ್ಣು ಹಾಕಿದ ಉದಾಹರಣೆಗಳಿವೆ. 100 ಮೀ. ರಸ್ತೆ ಬದಲಿಗೆ 80 ಮೀ., ಒಂದೇ ಕಾಮಗಾರಿಗೆ ಸಂಕೇತ ಬದಲಿಸಿ ಎರಡಕ್ಕೆ ಹಣ ಪಡೆದಿರುವುದು ಕಂಡುಬಂದಿದೆ.

ಗ್ರಾಪಂ ಕಾರ್ಯದರ್ಶಿ ವಿರುದ್ಧ ದೂರು

ಉಡುಪಿ ಜಿಲ್ಲೆ ಹಾವಂಜೆ ಗ್ರಾಪಂ ಕಾರ್ಯದರ್ಶಿ ಪತಿ ಮನೆಯಲ್ಲಿ ಬಾವಿ ತೋಡಲು ಕೂಲಿ ಮಾಡಿದ ಬಗ್ಗೆ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಕಾರ್ಯದರ್ಶಿ ಪತಿ ಸರ್ಕಾರಿ ನೌಕರ ರಲ್ಲದ ಕಾರಣ ಕಾರ್ಡ್ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಲ್ಲೆಲ್ಲಿ, ಯಾವ್ಯಾವ ಅಕ್ರಮ ಹಾಗೂ ಕ್ರಮ

# ರಾಮನಗರ ಜಿಲ್ಲೆಯಲ್ಲಿ ಸಾಕಷ್ಟು ಅಕ್ರಮ ನಡೆದಿದ್ದರೂ, ಅತಿ ಹೆಚ್ಚು ಸುದ್ದಿಯಾಗಿದ್ದು ಕನಕಪುರ ತಾಲೂಕು ಕಬ್ಬಾಳು ಗ್ರಾಪಂ. ಇಲ್ಲಿ 4-5 ವರ್ಷಗಳಲ್ಲಿ 8 ಪ್ರಕರಣಗಳಲ್ಲಿ 10 ಲಕ್ಷ ರೂ. ಅಕ್ರಮ ನಡೆದಿದೆ.

# ಕೊಪ್ಪಳ ತಾಲೂಕು ಹುಲಿಗಿ ಗ್ರಾಪಂನಲ್ಲಿ 4 ಶೌಚ ಗೃಹಗಳಿಗೆ ಎರಡೆರಡು ಬಿಲ್ ಮಾಡಿದ್ದು, ಆಗ ಅಧ್ಯಕ್ಷೆಯಾಗಿದ್ದ ರೇಣುಕಮ್ಮ, ಪಿಡಿಒ ಕೃಷ್ಣಾ ರಡ್ಡಿ ಅವರಿಂದ -ಠಿ;1.53 ಲಕ್ಷ ವಸೂಲಿಗೆ ತಾಪಂ ಇಒ ಆದೇಶಿಸಿದ್ದಾರೆ.

# ಕುಷ್ಟಗಿ ತಾಲೂಕು ಹಿರೇಮನ್ನಾಪೂರ ಗ್ರಾಪಂ ವ್ಯಾಪ್ತಿ ಕಾಮಗಾರಿಯಲ್ಲಿ ಜಿಪಂ ಉಪವಿಭಾಗದ ಜೆಇ ಸಂತೋಷ, ಎಇಇ ಈರಣ್ಣಯ್ಯ 54 ಲಕ್ಷ ರೂ. ಅವ್ಯವಹಾರ ನಡೆದಿದ್ದು, ವಸೂಲಿಗೆ ಆದೇಶಿಸಲಾಗಿದೆ.

# ಬಳ್ಳಾರಿ ಜಿಲ್ಲೆಯಲ್ಲಿ ಮೃತಪಟ್ಟವರ ಹಾಗೂ ಸಂಬಂಧಿಕರ ಹೆಸರಲ್ಲಿ ಅವ್ಯವಹಾರ ನಡೆಸಿದ ನಾಲ್ವರು ಪಿಡಿಒಗಳ ಅಮಾನತು, ಅಧ್ಯಕ್ಷ ಹಾಗೂ ಸದಸ್ಯರ ಸದಸ್ಯತ್ವ ರದ್ದುಗೊಳಿಸಲಾಗಿದೆ.

# ಹೂವಿನಹಡಗಲಿ ತಾಲೂಕು ನಂದಿಹಳ್ಳಿ ಗ್ರಾಪಂನಲ್ಲಿ ಮೃತ ವ್ಯಕ್ತಿಗಳ ಹೆಸರಲ್ಲಿ 2.50 ಲಕ್ಷ ರೂ. ಬಿಲ್ ಪಾವತಿದ ಗ್ರಾಪಂ ಅಧ್ಯಕ್ಷ ಕಂಠಿ ವೀರೇಶ್ ಸದಸ್ಯತ್ವ ರದ್ದುಗೊಳಿಸಿ, ಪಿಡಿಒ ಶೇಖರಪ್ಪ ಮಡಿವಾಳ ಅಮಾನತು ಮಾಡಲಾಗಿದೆ.

# ಸಿರಗುಪ್ಪ ತಾಲೂಕು ಕೆ.ಸುಗೂರು ಗ್ರಾಪಂಯಲ್ಲಿ 1.50 ಲಕ್ಷ ರೂ. ದುರುಪಯೋಗ, ಮೃತಪಟ್ಟವರ ಹೆಸರಲ್ಲಿ 41 ಸಾವಿರ ರೂ. ಬಿಲ್ ಮಾಡಿಕೊಂಡ ಗುರುಸ್ವಾಮಿ ಗ್ರಾಪಂ ಸದಸ್ಯತ್ವ ರದ್ದು, ಪಿಡಿಒ ಬಸವನಗೌಡರನ್ನು ಅಮಾನತು ಮಾಡಲಾಗಿದೆ.

# ಹೊಳಗುಂದಿ ಗ್ರಾಪಂನಲ್ಲಿ ಮೃತರ ಹೆಸರಲ್ಲಿ 3 ಸಾವಿರ ರೂ. ಬಿಲ್ ಮಾಡಿಕೊಂಡ ಪಿಡಿಒ ಕೆಂಚಪ್ಪರನ್ನು ಅಮಾನತು ಮಾಡಲಾಗಿದೆ.

# 2018 ಅ.1ರಂದು ಹಡಗಲಿ ತಾಲೂಕು ಸೋವೇನಹಳ್ಳಿ ಗ್ರಾಪಂನಲ್ಲಿ ಜೆಸಿಬಿ ಬಳಕೆ ಹಿನ್ನೆಲೆ ಪಿಡಿಒ ಜಗಳೂರು ಕೊಟ್ರೇಶರನ್ನು ಅಮಾನತುಗೊಳಿಸಲಾಗಿದೆ.

# ಮೈಸೂರು ಜಿಲ್ಲೆಯಲ್ಲಿ ಸತ್ತವರ ಹಾಗೂ ಅಪ್ರಾಪ್ತನ ಹೆಸರಿನಲ್ಲಿ ಬಿಲ್ ಮಾಡಿರುವ ಪ್ರಕರಣಗಳಿವೆ. ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಮತ್ತು ಬೆಟ್ಟತುಂಗ ಗ್ರಾಮದಲ್ಲಿ ಸತ್ತವರ ಹೆಸರಲ್ಲಿ ಜಾಬ್​ಕಾರ್ಡ್ ಮಾಡಿಸಿ ಬಿಲ್ ಮಾಡಲಾಗಿದೆ.

# ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ, ಹೊಂಗನೂರು, ಪುಣಜನೂರು, ತೆರಕಣಾಂಬಿ, ಬೇರಂಬಾಡಿ ಸೇರಿ ಹಲವು ಕಡೆ ಜಾಬ್​ಕಾರ್ಡ್​ದಾರರ ಹೆಸರಿಗೆ ಹಣ ಹಾಕಿ ಜನಪ್ರತಿನಿಧಿಗಳು ಪಡೆಯುವುದು ಗುಟ್ಟಾಗಿ ನಡೆಯುತ್ತಿದೆ.

# ಧಾರವಾಡ ಜಿಲ್ಲೆಯ ಕುಂದಗೋಳ, ಕಲಘಟಗಿ ತಾಲೂಕಿನ ಕೆಲ ಗ್ರಾಪಂಗಳಲ್ಲಿ ಗೋಲ್‍ಮಾಲ್ ನಡೆದ ಬಗ್ಗೆ ಎಸಿಬಿ, ಲೋಕಾಯುಕ್ತ ಮೊದಲಾದ ಏಜೆನ್ಸಿಗಳಿಗೆ ದೂರು ಸಲ್ಲಿಕೆಯಾಗಿದ್ದು, ತನಿಖೆ ಹಂತದಲ್ಲಿವೆ.

# ಹಾವೇರಿ ಜಿಲ್ಲೆಯಲ್ಲಿ ಗ್ರಾಪಂ ಸದಸ್ಯರೇ ಕಾಮಗಾರಿ ಗುತ್ತಿಗೆ ಪಡೆದು ಯಂತ್ರಗಳಿಂದ ಮಾಡಿಸುತ್ತಾರೆ ಎಂಬ ಆರೋಪಗಳಿವೆ.

# ಗದಗ ಜಿಲ್ಲೆಯಲ್ಲಿ ಗ್ರಾಪಂ ಪಿಡಿಒ ಮತ್ತು ಅಧ್ಯಕ್ಷ, ಉಪಾಧ್ಯಕ್ಷ ನಕಲಿ ಬಿಲ್ ಸೃಷ್ಟಿಸಿ ಅವ್ಯವಹಾರ ನಡೆಸಿದ್ದಾರೆ. ಶೇ.60 ಪಿಡಿಒ-ಅಧ್ಯಕ್ಷರ ಪಾಲಾದರೆ, ಶೇ.40 ಜಾಬ್​ಕಾರ್ಡ್ ಕೊಟ್ಟವರಿಗೆ ನೀಡಲಾಗುತ್ತಿದೆ.

# ಕೋಲಾರ ಜಿಲ್ಲೆಯಲ್ಲಿ 17 ದೂರುಗಳು ದಾಖಲಾಗಿವೆ. ಬಂಗಾರಪೇಟೆಯ ರಾಮಸಾಗರ ಗ್ರಾಪಂ ವ್ಯಾಪ್ತಿಯಲ್ಲಿ -ಠಿ;5 ಲಕ್ಷ ವೆಚ್ಚದಲ್ಲಿ ನಿರ್ವಿುಸಬೇಕಿದ್ದ ಕಣವನ್ನು 1 ಲಕ್ಷ ರೂ.ನಲ್ಲಿ ಕಳಪೆಯಾಗಿ ಮಾಡಲಾಗಿದೆ. ಮುಳಬಾಗಿಲು ತಾಲೂಕಿನ ಅಂಗೊಂಡಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸತ್ತವರು, ವಿದ್ಯಾರ್ಥಿನಿ ಹೆಸರಲ್ಲಿ ಹಣ ಪಡೆಯಲಾಗಿದೆ.

# ಹೊಸದುರ್ಗ ತಾಲೂಕು ದೇವಿಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ ನೌಕರರು, ವಯೋವೃದ್ಧರು, ವಿದ್ಯಾರ್ಥಿಗಳಿಗೆ ಜಾಬ್​ಕಾರ್ಡ್ ವಿತರಿಸಿದ ದೂರಿದ್ದು, ತನಿಖೆ ನಡೆದಿದೆ.

# ಬೆಳಗಾವಿ ಜಿಲ್ಲೆಯಲ್ಲಿ 2015ರಿಂದ 2018ರ ಅವಧಿಯಲ್ಲಿ 2,81,39,067 ರೂ. ಅವ್ಯವಹಾರ ನಡೆದಿದೆ. ಅವ್ಯವಹಾರದ ಹಣ ವಸೂಲಿ ಮಾಡುವಂತೆ ಸರ್ಕಾರಕ್ಕೆ ಜಿಲ್ಲಾ ಒಂಬುಡ್ಸ್​ಮನ್ ಡಾ.ಎ.ಜೆ.ಧಮಾಳೆ ಶಿಫಾರಸು ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಜೆಸಿಬಿಯಿಂದ ಕೆಲಸ ಮಾಡಿಸುತ್ತಿರುವ ದೂರುಗಳಿವೆ. ಬಾಗೇಪಲ್ಲಿಯ ನಲ್ಲುಗಟ್ಟಲಪಲ್ಲಿಯಲ್ಲಿ ಬಿಲ್ ಮಂಜೂರಾತಿಗೆ ಒತ್ತಾಯಿಸಿ ಪಿಡಿಒ ಶ್ರೀನಿವಾಸ್ ಮೇಲೆ ಸ್ಥಳೀಯ ಮುಖಂಡರು ಹಲ್ಲೆ ನಡೆಸಿದ್ದಾರೆ, ಯಲ್ಲಂಪಲ್ಲಿ ಗ್ರಾಪಂ ಪಿಡಿಒ ನಾರಾಯಣಸ್ವಾಮಿ ಅಮಾನತು ಮಾಡಲಾಗಿದೆ.

ತುಮಕೂರು ಜಿಲ್ಲೆಯ ಮಲ್ಲಿಗೆರೆ, ಹಾಗಲವಾಡಿ, ಗಾಣಧಾಳು, ವಿರೋಪಸಂದ್ರ ಮತ್ತಿತರರ ಗ್ರಾಪಂ ಅಧಿಕಾರಿಗಳು -ಠಿ;38 ಕೋಟಿ ದುರುಪಯೋಗಪಡಿಸಿಕೊಂಡಿದ್ದಾರೆ. ತಿಪಟೂರು ತಾಲೂಕು ಮತ್ತಿಹಳ್ಳಿ ಗ್ರಾಪಂ ಅವ್ಯವಹಾರ ಬಗ್ಗೆ ದೂರು ನೀಡಿದ್ದರೂ ತನಿಖೆಯಾಗಿಲ್ಲ.