ಪ್ರಕಾಶ ಎಸ್. ಶೇಟ್ ಹುಬ್ಬಳ್ಳಿ
ಎಟಿಎಂ, ಬಂಗಾರದ ಅಂಗಡಿ, ಮನೆ ಕಳ್ಳತನದಂತಹ ಅಪರಾಧಿ ಕೃತ್ಯದಲ್ಲಿ ಕುಖ್ಯಾತಿ ಪಡೆದಿರುವ ಹರಿಯಾಣದ ಮೇವಾತ್ ಗ್ಯಾಂಗ್ ಕರ್ನಾಟಕದಲ್ಲಿ ಆಕ್ಟಿವ್ ಆಗಿದೆ. ರಾಜ್ಯದಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಕಳ್ಳತನ ಪ್ರಕರಣದಲ್ಲಿ ಮೇವಾತ್ ಗ್ಯಾಂಗ್ನ ಕೈವಾಡವಿದೆ ಎನ್ನುವ ಬಲವಾದ ಸಂದೇಹ ಮೂಡಿದೆ. ಅದರಲ್ಲೂ ಬೀದರ್ನಲ್ಲಿ ಮೇವಾತ್ ಗ್ಯಾಂಗ್ನ ಕೆಲವರು ಪೊಲೀಸರ ಬಲೆಗೆ ಬಿದ್ದಿರುವುದು ಈ ಸಂದೇಹಕ್ಕೆ ಸಾಕ್ಷ್ಯ ಒದಗಿಸಿದಂತಿದೆ.
ಹುಬ್ಬಳ್ಳಿಯ ಕೇಶ್ವಾಪುರದ ಭುವನೇಶ್ವರಿ ಜುವೆಲರ್ಸ್ನಲ್ಲಿ ಜು. 16ರಂದು ಕಳ್ಳತನ ನಡೆದಿದೆ. ಗ್ಯಾಸ್ ಕಟರ್ ಬಳಸಿ ಅಂಗಡಿಯ ಬಾಗಿಲು ಮುರಿದಿರುವ ಕಳ್ಳರು ಲಾಕರ್ ಸಹ ಮುರಿದು ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಇವರ ಚಲನವಲನಗಳನ್ನು ಪೊಲೀಸರು ಸೂಕ್ಷ್ಮವಾಗಿ ಜಾಲಾಡಿದ್ದಾರೆ. ಇವರು ಸ್ಥಳೀಯರಲ್ಲ ಬದಲಿಗೆ ಬೇರೆ ರಾಜ್ಯದಿಂದ ಬಂದವರು ಅದರಲ್ಲೂ ಮೇವಾತ್ ಗ್ಯಾಂಗ್ಗೆ ಸೇರಿದವರು ಎಂದು ಪೊಲೀಸರು ಶಂಕಿಸಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ಚಲನವಲನಗಳನ್ನು ಅವಲೋಕಿಸಿದ್ದಾಗಿ ಜು. 14ರಂದೇ ಈ ಗ್ಯಾಂಗ್ ಹುಬ್ಬಳ್ಳಿಗೆ ಎಂಟ್ರಿ ಕೊಟ್ಟಿರುವಂತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜ್ಯದ ನಾನಾ ಕಡೆ ಕಳ್ಳತನ:
ರಾಜ್ಯದ ವಿವಿಧೆಡೆ ಎಂಟಿಎಂ, ಬಂಗಾರದ ಅಂಗಡಿ, ಮನೆಗಳ್ಳತನ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ಕಳ್ಳತನದ ಪ್ಯಾಟರ್ನ್ ಒಂದೇ ತರನಾಗಿದೆ. ಇದನ್ನು ಗಮನಿಸಿದಾಗ ಮೇವಾತ್ ಗ್ಯಾಂಗ್ನದ್ದೇ ಈ ಕೆಲಸ ಎಂದು ಪೊಲೀಸರು ಶಂಕಿಸಿದ್ದಾರೆ. ಕಳ್ಳತನ ಮಾಡುವುದರಲ್ಲಿ ನಿಷ್ಣಾತರಾಗಿರುವ ಇವರು, ಪೊಲೀಸರ ಕೈಗೆ ಸುಲಭಕ್ಕೆ ಸಿಕ್ಕಿ ಬೀಳುವವರಲ್ಲ. ಒಂದೊಮ್ಮೆ ಹರಿಯಾಣದ ಮೇವಾತ್ ಪ್ರದೇಶದಲ್ಲಿ ಸೇರಿಕೊಂಡರಂತೂ ಪ್ರಕರಣದ ಕಥೆ ಮುಗಿದೇ ಹೋಯಿತು.
ಇದೇ ಗ್ಯಾಂಗ್ ಬೀದರ್ನ ಹಳ್ಳಿಖೇಡ್ದಲ್ಲಿ ಎಟಿಎಂ ದರೋಡೆ ಮಾಡಿತ್ತು. ಬೀದರ್ ಜಿಲ್ಲಾ ಪೊಲೀಸರು ಚಾಕಚಕ್ಯತೆಯಿಂದ ಪ್ರಕರಣ ಬೆನ್ನಟ್ಟಿದ ಪರಿಣಾಮ ಮೇವಾತ್ ಗ್ಯಾಂಗ್ನ ಏಳು ಜನರ ಪೈಕಿ ಮೂವರು ಬಂಧನಕ್ಕೆ ಒಳಗಾದರು. ಇನ್ನುಳಿದ ನಾಲ್ವರು ಪೊಲೀಸರ ಕೈಗೆ ಸಿಗದೇ ಪರಾರಿಯಾಗಿದ್ದಾರೆ. ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಕರ್ನಾಟಕದ 8 ಕಡೆಗಳಲ್ಲಿ, ಮಹಾರಾಷ್ಟ್ರದ 3 ಕಡೆ ಹಾಗೂ ತೆಲಂಗಾಣದ ಒಂದು ಎಟಿಎಂನಲ್ಲಿನ ಹಣ ಕದ್ದೊಯ್ದಿದ್ದಾಗಿ ಬಾಯ್ಬಿಟ್ಟಿದ್ದಾರೆ.
ಬೀದರ್ನ ಹಳ್ಳಿಖೇಡ್ ಸೇರಿ ಬಸವ ಕಲ್ಯಾಣ, ಚಿಟಗುಪ್ಪ, ವಿಜಯಪುರ ಜಿಲ್ಲೆಯ ಎರಡು ಕಡೆ, ಬೆಳಗಾವಿ ಜಿಲ್ಲೆಯ ಯಮಕನಮರಡಿ, ಅಂಕಲಿ, ಚಿಕ್ಕೋಡಿ, ತೆಲಂಗಾಣದ ಸದಾಶಿವಪೇಟೆ, ಮಹಾರಾಷ್ಟ್ರದ ಉಮರ್ಗಾ, ಮುರುಮನಲ್ಲಿಯೂ ಗ್ಯಾಸ್ ಕಟರ್ ಬಳಸಿ ಎಟಿಎಂ ಒಡೆದು ಹಣ ದೋಚಿದ್ದಾಗಿ ಬಂಧಿತ ಮೇವಾತ್ ಗ್ಯಾಂಗ್ನವರು ಒಪ್ಪಿಕೊಂಡಿದ್ದಾರೆ.
ಹುಬ್ಬಳ್ಳಿ ಸೇರಿ ಹಾಸನ, ಬೆಳ್ಳಂದೂರು, ದೊಡ್ಡಬಳ್ಳಾಪುರ, ಸಿಂಗಾದಗೆರೆಯಲ್ಲಿ ನಡೆದಿರುವ ಕಳ್ಳತನದ ಪ್ಯಾಟರ್ನ್ ಒಂದೇ ತರನಾಗಿರುವ ಕಾರಣಕ್ಕೆ ಇದೂ ಮೇವಾತ್ ಗ್ಯಾಂಗ್ನ ಕೃತ್ಯವೇ ಆಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ರಾಜ್ಯ ವ್ಯಾಪಿ ಅಲರ್ಟ್ ಆಗಿದ್ದಾರೆ.
ಜನನಿಬೀಡ ಪ್ರದೇಶವೇ ಟಾರ್ಗೆಟ್
ನಿರ್ಜನ ಪ್ರದೇಶದಲ್ಲಿನ ಮನೆಗಳಲ್ಲಿ ಕಳ್ಳತನವಾಗುವುದನ್ನು ಕಂಡು- ಕೇಳಿದ್ದೇವೆ. ಆದರೆ, ಮೇವಾತ್ ಗ್ಯಾಂಗ್ ಜನನಿಬೀಡ ಪ್ರದೇಶದಲ್ಲಿಯೇ ಕಳ್ಳತನ ಮಾಡುತ್ತದೆ. ಜನನಿಬಿಡ ಪ್ರದೇಶವಾಗಿರುವ ಕಾರಣಕ್ಕೆ ಕಳ್ಳತನ ಮಾಡುತ್ತಿರುವ ವೇಳೆ ಜನರ ಅಥವಾ ಪೊಲೀಸರ ಗಮನಕ್ಕೆ ಹೋಗುವುದಿಲ್ಲ ಎನ್ನುವುದು ಈ ಗ್ಯಾಂಗ್ನ ಲೆಕ್ಕ. ಗುಂಪಾಗಿ ಬರುವ ಕಳ್ಳರು ಕಳ್ಳತನದ ವೇಳೆ ಚದುರುತ್ತಾರೆ. ವಾಚ್ ಮಾಡುವವರೇ ಬೇರೆ ಕಳ್ಳತನ ಮಾಡುವವರೇ ಬೇರೆ. ಕಳ್ಳತನ ಮಾಡಿ ವಾಹನದಲ್ಲಿ ಎಸ್ಕೇಪ್ ಆಗುವ ಇವರು ನಕಲಿ ನಂಬರ್ ಪ್ಲೇಟ್ಗಳನ್ನು ಬಳಸುತ್ತಾರೆ.
ಕೆಟ್ಟ ಕೆಲಸಕ್ಕೆ ಕುಖ್ಯಾತಿ ‘ಮೇವಾತ್ ಗ್ಯಾಂಗ್’?
ಹರಿಯಾಣ ರಾಜ್ಯದ ನುಹ್, ಪುನಾಹನಾ, ಫಿರೋಜಪುರ್ ಝಿರ್ಕಾ, ತೌರು ತಾಲೂಕಿನಲ್ಲಿ ಹಬ್ಬಿಕೊಂಡಿರುವ ಪ್ರದೇಶವೇ ಮೇವಾತ್. ರಾಜಸ್ಥಾನ, ಉತ್ತರ ಪ್ರದೇಶದ ಒಂದೆರಡು ತಾಲೂಕುಗಳೂ ಮೇವಾತ್ ಪ್ರದೇಶಕ್ಕೆ ಒಳಪಡುತ್ತದೆ. ಈ ಪ್ರದೇಶ ಕೆಟ್ಟ ಕೆಲಸದಿಂದ ಕುಖ್ಯಾತಿ ಪಡೆದಿದೆ. ಮೊದಮೊದಲು ಹರಿಯಾಣದಲ್ಲಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್, ಇದೀಗ ದೇಶ ವ್ಯಾಪಿ ಹಬ್ಬಿಕೊಂಡಿದೆ. 30 ದೊಡ್ಡ ಗ್ಯಾಂಗ್ಗಳಿದ್ದು, 100ಕ್ಕೂ ಹೆಚ್ಚು ಸಣ್ಣ ಗ್ಯಾಂಗ್ಗಳು ಸಕ್ರಿಯವಾಗಿವೆ. ಇವರ ಜೀವನವು ಕೇವಲ ಅಪರಾಧ ಚಟುವಟಿಕೆಗಳ ಮೇಲೆ ಅವಲಂಬಿತವಾಗಿದೆ.