ಮೆಟ್ರೋ ರೈಲಿನ ಮುಂದೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಬೆಂಗಳೂರು: ಬಸವನಗುಡಿಯ ನ್ಯಾಶನಲ್‌ ಕಾಲೇಜು ಮೆಟ್ರೋ ನಿಲ್ದಾಣದಲ್ಲಿ ಯುವಕನೊಬ್ಬ ಬರುತ್ತಿದ್ದ ಮೆಟ್ರೋ ರೈಲಿನ ಮುಂದೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಆತ 25 ವರ್ಷದ ವೇಣು ಎಂದು ತಿಳಿದು ಬಂದಿದ್ದು, ಹಳಿ ಮಧ್ಯೆ ಸಿಲುಕಿದ್ದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮುಂಜಾನೆಯಿಂದಲೂ ಮೆಟ್ರೋ ನಿಲ್ದಾಣದಲ್ಲೇ ಕುಳಿತಿದ್ದ ಆತನನ್ನು ಸಿಬ್ಬಂದಿ ವಿಚಾರಿಸಿದಾಗ ಸಂಬಂಧಿಕರಿಗೆ ಕಾಯುತ್ತಿರುವುದಾಗಿ ತಿಳಿಸಿದ್ದ. ನಂತರ ರೈಲು ಬರುತ್ತಿರುವುದನ್ನು ಗಮನಿಸಿ ಹಳಿ ಮೇಲೆ ಧುಮುಕಿದ್ದಾನೆ. ಕೂಡಲೇ ಟ್ರ್ಯಾಕ್‌ನ 750 ವೋಲ್ಟೇಜ್‌ ವಿದ್ಯುತ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಯಾವುದೇ ಪಕ್ಷಿ, ಪ್ರಾಣಿ, ಮನುಷ್ಯ ಅಥವಾ ವಸ್ತು ಹತ್ತಿರ ಬಂದರೆ ವಿದ್ಯುತ್ ಸ್ಥಗಿತಗೊಳ್ಳುತ್ತದೆ. ಮೆಟ್ರೋ ಟ್ರ್ಯಾಕ್‌ನಲ್ಲಿರುವ ಈ ರೀತಿಯ ತಾಂತ್ರಿಕ ವ್ಯವಸ್ಥೆಯು ಇಂದು ಆತ್ಮಹತ್ಯೆಗೆ ಯತ್ನಿಸಿದವನ ಜೀವ ಉಳಿಸಿದೆ.

ತಲೆಗೆ ಪೆಟ್ಟಾಗಿದ್ದು, ಪ್ರಜ್ಞೆ ಬಂದ ಬಳಿಕ ಯುವಕನಿಂದ ಮಾಹಿತಿ ಪಡೆಯಬೇಕಾಗಿದೆ. ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಕ್ಕೆ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ದಿಗ್ವಿಜಯ ನ್ಯೂಸ್‌ಗೆ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *