ಮೆಟ್ರೊ ರೈಲು ವಿದ್ಯುತ್ ಮಾರ್ಗ

ಮಂಗಳೂರು: ಮೆಟ್ರೊ ಎನ್ನುವುದು ಒಂದು ಪವರ್ ಲೈನ್ ಇದ್ದಂತೆ, ಇದರ ಪ್ರಯೋಜನಗಳು ಆದಷ್ಟು ಆ ಪರಿಸರದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ದೆಹಲಿ ಟ್ರಾನ್ಸಿಟ್ ಡಿಸೈನ್ ಕಾರ್ಯಕಾರಿ ನಿರ್ದೇಶಕ, ಸಾರಿಗೆ ತಜ್ಞ ಸುಶೀಲ್ ವರ್ಮ ಹೇಳಿದರು.
ನಗರದಲ್ಲಿ ದ.ಕ.ಜಿಲ್ಲಾಡಳಿತ ಹಾಗೂ ದ.ಕ.ಜಿಲ್ಲಾ ನಿರ್ಮಿತಿ ಕೇಂದ್ರ ವತಿಯಿಂದ ಹಮ್ಮಿಕೊಳ್ಳಲಾದ ಸಾರಿಗೆ ಆಧಾರಿತ ಅಭಿವೃದ್ಧಿ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ದೆಹಲಿಯಲ್ಲಿ ಮೆಟ್ರೊ ನಿರ್ಮಾಣ ಬಳಿಕ ಅದರ ಸುತ್ತಲಿನ ಗಾಜಿಯಾಬಾದ್, ನೋಯ್ಡ, ದ್ವಾರಕಾ, ರೋಹಿಣಿಯಂಥ ಪ್ರದೇಶಗಳು ಅಭಿವೃದ್ಧಿಯಾದವು. ರಿಯಲ್ ಎಸ್ಟೇಟ್ ಮಾರುಕಟ್ಟೆ ಕ್ಷಿಪ್ರವಾಗಿ ಬೆಳೆಯಿತು, ಮೆಟ್ರೊ ಮಾರ್ಗದ ಇಕ್ಕೆಲಗಳಲ್ಲಿ ಕಳಪೆ ಗುಣಮಟ್ಟದ ವಸತಿ ಸಮುಚ್ಚಯಗಳು, ಸ್ಲಂ ಬೆಳವಣಿಗೆಯಾಯಿತು, ಇದರಿಂದಾಗಿ ಹಲವರಿಗೆ ಲಾಭವಾದರೂ ಅದನ್ನು ಬಳಸಿಕೊಳ್ಳಲು ಮೆಟ್ರೊ ವ್ಯವಸ್ಥೆಗೆ ಸಾಧ್ಯವಾಗಲಿಲ್ಲ, ಇಂತಹ ತಪ್ಪುಗಳು ಬೇರೆ ನಗರಗಳಲ್ಲಿ ಪುನರಾವರ್ತಿಸಬಾರದು ಎಂದರು.

ನಿಟ್ಟೆ ಇಂಜಿನಿಯರಿಂಗ್ ಕಾಲೇಜು ನಿವೃತ್ತ ಡೀನ್ ಪ್ರೊ.ಜಿ.ಆರ್.ರೈ ಉದ್ಘಾಟಿಸಿದರು. ಎನ್.ಪಿ.ಶರ್ಮಾ, ಶ್ರೀಕುಮಾರ್, ಧರ್ಮರಾಜ್ ಅಗತ್ಯ ಸಲಹೆ ನೀಡಿದರು. ಮಹಮ್ಮದ್ ನಜೀರ್, ಶ್ರೀಕಾಂತ್ ರಾವ್ ಶುಭ ಹಾರೈಸಿದರು. ರಾಜೇಂದ್ರ ಕಲ್ಬಾವಿ ಸ್ವಾಗತಿಸಿದರು. ವಿಜಯ ವಿಷ್ಣು ಮಯ್ಯ ನಿರೂಪಿಸಿದರು. ಅನಿಲ್ ಸೆಬಾಸ್ಟಿಯನ್ ಡಿಸೋಜ ವಂದಿಸಿದರು.

ಮಂಗಳೂರು ಮೆಗಾಸಿಟಿಯಾಗಲಿ: ಮಂಗಳೂರಿನಲ್ಲಿ ಮೆಟ್ರೊದಂಥ ದೊಡ್ಡ ಮಟ್ಟದ ಸಾಮೂಹಿಕ ಸಾರಿಗೆ ವ್ಯವಸ್ಥೆಗೆ ಬೇಕಾದಷ್ಟು ಜನಸಂಖ್ಯೆ ಇಲ್ಲದ ಕಾರಣ ಕರಾವಳಿಯ ಕುಂದಾಪುರದಿಂದ ಕಾಸರಗೋಡುವರೆಗಿನ ಪ್ರದೇಶ ಪರಿಗಣಿಸಿಕೊಂಡು ಮುಂದುವರಿಯುವುದು ಸೂಕ್ತ ಎಂದು ಸಾರಿಗೆ ತಜ್ಞರು ಅಭಿಪ್ರಾಯಪಟ್ಟರು.

ಮಂಗಳೂರಿನಲ್ಲಿ ಸಾರಿಗೆ ಆಧಾರಿತ ಅಭಿವೃದ್ಧಿ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಸಂವಾದ ಕಾರ‌್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಐದಾರು ಲಕ್ಷ ಜನರಿರುವ ಮಂಗಳೂರು ನಗರಕ್ಕೆ ಇಂಥ ವ್ಯವಸ್ಥೆ ಸೀಮಿತಗೊಳಿಸುವಂತಿಲ್ಲ. ಸಾಕಷ್ಟು ಜನ ಕಾಸರಗೋಡಿನಿಂದ ಕುಂದಾಪುರ ಮಧ್ಯೆ ಸಂಚರಿಸುತ್ತಾರೆ. ಇದನ್ನು ಬಳಸಿಕೊಂಡು ಈ ಒಟ್ಟು ಪ್ರದೇಶವನ್ನೇ ಮೆಗಾಸಿಟಿಯಾಗಿ ಪರಿಗಣಿಸಿದರೆ ಮುಂದಿನ 20 ವರ್ಷಗಳ ಹೊತ್ತಿಗೆ ವ್ಯವಸ್ಥೆ ಲಾಭದಾಯಕವಾಗಿ ಮುಂದುವರಿಯಲು ಸಾಧ್ಯತೆ ಇದೆ ಎಂದು ಆರ್ಕಿಟೆಕ್ಟ್ ವೆಂಕಟೇಶ್ ಪೈ ಹೇಳಿದರು.