ಮೀ ಟೂ ಆರೋಪದಲ್ಲಿ ಸಿಲುಕಿರುವ ಅರ್ಜುನ್​ ಸರ್ಜಾ ಬಂಧನವಾಗುವುದೇ?

ಬೆಂಗಳೂರು: ನಟಿ ಶ್ರುತಿ ಹರಿಹರನ್​ ಮಾಡಿರುವ ಮೀ ಟೂ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟ ಅರ್ಜುನ್​ ಸರ್ಜಾ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ಕುರಿತು ರಹಸ್ಯ ಸ್ಥಳದಲ್ಲಿ ಪ್ರಮುಖ ಸಾಕ್ಷಿಯಾದ ಯಶಸ್ವಿನಿ ಅವರ ಹೇಳಿಕೆಯನ್ನು ಪಡೆದಿರುವ ಪೊಲೀಸರು, ಅರ್ಜುನ್​ ಅರ್ಜಾರನ್ನು ಶೀಘ್ರದಲ್ಲೇ ಬಂಧಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಶ್ರುತಿ ನೀಡಿದ್ದ ದೂರಿನಲ್ಲಿದ್ದ ಸಾಕ್ಷಿಗಳ ಪಟ್ಟಿಯಲ್ಲಿ ಯಶಸ್ವಿನಿ ಎಂಬವರ ಹೆಸರೂ ಇತ್ತು. ಈ ಕುರಿತು ಪೊಲೀಸರಿಗೆ ಶ್ರುತಿ ಪರ ಹೇಳಿಕೆ ನೀಡಿರುವ ಯಶಸ್ವಿನಿ, ಅರ್ಜುನ್​ ಸರ್ಜಾ ಕಿರುಕುಳ ನೀಡಿರುವ ಬಗ್ಗೆ ತನ್ನ ಬಳಿ‌ ಶ್ರುತಿ ಅಳುತ್ತಾ ಹೇಳಿಕೊಂಡಿದ್ದಾರೆ. ಘಟನೆ ಬಳಿಕ ಅರ್ಜುನ್​ ಬಳಿ ನನ್ನನ್ನೂ ಕರೆದೊಯ್ದಿದ್ದರು. ಆಗ ಅರ್ಜುನ್ ಮತ್ತು ಶ್ರುತಿ‌ ನಡುವೆ ಮಾತುಕತೆ ನಡೆದಿತ್ತು. ಇಬ್ಬರ ನಡುವೆ ಸಾಕಷ್ಟು ಜಟಾಪಟಿ ನಡೆದಿತ್ತು. ಅರ್ಜುನ್ ಶ್ರುತಿಯನ್ನು ಕೀಳಾಗಿ ನೋಡುತ್ತಿದ್ದರು ಎಂದು ಹೇಳಿದ್ದಾರೆ ಎನ್ನಲಾಗಿದೆ.

ಪ್ರಕರಣ ಕುರಿತು ವಿಸ್ಮಯ ಚಿತ್ರದ ನಿರ್ಮಾಪಕ ಉಮೇಶ್​ ಮತ್ತು ನಿರ್ದೇಶಕ ಅರುಣ್ ವೈದ್ಯನಾಥನ್ ಅವರ ಬಳಿಯೂ ಪೊಲೀಸರು ಹೇಳಿಕೆ ಕಲೆ ಹಾಕಿದ್ದಾರೆ.

ಕಬ್ಬನ್ ಪಾರ್ಕ್ ಠಾಣೆಗೆ ಬಂದು ಹೇಳಿಕೆ ನೀಡಿದ ನಿರ್ದೇಶಕ ಅರುಣ್ ವೈದ್ಯನಾಥನ್, ಮೀ ಟೂ ಆರೋಪದ ಬಗ್ಗೆ ನನಗೆ ಗೊತ್ತಿಲ್ಲ. ಅರ್ಜುನ್ ಸರ್ಜಾ ಅಂತ ವ್ಯಕ್ತಿ ಅಲ್ಲ. ಆದರೆ, ಇಂಥ ಆರೋಪಗಳು ಏಕೆ ಉದ್ಭವಿಸಿವೆಯೋ ತಿಳಿದಿಲ್ಲ. ನಾನು ಫೇಸ್​​ಬುಕ್ ನಲ್ಲಿ ಏನು ಬರೆದಿದ್ದೇನೊ ಅದೇ ಹೇಳಿಕೆ ದಾಖಲಿಸಿದ್ದೇನೆ ಎಂದಿದ್ದಾರೆ.

ಅರ್ಜಿ ವಿಚಾರಣೆ ಮುಂದೂಡಿಕೆ
ಶ್ರುತಿ ಹರಿಹರನ್​ ದಾಖಲಿಸಿರುವ ಎಫ್​ಐಆರ್ ರದ್ದು ಪಡಿಸುವಂತೆ ಅರ್ಜುನ್​ ಸರ್ಜಾ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್​ ಶುಕ್ರವಾರಕ್ಕೆ ಮುಂದೂಡಿದೆ. ಇಂದೇ ಅರ್ಜಿ ವಿಚಾರಣೆ ಮಾಡುವಂತೆ ಸರ್ಜಾ ಪರ ವಕೀಲರ ಮನವಿ ಮಾಡಿದ್ದರೂ, ಶುಕ್ರವಾರ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ತಿಳಿಸಿದೆ. (ದಿಗ್ವಿಜಯ ನ್ಯೂಸ್)