ಮೃತಪಟ್ಟ ಬಿಜೆಪಿ ಕಾರ್ಯಕರ್ತರ ಕುಟುಂಬಕ್ಕೆ ವಿಶೇಷ ಆಹ್ವಾನ: ದೀದಿಗೆ ಹೊಸ ಸಂದೇಶ ರವಾನಿಸಿದ ಮೋದಿ, ಅಮಿತ್​ ಷಾ

ನವದೆಹಲಿ: ಇದುವರೆಗೂ ಪಶ್ಚಿಮ ಬಂಗಾಳದಲ್ಲಿ ನಡೆದ ರಾಜಕೀಯ ಸಂಬಂಧಿತ ಹಿಂಸಾತ್ಮಕ ಘಟನೆಗಳಲ್ಲಿ ಸುಮಾರು 50 ಬಿಜೆಪಿ ಕಾರ್ಯಕರ್ತರು ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮೃತರ ಕುಟುಂಬವಕ್ಕೆ ವಿಶೇಷವಾಗಿ ಆಹ್ವಾನ ನೀಡುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಹೊಸ ಸಂದೇಶವೊಂದನ್ನು ಬಿಜೆಪಿ ರವಾನಿಸಿದೆ.

ನಾಳೆ(ಗುರುವಾರ) ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ‘ವಿಶೇಷ ಆಹ್ವಾನಿತರು’ ಅಡಿಯಲ್ಲಿ ಆಹ್ವಾನ ನೀಡಲಾಗಿದೆ.

ಕಳೆದ ರಾತ್ರಿ ಪ್ರಧಾನ ಮಂತ್ರಿ ನಿವಾಸದಲ್ಲಿ ಪ್ರಧಾನಿ ಮೋದಿ ಹಾಗೂ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ನಡುವೆ ಸುದೀರ್ಘ ಐದು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ವಿಶೇಷ ಆಹ್ವಾನಿತರ ಪಟ್ಟಿಯನ್ನು ತಯಾರು ಮಾಡಿ ರಾಷ್ಟ್ರಪತಿ ಭವನಕ್ಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಆರು ವರ್ಷಗಳಿಂದ ಪಶ್ಚಿಮ ಬಂಗಾಳದ ಸ್ಥಳೀಯ ಮಟ್ಟದ ಚುನಾವಣೆ ಮತ್ತು ರಾಷ್ಟ್ರ ಮಟ್ಟದ ಚುನಾವಣೆ ವೇಳೆ ಅನೇಕ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಪಕ್ಷದ ನಾಯಕರು ಆರೋಪಿಸಿದ್ದಾರೆ. ಪ್ರಧಾನಿಯಾಗಿ ಎರಡನೇ ಬಾರಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗಿರುವ ಸುಮಾರು 7 ಸಾವಿರ ಅತಿಥಿಗಳಲ್ಲಿ ಮೃತ ಬಿಜೆಪಿ ಕಾರ್ಯಕರ್ತರ ಕುಟುಂಬಕ್ಕೂ ವಿಶೇಷ ಸ್ಥಾನವನ್ನು ನೀಡಲಾಗಿದೆ. ಹೀಗಾಗಿ ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ, ಟಿಎಂಸಿ ಪಕ್ಷಕ್ಕೆ ದೊಡ್ಡ ಸಂದೇಶವೊಂದನ್ನು ರವಾನಿಸಿದೆ ಎಂದು ಹೇಳಲಾಗುತ್ತಿದೆ.

ರಾಷ್ಟ್ರೀಯ ನಾಯಕರು ಬಿಜೆಪಿ ಕಾರ್ಯಕರ್ತರ ಬಗ್ಗೆ ಕಳವಳವನ್ನು ವ್ಯಕ್ತಪಡಿಸುತ್ತಾರೆ. ಹಾಗೇ ತೃಣಮೂಲ ಕಾಂಗ್ರೆಸ್​ ಕಾರ್ಯಕರ್ತರ ಹಿಂಸೆಯ ವಿರುದ್ಧವಾಗಿ ನಿಮ್ಮೊಂದಿಗೆ ಸದಾ ನಿಲ್ಲುತ್ತಾರೆಂದ ಸ್ಪಷ್ಟ ಸಂದೇಶವನ್ನು ಈ ವಿಶೇಷ ಆಹ್ವಾನ ತಿಳಿಸಲಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಕೂಡ ಸಾಕಷ್ಟು ಹಿಂಸಾಚಾರ ಘಟನೆಗಳು ವರದಿಯಾದವು. ಇದೆಲ್ಲದರ ನಡುವೆಯೂ ಪಶ್ಚಿಮ ಬಂಗಾಳದ ಒಟ್ಟು 42 ಕ್ಷೇತ್ರಗಳಲ್ಲಿ 18 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *