ಮಂಗಳಮುಖಿ ರಚಿಸಿದ ಕವಿತೆ ಪಠ್ಯದಲ್ಲಿ

ಭದ್ರಾವತಿ: ನಾನು ರಚಿಸಿದ ಕವಿತೆಯನ್ನು ಕುವೆಂಪು ವಿವಿ ಪಠ್ಯ ಪುಸ್ತಕದಲ್ಲಿ ಸೇರಿಸಿರುವುದು ಮಂಗಳಮುಖಿಯರನ್ನು ಗೌರವಿಸುವ ನಿಮ್ಮ ಕಾಳಜಿಯನ್ನು ತೋರಿಸುತ್ತಿದೆ ಎಂದು ಮಂಗಳಮುಖಿ ಕವಯತ್ರಿ ಚಾಂದಿನಿ ಹೇಳಿದರು.

ನ್ಯೂಟೌನ್ ಸರ್​ಎಂವಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ‘ಮಂಗಳಮುಖಿಯರ ಬದುಕುಬವಣೆ’ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಲ್ಲಿಕಾರ್ಜುನ ಸ್ವಾಮಿಯಾಗಿದ್ದ ನಾನು ಹೆಣ್ಣಾಗುವಲ್ಲಿ ಅನುಭವಿಸಿದ ನೋವು, ಹಿಂಸೆ, ಅವಮಾನಗಳು ಒಂದೆರಡಲ್ಲ. ಮುಂದುವರಿದ ನಾಗರಿಕ ಸಮಾಜ, ಸಮುದಾಯ ಕುಟುಂಬಗಳು ಇಂದಿಗೂ ನಮ್ಮನ್ನು ಹೊರಗಿಟ್ಟು ನೋಡುತ್ತಿರುವುದಲ್ಲದೆ ಲೈಂಗಿಕವಾಗಿ ಬಳಸಿಕೊಳ್ಳುತ್ತಿವೆ. ಭಿಕ್ಷೆ ಬೇಡಿ ಬದುಕುವ ಸ್ಥಿತಿ ನಮ್ಮದಾಗಿದೆ ಎಂದರು.

ನನಗೆ ಬಾಲ್ಯದಿಂದಲೆ ಸಹಜವಾಗಿ ಗಂಡಿನ ದೇಹದ ಬಗ್ಗೆ ಮೂಡಿದ ತಿರಸ್ಕಾರ, ತಾನು ಹೆಣ್ಣಿನಂತೆ ನಡೆಯಬೇಕು, ಉಡುಗೆ, ತೊಡುಗೆಗಳನ್ನು ಬಳಸಬೇಕು, ತಾನೂ ಗರ್ಭ ಧರಿಸಬೇಕು ಎಂಬೆಲ್ಲ ಬಯಕೆಗಳು ಈ ಹಂತಕ್ಕೆ ತಂದು ನಿಲ್ಲಿಸಿವೆ. ಇದು ನಿಜವಾಗಿ ಕಾಯಿಲೆಯೂ ಅಲ್ಲ, ತಂತ್ರಗಾರಿಕೆಯೂ ಅಲ್ಲ, ಕೈವಾಡವೂ ಅಲ್ಲ. ಇದೊಂದು ಭಾವನೆ, ಇದು ಮನಸ್ಸಿನಲ್ಲಿ ಹುಟ್ಟಿರುವಂಥದ್ದು, ಹಾಗಾಗಿ ಇದನ್ನು ಬದಲಾಯಿಸಲು ಅಥವಾ ಚಿಕಿತ್ಸೆ ಕೊಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡರು.

ಇತ್ತೀಚಿನ ದಿನಗಳಲ್ಲಿ ಸಮುದಾಯಗಳಲ್ಲಿ ಹೊಸ ಅರಿವು ಮೂಡತೊಡಗಿದೆ. ಕಳೆದ ಇಪ್ಪತ್ತು ವರ್ಷಗಳಿಂದ ನಡೆದ ಹೋರಾಟದ ಫಲ ಇದು ಎಂದರೆ ತಪ್ಪಾಗಲಾರದು. ನಾನು ಇಂದು ಈ ವೇದಿಕೆಯಲ್ಲಿ ನಿಂತು ಮಾತನಾಡುತ್ತಿದ್ದೇನೆ ಎಂದರೆ ಅದಕ್ಕೆ ನನ್ನ ಇಡೀ ಸಮುದಾಯದವರ ಹೋರಾಟ ಮತ್ತು ಶ್ರಮದ ಪ್ರತಿಫಲ. ನೀವು ನಮ್ಮ ಭಾವನೆಗಳಿಗೆ ಬೆಲೆ ಕೊಡಿ, ನಮ್ಮನ್ನು ಕೂಡ ಮನುಷ್ಯರಾಗಿ ನೋಡಿ ಎಂಬುದಷ್ಟೇ ನಾವು ನಿಮ್ಮಿಂದ ಅಪೇಕ್ಷಿಸುವುದು ಎಂದು ಹೇಳಿದರು.

ಪ್ರಾಚಾರ್ಯ ಡಾ. ಎಂ.ಜಿ. ಉಮಾಶಂಕರ್, ಸುಮಾ, ಡಾ. ಶಿವಲಿಂಗೇಗೌಡ. ಎಲ್.ಪ್ರಕಾಶ್, ಡಾ. ಬಿ.ಎಸ್.ಸುಧಾ ಉಪಸ್ಥಿತರಿದ್ದರು.