ಮುಂಗಾರು ಎದುರಿಸಲು ಮೆಸ್ಕಾಂ ಸಿದ್ಧ

– ಭರತ್‌ರಾಜ್ ಸೊರಕೆ ಮಂಗಳೂರು

ಕಳೆದ ವರ್ಷ ಮಳೆಗಾಲ ಆರಂಭದ 2 ತಿಂಗಳಲ್ಲಿ ಮೆಸ್ಕಾಂ 8 ಕೋಟಿ ರೂ.ಗಿಂತಲೂ ಅಧಿಕ ನಷ್ಟ ಅನುಭವಿಸಿತ್ತು. ಈ ಬಾರಿ ಹೆಚ್ಚಿನ ನಷ್ಟ ತಪ್ಪಿಸಲು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಸಕಲ ಸಿದ್ಧತೆ ನಡೆಸಿದೆ.

ಪ್ರತಿ ಮಳೆಗಾಲ ಸಂದರ್ಭ ವಿದ್ಯುತ್ ಇಲಾಖೆ ಹೆಚ್ಚು ಕಾರ್ಯದ ಒತ್ತಡಕ್ಕೊಳಗಾಗುತ್ತದೆ. ಗಾಳಿಮಳೆಗೆ ವಿದ್ಯುತ್ ಕಂಬಗಳು ಧರೆಗುರುಳುವ, ಪರಿವರ್ತಕಗಳು ಸಿಡಿಲಿನಿಂದ ಹಾನಿಯಾಗುವ ಘಟನೆಗಳು ಜಾಸ್ತಿಯಾಗಿರುತ್ತವೆ. ಕಳೆದ ವರ್ಷ ಏಕಾಏಕಿ ಸುರಿದ ಮಳೆಗೆ ಸಿಬ್ಬಂದಿ ಮತ್ತು ಅಗತ್ಯ ಸಾಮಗ್ರಿ ಸೇರಿದಂತೆ ನಾನಾ ಸಮಸ್ಯೆ ಅನುಭವಿಸಿತ್ತು.

ಇಲಾಖೆಯ ವಾಹನಗಳಲ್ಲದೆ ತುರ್ತು ಕಾರ್ಯಾಚರಣೆಗೆ ಅನುಕೂಲವಾಗುವಂತೆ ದಕ್ಷಿಣ ಕನ್ನಡಕ್ಕೆ 12 ಮತ್ತು ಉಡುಪಿಗೆ 7 ಹೆಚ್ಚುವರಿ ವಾಹನಗಳನ್ನು ಸಿದ್ಧವಿಡಲಾಗಿದೆ. ಹೆಚ್ಚುವರಿ ಪರಿವರ್ತಕ(ಟಿ.ಸಿ), ತಂತಿ, ಕಂಬಗಳನ್ನು ಹೆಚ್ಚುವರಿ ಸಂಗ್ರಹಿಸಲಾಗಿದೆ. ಸಿಡಿಲಿನಿಂದ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗುವ ಸಂದರ್ಭಗಳು ಹೆಚ್ಚಿದ್ದು, ಹಾನಿಯಾದರೆ ಕೂಡಲೇ ಅದನ್ನು ಬದಲಿಸಲು ವ್ಯವಸ್ಥೆ ಮಾಡಲಾಗಿದೆ. ಪೂರ್ವಭಾವಿಯಾಗಿ ಹೆಚ್ಚುವರಿ ಟಿ.ಸಿ.ಗಳನ್ನು ಸಂಗ್ರಹಿಸಿಡಲಾಗಿದೆ.
ಕಾರ್ಯಾಚರಣೆಗೆ ಸಿಬ್ಬಂದಿಯ ಸಮಸ್ಯೆ ತಲೆದೋರದಂತೆ ಉಡುಪಿಗೆ 105 ಮತ್ತು ದಕ್ಷಿಣ ಕನ್ನಡಕ್ಕೆ 194 ಸಿಬ್ಬಂದಿ ಇರುವ ಗ್ಯಾಂಗ್ ರಚಿಸಲಾಗಿದೆ. ನುರಿತ ಕಾಂಟ್ರಾಕ್ಟರ್‌ಗಳಿಗೆ ಜವಾಬ್ದಾರಿ ವಹಿಸಲಾಗಿದೆ.

ಅಪಾಯಕಾರಿ ರೆಂಬೆ ತೆರವು:  ಮೆಸ್ಕಾಂ ಈಗಾಗಲೇ ಒಂದು ಹಂತದಲ್ಲಿ ತಂತಿಯ ಮೇಲೆ ಬೀಳುವ ಅಪಾಯಕಾರಿ ರೆಂಬೆಗಳನ್ನು ತೆರವುಗೊಳಿಸಿದ್ದು, ತಂತಿ ಮತ್ತು ಕಂಬಗಳಿಗೆ ಸುತ್ತಿಕೊಂಡಿದ್ದ ಬಳ್ಳಿ ಕಡಿಯಲಾಗುತ್ತಿದೆ. ಏಪ್ರಿಲ್- ಮೇ ತಿಂಗಳಲ್ಲಿ ಪೂರ್ತಿ ರೆಂಬೆ ತೆರವು ಕಾರ್ಯವನ್ನು ಮೆಸ್ಕಾಂ ನಡೆಸಿದೆ. ಗ್ರಾಮೀಣ ಭಾಗದಲ್ಲಿ ತೋಟದ ಒಳಗೆ ಗಾಳಿಗೆ ತೆಂಗು, ಕಂಗು ಬೀಳುವುದು ಹೆಚ್ಚು. ಈ ಪ್ರದೇಶಗಳನ್ನು ಗುರುತುಹಾಕಿಕೊಳ್ಳಲಾಗಿದೆ. ವಿದ್ಯುತ್ ತಂತಿಗಳಲ್ಲಿ ಕಂಡುಬರುವ ದೋಷ, ಪರಿಕರಗಳ ಬದಲಾವಣೆ ಕಾರ್ಯ ನಡೆದಿದೆ. ಅಪಾಯಕಾರಿ ತಂತಿ, ಕಂಬಗಳನ್ನು ಸಹ ಬದಲಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ವಿಸ್ ಸ್ಟೇಷನ್ ಸಿದ್ಧ:  ಸರ್ವಿಸ್ ಸ್ಟೇಷನ್‌ಗಳಲ್ಲಿ ತುರ್ತು ಕಾರ್ಯಾಚರಣೆಗೆ ಬೇಕಿರುವ ಎಲ್ಲ ಅಗತ್ಯ ಪರಿಕರಗಳನ್ನು ಸಜ್ಜಾಗಿಡಲಾಗಿದೆ. ಅಪಾಯ ಸಂಭವಿಸಿದರೆ ತುರ್ತು ಕಾರ್ಯಾಚರಣೆಗಾಗಿ ಪ್ರತಿ ವಿಭಾಗ ವ್ಯಾಪ್ತಿಯಲ್ಲಿ ಸರ್ವೀಸ್ ಸ್ಟೇಷನ್ ತೆರೆಯಲಾಗಿದೆ. ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ 24 ಗಂಟೆಗಳ ಮೊಬೈಲ್ ಸೇವೆ ವ್ಯಾನ್‌ಗಳನ್ನು ಸಿದ್ಧವಿಡಲಾಗಿದೆ. ದುರಸ್ತಿ ಕಾರ್ಯಕ್ಕೆ ಸೂಕ್ತ ಸಿಬ್ಬಂದಿಯ ಆಯ್ಕೆಯೂ ನಡೆದಿದೆ.

1912 ಸಹಾಯವಾಣಿ:  ಮಳೆಗಾಲದಲ್ಲಿ ಗಾಳಿಗೆ ಮರಬಿದ್ದು ತಂತಿ ಕಡಿತವಾಗುವ, ಕಂಬ ಬೀಳುವ ಸಮಸ್ಯೆ ಇರುತ್ತದೆ. ಈ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕರಿಸಲು ಗ್ರಾಹಕ ಸಹಾಯವಾಣಿ 1912 ಸಿದ್ಧವಿದೆ. 13 ಲೈನ್‌ಗಳಿದ್ದ ಸಹಾಯವಾಣಿಯನ್ನು ಈ ಬಾರಿ 20ಕ್ಕೆ ವಿಸ್ತರಿಸಲಾಗಿದೆ. 24 ಗಂಟೆಯೂ ಕಾರ್ಯಾಚರಿಸುತ್ತಿರುತ್ತದೆ. ಇಲ್ಲಿಗೆ ಬಂದ ಕರೆಗಳನ್ನು ಆಯಾ ಪ್ರದೇಶದ ಸರ್ವಿಸ್ ಸ್ಟೇಷನ್‌ಗಳಿಗೆ ವರ್ಗಾಯಿಸಲಾಗುತ್ತದೆ. ಅಗತ್ಯ ಸಲಹೆ, ದೂರವಾಣಿ ಸಂಖ್ಯೆಗಳು ಸಹಾಯವಾಣಿಯಲ್ಲಿ ಸಿಗಲಿದೆ.

ವಿದ್ಯುತ್ ತಂತಿ ಎಚ್ಚರಿಕೆ: ಮಳೆಗಾಲದಲ್ಲಿ ವಿದ್ಯುತ್ ತಂತಿ ಕಡಿದು ಬಿದ್ದಿರುವುದು ಕಂಡುಬಂದರೆ ತಕ್ಷಣ ಮೆಸ್ಕಾಂನ್ನು ಸಂಪರ್ಕಿಸುವಂತೆ ಅಧಿಕಾರಿಗಳು ತಿಳಿಸಿದ್ದರೆ. ತಂತಿ ನೀರಲ್ಲಿ ಬಿದ್ದಿದ್ದರೆ ಅಪಾಯ ಹೆಚ್ಚು. ತಂತಿ ಬಳಿಗೆ ಯಾರೂ ತೆರಳದಂತೆ ತಡೆಯಬೇಕು. ಕೂಡಲೇ ಸಹಾಯವಾಣಿ ಅಥವಾ ಸರ್ವಿಸ್ ಸ್ಟೇಷನ್‌ಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.

ಈ ಬಾರಿ ಎಪ್ರಿಲ್, ಮೇ ತಿಂಗಳಿನಿಂದಲೇ ಮುಂಗಾರು ಪೂರ್ವ ಸಿದ್ಧತೆ ಮಾಡಲಾಗಿದೆ. ಸಹಾಯವಾಣಿ ಲೈನ್ ಜಾಸ್ತಿ ಮಾಡಿದ್ದೇವೆ. ಇಲಾಖಾ ವಾಹನ, ಸಿಬ್ಬಂದಿಯಲ್ಲದೆ ಹೆಚ್ಚುವರಿ ವ್ಯವಸ್ಥೆ ಮಾಡಲಾಗಿದೆ. 24 ಗಂಟೆಗಳ ಕಾಲ 1912 ಸಹಾಯವಾಣಿ ಸಂಪರ್ಕಿಸಬಹುದು.
ಮಂಜಪ್ಪ, ಮೆಸ್ಕಾಂ, ಅಧೀಕ್ಷಕ ಇಂಜಿನಿಯರ್

Leave a Reply

Your email address will not be published. Required fields are marked *