ಸಮರ್ಪಕ ವಿದ್ಯುತ್ ನೀಡಲು ಪ್ರಯತ್ನ

ಶೃಂಗೇರಿ: ತಾಲೂಕಿನಲ್ಲಿ ಎರಡು ತಿಂಗಳಿನಿಂದ ವಿದ್ಯುತ್ ಕೊರತೆ ಉಂಟಾಗಿದ್ದು ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅತಿ ಶೀಘ್ರವೇ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಕನ್ನಡಭವನದಲ್ಲಿ ಬುಧವಾರ ಮೆಸ್ಕಾಂ ಅಧಿಕಾರಿಗಳು ಹಾಗೂ ರೈತರೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆ ಬಳಿಕ ಅಕ್ರಮ-ಸಕ್ರಮ ಸಮಿತಿ ರಚಿಸಿ ರೈತರಿಗೆ ಕೂಡಲೇ ಹಕ್ಕುಪತ್ರ ವಿತರಿಸಲಾಗುವುದು ಎಂದರು.

ತಾಲೂಕು ರೈತ ಸಂಘದ ಅಧ್ಯಕ್ಷ ಕಾನುವಳ್ಳಿ ಚಂದ್ರಶೇಖರ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ನಿರಂತರವಾಗಿದ್ದು ಬಿರುಬಿಸಿಲಿನಿಂದ ತೋಟದ ಬೆಳೆಗಳು ನಾಶವಾಗುತ್ತಿವೆ. ದಿನಕ್ಕೆ ಏಳು ಗಂಟೆ ವಿದ್ಯುತ್ ನೀಡಿದರೂ ಪದೇ ಪದೆ ಕರೆಂಟ್ ತೆಗೆಯುವುದು ಯಾಕೆ ಎಂದು ಮೆಸ್ಕಾಂ ಎಇ ಮಂಜುನಾಥ್ ಅವರನ್ನು ಪ್ರಶ್ನಿಸಿದರು.

ಎಇ ಮಂಜುನಾಥ್ ಮಾತನಾಡಿ, ಹಗಲು 4 ಗಂಟೆ ಹಾಗೂ ರಾತ್ರಿ 3 ಗಂಟೆ ವಿದ್ಯುತ್ ಸಮರ್ಪಕವಾಗಿ ನೀಡುತ್ತಿದ್ದೇವೆ. ಬಾಳೆಹೊನ್ನೂರಿನಿಂದ ಶೃಂಗೇರಿ ಸಂಪರ್ಕ ಸಾಧಿಸುವ ಕಡೆ ಲೈನ್ ದುರಸ್ತಿ ಕಾರ್ಯ ನಡೆಯುತ್ತಿದೆ. ಶೇ. 90ರಷ್ಟು ಕೆಲಸ ಮುಗಿದಿದ್ದು ಮುಂಬರುವ ದಿನಗಳಲ್ಲಿ ವಿದ್ಯುತ್ ಸಮರ್ಪಕವಾಗಿ ನೀಡುತ್ತೇವೆ ಎಂದು ಭರವಸೆ ನೀಡಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ದಿನೇಶ್ ಹೆಗಡೆ ಮಾತನಾಡಿ, ಲೋ-ವೋಲ್ಟೇಜ್ ಪರಿಣಾಮ ತೋಟಗಳ ಮೋಟಾರು ಹಾಳಾಗಿದೆ ಎಂದು ಸಭೆಯ ಗಮನಕ್ಕೆ ತಂದು, ಇಲಾಖೆಯ ಸಿಬ್ಬಂದಿ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ದುರಸ್ತಿಯಲ್ಲೇ ಕಾಲ ಕಳೆಯುವ ಮೆಸ್ಕಾಂ: ಕೃಷಿಕ ವಿವೇಕ್ ಮಾತನಾಡಿ, ಮಳೆಗಾಲದಲ್ಲಿ ಮೆಸ್ಕಾಂಗೆ ದೂರವಾಣಿ ಮುಖಾಂತರ ಕರೆ ಮಾಡಿದರೆ, ಮರಕಡಿಯುತ್ತಿರುವುದರಿಂದ ವಿದ್ಯುತ್ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಬೇಸಿಗೆಯಲ್ಲಿ ಇವರನ್ನು ಕೇಳಿದರೆ ಲೈನ್ ದುರಸ್ತಿಯಲ್ಲಿದೆ ಎನ್ನುತ್ತಾರೆ. ಒಟ್ಟಿನಲ್ಲಿ ವಿದ್ಯುತ್ ಇಲ್ಲದೆ ಬೆಳೆಹಾನಿಗೀಡಾಗುತ್ತಿವೆ. ಇದರ ಕುರಿತು ಶಾಸಕರು ಹೆಚ್ಚಿನ ಗಮನ ನೀಡಬೇಕು ಎಂದು ಒತ್ತಾಯಿಸಿದರು. ಶಾಸಕ ರಾಜೇಗೌಡ ಮಾತನಾಡಿ, 110 ಕೆ.ವಿ ವಿದ್ಯುತ್ ಸ್ಥಾವರಕ್ಕೆ ಜಾಗದ ಕೊರತೆಯಿದೆ. ಧರೇಕೊಪ್ಪದ ಸಮೀಪ ಸ್ಥಳ ನೋಡಲಾಗಿದ್ದು ಕೂಡಲೇ ವಿದ್ಯುತ್ ಸಂಪರ್ಕದ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.