More

    ಕನ್ನಡಿಗರ ಸಹನೆ ಕೆಣಕದಿರಿ

    ವಿಜಯಪುರ: ಕನ್ನಡಿಗರು ಶಾಂತಿ ಪ್ರಿಯರು. ಆದರೆ, ಗಡಿಭಾಗದಲ್ಲಿ ವಿನಾಕಾರಣ ಒಂದಿಲ್ಲೊಂದು ವಿಚಾರ ಕೆದಕಿ ಕನ್ನಡಿಗರ ಮೇಲೆ ಆಕ್ರಮಣ ಮಾಡುತ್ತಿರುವುದು ಖೇದಕರ ಎಂದು ಕರವೇ ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ ಹೇಳಿದರು.
    ಕರ್ನಾಟಕದ ನಾಡಧ್ವಜ ಸುಟ್ಟು ಸೌಹಾರ್ದತೆ ಕದಡಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಿಸುವ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿ ನಗರದ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
    ಮಹಾ ಸರ್ಕಾರ ಸದಾ ನಮ್ಮ ಸಹನೆ ಕೆಣಕುತ್ತಿದೆ. ಅದರ ಭಾಗವಾಗಿ ಮೊನ್ನೆ ಕನ್ನಡದ ಬಾವುಟ ಸುಟ್ಟು, ಕನ್ನಡಿಗರ ಪ್ರತಿನಿಧಿಯಾದ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕೃತಿ ದಹಿಸಿದ್ದಲ್ಲದೆ ಗಡಿಭಾಗಗಳಲ್ಲಿ ಕನ್ನಡ ಚಲನಚಿತ್ರ ಪ್ರದರ್ಶನ ಕೂಡ ನಿಲ್ಲಿಸಿ, ನಾಮಲಕಗಳಿಗೆ ಮಸಿ ಬಳಿದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಸದಾಕಾಲ ಉದ್ವಿಗ್ನ ಪರಿಸ್ಥಿತಿ ಉಂಟುಮಾಡುತ್ತ, ಒಕ್ಕೂಟ ವ್ಯವಸ್ಥೆ ಉದ್ದೇಶಗಳನ್ನು ಬುಡಮೇಲು ಮಾಡಿ ಜಾತಿ ವ್ಯವಸ್ಥೆ ಕದಡುತ್ತಿರುವ ಮಹಾ ಸರ್ಕಾರದ ವಿರುದ್ಧ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಜಿಲ್ಲಾಧ್ಯಕ್ಷ ಬಸವರಾಜ ತಾಳಿಕೋಟೆ ಮಾತನಾಡಿ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಗಡಿನಾಡ ಕನ್ನಡಿಗರ ರಕ್ಷಣೆಗೆ ಮುಂದಾಗಬೇಕು ಹಾಗೂ ಕರ್ನಾಟಕ ಕಾಂಗ್ರೆಸ್ ಪಕ್ಷ ಕೇಂದ್ರದ ಹೈಕಮಾಂಡ್ ಮೇಲೆ ಒತ್ತಡ ಹೇರಿ ಶಿವಸೇನೆಗೆ ನೀಡಿರುವ ಬೆಂಬಲ ಹಿಂಪಡೆಯುವ ಮೂಲಕ ಎಂಇಎಸ್ ಸಂಘಟನೆಯನ್ನು ನಿಷೇಧಿಸಿ ಕನ್ನಡಿಗರಿಗೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿದರು.
    ಜಿಲ್ಲಾ ಉಪಾಧ್ಯಕ್ಷ ರೇವಣಸಿದ್ದಗೌಡ ಗೋಡಕೆ, ಆನಂದ ಹಡಗಲಿ, ಅಶೋಕ ಬೂಸನೂರ, ಸುನೀಲ ಮಾಗಿ, ನಿತ್ಯಾನಂದ ಕಟ್ಟಿಮನಿ, ಮಡು ದೊಡಮನಿ, ಮಹಾಂತೇಶ ಚಕ್ರವರ್ತಿ, ಬಸು ಹಿರೇಮಠ, ಮಂಜುನಾಥ ಗಣಿ, ಸೋಮನಾಥ ಗಣಿ, ಶಿವರಾಜ ಆಸಂಗಿಹಾಳ, ರಾಜು ಬಿರಾದಾರ, ಗಣೇಶ ಕರದಾಳ, ಹಣಮಂತ ಪೂಜಾರಿ, ಶಿವು ಮಾವಿನಗಿಡದ, ಶರಣು ಗುರಕಾರ, ಶಂಕರ ವಡ್ಡರ, ದಾವಲ್ ಮದರಖಾಮ್ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts