‘ಮೇರಿ ಮೇಡಂ ಮಹಾನ್​’ ಎಂದು ಸುಷ್ಮಾ ಸ್ವರಾಜ್​ ಅವರನ್ನು ತಬ್ಬಿಕೊಂಡು ಕಣ್ಣೀರು ಹಾಕಿದ ಹಮೀದ್​ ತಾಯಿ

ನವದೆಹಲಿ: ಪಾಕಿಸ್ತಾನದ ಜೈಲಿನಲ್ಲಿ ಬಂಧಿತನಾಗಿ ಆರು ವರ್ಷಗಳ ನಂತರ ಬಿಡುಗಡೆಗೊಂಡು ಭಾರತಕ್ಕೆ ಆಗಮಿಸಿದ ಹಮೀದ್​ ಅನ್ಸಾರಿ ಹಾಗೂ ಅವರ ತಾಯಿ ಇಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್​ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು.

ಈ ವೇಳೆ ಭಾವುಕರಾಗಿದ್ದ ಹಮೀದ್​ ಅನ್ಸಾರಿ ತಾಯಿ ಫೌಜಿಯಾ, ಸುಷ್ಮಾ ಸ್ವರಾಜ್​ ಅವರನ್ನು ತಬ್ಬಿಕೊಂಡು, ನನ್ನ ಭಾರತ ಅದ್ಭುತ ದೇಶ ಎಂದು ಹೇಳಿದ್ದಲ್ಲದೆ, ಸುಷ್ಮಾ ಅವರನ್ನು ಉಲ್ಲೇಖಿಸಿ, ನಮ್ಮ ಮೇಡಂ ಮಹಾನ್​ ವ್ಯಕ್ತಿ, ಅವರು ಮನಸು ಮಾಡಿದರೆ ಏನನ್ನು ಬೇಕಾದರೂ ಮಾಡುತ್ತಾರೆ ಎಂದು ಸಂತೋಷದಿಂದ ಕಣ್ಣೀರು ಹಾಕಿರುವ ವಿಡಿಯೋ ವೈರಲ್​ ಆಗಿದೆ.

ಹಮೀದ್​ ಅನ್ಸಾರಿಯವರನ್ನು ಬಂಧಿಸಿದ ಬಳಿಕ ಪೇಶಾವರದ ಕೇಂದ್ರ ಕಾರಾಗೃಹದಲ್ಲಿ ಅವರನ್ನು ಆರು ವರ್ಷ ಇರಿಸಲಾಗಿತ್ತು. ಈ ದಿನಗಳಲ್ಲಿ ಅನ್ಸಾರಿ ಅನುಭವಿಸಿದ ಕಷ್ಟಗಳು, ಅವರಿಲ್ಲ ತಮಗೆ ಆದ ನೋವುಗಳನ್ನು ಸುಷ್ಮಾ ಸ್ವರಾಜ್​ ಅವರ ಬಳಿ ಫೌಜಿಯಾ ಹೇಳಿಕೊಂಡರು.

ಪ್ರಕರಣದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್​ ಅಪಾರ ಬೆಂಬಲ ನೀಡಿದ್ದರು. ಪಾಕಿಸ್ತಾನ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದರು. ಅವರಿಗೆ ನಾನು ಸದಾ ಋಣಿಯಾಗಿರುತ್ತೇನೆ ಎಂದು ಹಮೀದ್​ ತಿಳಿಸಿದ್ದಾರೆ.

ಹಮೀದ್​ ಅನ್ಸಾರಿ ಅವರು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಮಹಿಳೆಯನ್ನು ಭೇಟಿಯಾಗುವ ಸಲುವಾಗಿ 2012ರ ನವೆಂಬರ್​ 12ರಂದು ಪಾಕಿಸ್ತಾನಕ್ಕೆ ತೆರಳಿದ್ದರು. ಗಡಿಯಲ್ಲೇ ಅವರನ್ನು ಬಂಧಿಸಲಾಗಿತ್ತು. ಪಾಕಿಸ್ತಾನದ ನಕಲಿ ಗುರುತಿನ ಚೀಟಿ ಹೊಂದಿದ್ದರು ಎಂಬ ಆರೋಪದ ಮೇಲೆ 2015ರಲ್ಲಿ ಮತ್ತೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಡಿ.15ರಂದು ಅವರ ಶಿಕ್ಷೆ ಅವಧಿ ಪೂರ್ಣವಾಗಿ, ಒಂದು ತಿಂಗಳೊಳಗೆ ಅನ್ಸಾರಿ ಅವರ ವಾಪಸಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಕೋರ್ಟ್​ ಒಂದು ತಿಂಗಳ ಕಾಲಾವಕಾಶ ನೀಡಿತ್ತು. (ಏಜೆನ್ಸೀಸ್​)