ಬ್ಯಾಂಕ್ ವಿಲೀನ ಯುಪಿಎ ತೀರ್ಮಾನ: ನಳಿನ್

ವಿಜಯವಾಣಿ ಸುದ್ದಿಜಾಲ ಮಂಗಳೂರು
ವಿಜಯ ಬ್ಯಾಂಕ್-ಬ್ಯಾಂಕ್ ಆಫ್ ಬರೋಡಾ ವಿಲೀನಕ್ಕೆ ಶಿಫಾರಸು ಮಾಡಿದ್ದು ಕಾಂಗ್ರೆಸ್ ಮುಖಂಡ ಡಾ.ಎಂ.ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿ. ವಿಲೀನ ತೀರ್ಮಾನವನ್ನೂ ಯುಪಿಎ ಸರ್ಕಾರವೇ ತೆಗೆದುಕೊಂಡಿತ್ತು. ಅದನ್ನು ಈಗ ಅನುಷ್ಠಾನಕ್ಕೆ ತರಲಾಗುತ್ತಿದೆ.
– ಹೀಗೆಂದವರು ಸಂಸದ ನಳಿನ್ ಕುಮಾರ್ ಕಟೀಲ್.

ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟು ಹೋರಾಡುವ ಬದಲು ವಿಜಯಾ ಬ್ಯಾಂಕ್ ಹೆಸರುಳಿಸಲು ಎಲ್ಲರೂ ನಮ್ಮೊಂದಿಗೆ ಕೈ ಜೋಡಿಸಿ. ಆರ್ಥಿಕ ವಿಚಾರದಲ್ಲಿ ತಜ್ಞರಾದ ವೀರಪ್ಪ ಮೊಯ್ಲಿ, ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಬ್ಯಾಂಕ್ ಹೆಸರು ಉಳಿಸುವುದಕ್ಕೆ ಒತ್ತಡ ತರೋಣ. ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಲೀನಕ್ಕೆ ಸಂಸತ್ತಿನಲ್ಲಿ ಒಪ್ಪಿಗೆ ಸಿಕ್ಕಿದೆ. ಅದಕ್ಕೆ ಕಾಂಗ್ರೆಸ್ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಇದನ್ನು ಬದಲಾಯಿಸುವಂತಿಲ್ಲ. ಆದರೆ ವಿಜಯ ಬ್ಯಾಂಕ್ ಹೆಸರನ್ನು ಉಳಿಸುವ ಬಗ್ಗೆ ವಿತ್ತ ಸಚಿವ ಜೇಟ್ಲಿ ಅವರಲ್ಲಿ ಮಾತನಾಡಿದ್ದೇನೆ. ಅವರು ತನ್ನಿಂದಾದ ಪ್ರಯತ್ನ ಮಾಡುವ ಭರವಸೆ ನೀಡಿದ್ದಾರೆ ಎಂದರು.

ಐವನ್ ಗೆದ್ದು ಮಾತನಾಡಲಿ: ಸಂಸತ್ತಿನಲ್ಲಿ ತಾವು ಮಾತನಾಡದೆ ನಾಟಕ ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಇತ್ತೀಚೆಗೆ ಆರೋಪ ಮಾಡಿದ್ದಾರೆ. ಐವನ್ ಹೇಗೆ ಯಾರ ಕೈಕಾಲು ಹಿಡಿದು ಹುದ್ದೆ ಪಡೆದಿದ್ದಾರೆ ಎನ್ನುವುದು ನನಗೆ ಗೊತ್ತು. ನಾನು ಜನರ ನಡುವೆ ಇದ್ದು ಗೆದ್ದು ಬಂದವನು. ಸಾಧ್ಯವಿದ್ದರೆ ಬಿಜೆಪಿ ವಿರುದ್ಧ ಗೆದ್ದು, ನಂತರ ಮಾತನಾಡಲಿ ಎಂದು ತಿರುಗೇಟು ನೀಡಿದ ನಳಿನ್, ಕಾಂಗ್ರೆಸ್‌ನಲ್ಲಿ ಚುನಾವಣೆ ಸೋತು ಜಡ ಹಿಡಿದಿದ್ದ ಕೆಲವರು ಈಗ ಸಮಾವೇಶ, ಪಾದಯಾತ್ರೆ ಮಾಡುತ್ತಿದ್ದಾರೆ, ಮಾಡಲಿ. ಸೋತ ದುಃಖ ಪರಿಹಾರಕ್ಕೆ ಇರಬಹುದು ಎಂದು ಲೇವಡಿ ಮಾಡಿದರು.

ಫೆಬ್ರವರಿಯಲ್ಲಿ ಮೇಲ್ಸೇತುವೆ ಉದ್ಘಾಟನೆ: ಫೆಬ್ರವರಿ ಅಂತ್ಯಕ್ಕೆ ಪಂಪ್‌ವೆಲ್, ತೊಕ್ಕೊಟ್ಟು ಮೇಲ್ಸೇತುವೆ ಕೆಲಸ ಮುಗಿಸಿ ಉದ್ಘಾಟನೆ ಮಾಡುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಮೂಲ್ಕಿ-ಕಟೀಲು-ಬಜ್ಪೆ-ಕೈಕಂಬ-ಪೊಳಲಿ-ಬಿ.ಸಿ.ರೋಡ್-ಮೆಲ್ಕಾರ್-ದೇರಳಕಟ್ಟೆ-ಕೆ.ಸಿ.ರೋಡ್ ರಿಂಗ್ ರೋಡ್ ಮತ್ತು ಕುಲಶೇಖರ-ಕಾರ್ಕಳ ಚತುಷ್ಪಥ ರಸ್ತೆ ಹಾಗೂ ಕುಳಾಯಿ ಮೀನುಗಾರಿಕಾ ಬಂದರಿಗೆ ಅವರು ಶಿಲಾನ್ಯಾಸ ಮಾಡಲಿದ್ದಾರೆ ಎಂದು ನಳಿನ್ ತಿಳಿಸಿದರು.

15 ದಿನದಲ್ಲಿ ಎಲ್‌ಆ್ಯಂಡ್‌ಟಿ ಕೆಲಸ ಪುನರಾರಂಭ: ಕಾನೂನು ತೊಡಕಿನಿಂದಾಗಿ ಬಿ.ಸಿ.ರೋಡ್ ಅಡ್ಡಹೊಳೆ ಕಾಂಕ್ರೀಟ್ ಚತುಷ್ಪಥ ರಸ್ತೆ ಕೆಲಸ ಎರಡು ತಿಂಗಳು ನಡೆದಿರಲಿಲ್ಲ. ಈ ಬಗ್ಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಸಚಿವ ಗಡ್ಕರಿ ಕೆಲಸ ಮುಂದುವರಿಸುವಂತೆ ಸೂಚಿಸಿರುವುದಕ್ಕೆ ಎಲ್‌ಆ್ಯಂಡ್‌ಟಿ ಕಂಪನಿ ಒಪ್ಪಿಗೆ ಸೂಚಿಸಿದೆ. ಇನ್ನು 15 ದಿನದಲ್ಲಿ ಕೆಲಸ ಪ್ರಾರಂಭಗೊಳ್ಳಲಿದೆ ಎಂದು ನಳಿನ್ ತಿಳಿಸಿದರು. 21 ಕಿ.ಮೀ ಅರಣ್ಯ ಪ್ರದೇಶದ ಬಗ್ಗೆ ಅಂತಿಮವಾಗಿ ಸರ್ಕಾರ ಅನುಮೋದನೆ ನೀಡಲಿದೆ. ಅಲ್ಲಿವರೆಗೆ ಹೆಚ್ಚುವರಿ 41 ಹೆಕ್ಟೇರ್ ಭೂಸ್ವಾಧೀನ, ಹಾಲಿ ರಸ್ತೆಯ ನಿರ್ವಹಣೆ, ರಿಪೇರಿ ಸಹಿತ ಕೆಲಸಗಳನ್ನು ಗುತ್ತಿಗೆದಾರರು ಕೈಗೊಳ್ಳಲಿದ್ದಾರೆ ಎಂದರು.

ಉದ್ಯೋಗ ಮೇಳ/ಸಮಾವೇಶ: ಜಿಲ್ಲೆಯ ನಿರುದ್ಯೋಗಿ ಯುವಕರಿಗೆ, ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸುವುದಕ್ಕಾಗಿ ಕೇಂದ್ರ ಸರ್ಕಾರದ ಕೌಶಲಾಭಿವೃದ್ಧಿ ಸಚಿವಾಲಯದಿಂದ ಉದ್ಯೋಗ ಮೇಳ ಜ.21ರಂದು ನಗರದ ಕೆನರಾ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಕೌಶಲಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗ್ಡೆ ಉದ್ಘಾಟಿಸಲಿದ್ದಾರೆ. ಉಜ್ವಲ ಯೋಜನೆ 2ನೇ ಹಂತದ ಫಲಾನುಭವಿಗಳ ಸಮಾವೇಶ ಬಿ.ಸಿ.ರೋಡ್‌ನ ಮೈದಾನದಲ್ಲಿ ಜ.25ರಂದು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಸಂಸದರಾದ ಪ್ರಹ್ಲಾದ್ ಜೋಶಿ, ಸಚಿವ ರಮೇಶ್ ಜಿಗಜಣಗಿ ಭಾಗವಹಿಸಲಿದ್ದಾರೆ ಎಂದು ನಳಿನ್ ತಿಳಿಸಿದರು.