ವ್ಯಾಪಾರಸ್ಥರಿಂದ ದಿಢೀರ್ ಪ್ರತಿಭಟನೆ

ಅಕ್ಕಿಆಲೂರ: ಅಪಘಾತದಿಂದ ಸತ್ತ ಆಕಳನ್ನು ವಿಲೇವಾರಿ ಮಾಡದ ಕಾರಣ ಆಕ್ರೋಶಗೊಂಡ ಪಟ್ಟಣದ ಕಲ್ಲಾಪುರ ವೃತ್ತದ ವ್ಯಾಪಾರಿಗಳು ಮಂಗಳವಾರ ದಿಢೀರ್ ಶಿರಸಿ- ಹಾವೇರಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕಲ್ಲಾಪುರ ವೃತ್ತದ ಬಳಿ ಸೋಮವಾರ ದುದ್ದುಸಾಬ್ ಎಂಬುವರಿಗೆ ಸೇರಿದ್ದ ಆಕಳಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿತ್ತು. ಖಾಸಗಿ ಬಸ್ ಮಾಲೀಕನಿಂದ ಹಣ ಪಡೆದ ಮಾಲೀಕ ಸತ್ತ ಆಕಳನ್ನು ರಸ್ತೆ ಮೇಲೆಯೇ ಬಿಟ್ಟುಹೋಗಿದ್ದಾನೆ. ಇತ್ತ ಸ್ಥಳೀಯ ಗ್ರಾ.ಪಂ. ಸಹ ವಿಲೇವಾರಿ ಮಾಡಲು ಮಿನಾಮೇಷ ಎಣಿಸುತ್ತಿದೆ. ಇದರಿಂದ ಸುತ್ತಲಿನ ಪ್ರದೇಶಕ್ಕೆಲ್ಲ ಗಬ್ಬು ವಾಸನೆ ಹೊರಹೊಮ್ಮುತ್ತಿದ್ದು, ವಾಹನ ಸವಾರರಿಗೆ ಮತ್ತು ಸ್ಥಳೀಯ ವ್ಯಾಪಾರಿಗಳಿಗೆ ಕಿರಿಕಿರಿ ಊಂಟಾಗುತ್ತಿದೆ.

ಇದರಿಂದ ಕೆರಳಿದ ವ್ಯಾಪಾರಸ್ಥರು ಆಕಳನ್ನು ಬೇರೆಡೆ ಸಾಗಿಸುವವರೆಗೂ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಇದರಿಂದ ಹೆದ್ದಾರಿಯಲ್ಲಿ ವಾಹನಗಳು ಹೊಸ್ ಬಸ್ ನಿಲ್ದಾಣದವರೆಗೂ ಜಮಾವಣೆಯಾಗಿ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಮಂಗಳವಾರ ವಾರದ ಸಂತೆಯಾಗಿದ್ದರಿಂದ ಮತ್ತಷ್ಟು ಪರಿಸ್ಥಿತಿ ಹದಗೆಟ್ಟಿತ್ತು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಗ್ರಾ.ಪಂ. ಕಸ ವಿಲೇವಾರಿ ಸಿಬ್ಬಂದಿ ಸತ್ತ ಆಕಳನ್ನು ಸ್ಥಳಾಂತರಿಸಿದ ನಂತರ ವ್ಯಾಪಾರಸ್ಥರು ಪ್ರತಿಭಟನೆ ಹಿಂಪಡೆದರು.