ಮೇರಾ ಬೂತ್ ಸಬ್‌ಸೇ ಮಜ್‌ಬೂತ್

ಮಂಗಳೂರು: ವೇದಿಕೆ ಮೇಲಿದ್ದ ಹಿರಿ ಪರದೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಕಾಣಿಸುತ್ತಿದ್ದಂತೆ ನಗರದ ಕೆನರಾ ಪ್ರೌಢಶಾಲೆ ಸಭಾಂಗಣದಲ್ಲಿ ಗುರುವಾರ ಸೇರಿದ್ದ ಯುವಜನರು ‘ಮೋದಿ.. ಮೋದಿ..’ ಎಂದು ಹರ್ಷೋದ್ಗಾರ ಮಾಡಿದರು.

ಬಿಜೆಪಿ ಕಾರ‌್ಯಕರ್ತರು ಮತ್ತು ಅಭಿಮಾನಿಗಳ ಜತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಪ್ರಧಾನಿ ಮೋದಿ ಸಂವಾದ ‘ಮೇರಾ ಬೂತ್ ಸಬ್‌ಸೇ ಮಜ್‌ಬೂತ್’ ದೇಶಾದ್ಯಂತ 15 ಸಾವಿರ ಕಡೆ ಏಕಕಾಲದಲ್ಲಿ ಆಯೋಜಿಸಿದ ಕಾರ‌್ಯಕ್ರಮಗಳಲ್ಲಿ ಮಂಗಳೂರು ಕೇಂದ್ರವೂ ಒಂದು.

ಪಕ್ಷದ ಕಾರ‌್ಯಕರ್ತರು, ಅಭಿಮಾನಿಗಳು, ದೊಡ್ಡ ಸಂಖ್ಯೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಂವಾದ ಕಾರ‌್ಯಕ್ರಮಕ್ಕೆ ಸಾಕ್ಷಿಯಾದರು. ದಕ್ಷಿಣ ಕನ್ನಡದ ಎಂಟು ವಿಧಾನಸಭಾ ಕ್ಷೇತ್ರಗಳ 11 ಕಡೆ ಮೋದಿ ನೇರ ಸಂವಾದ ವೀಕ್ಷಣೆಯಲ್ಲಿ ಭಾಗವಹಿಸುವ ವ್ಯವಸ್ಥೆ ಮಾಡಲಾಗಿತ್ತು.

ನಗರದಲ್ಲಿ ಕಾರ‌್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ ಮಾಜಿ ಸದಸ್ಯ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ್, ಪ್ರಧಾನಿ ನೇರವಾಗಿ ಕೋಟ್ಯಂತರ ಜನರನ್ನು ಏಕಕಾಲದಲ್ಲಿ ತಲುಪುವ ಇದೊಂದು ಐತಿಹಾಸಿಕ ಕಾರ‌್ಯಕ್ರಮವೆಂದು ಬಣ್ಣಿಸಿದರು.

ಜಲ ಮೂಲ, ಫಲವತ್ತಾದ ನೆಲ, ಯೋಗ್ಯ ಸಂಪನ್ಮೂಲ ಎಲ್ಲವೂ ಇದ್ದು, ಇಲ್ಲಿವರೆಗೆ ದೇಶದ ನಾಯಕತ್ವ ವಹಿಸಲು ಓರ್ವ ಯೋಗ್ಯ ವ್ಯಕ್ತಿ ಇರಲಿಲ್ಲ. ನರೇಂದ್ರ ಮೋದಿಯವರ ಮೂಲಕ ಈಗ ಅದೂ ಸಿಕ್ಕಿದೆ. ಸಂವಿಧಾನ, ಕಾನೂನು ಬದಲಿಸದೆಯೇ ದೇಶದಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸುತ್ತಿವೆ. ಜಾಗತಿಕ ಮಟ್ಟದಲ್ಲಿ ದೇಶದ ಗೌರವ ಹೆಚ್ಚಿದೆ. ಮೋದಿ ಕರ್ತೃತ್ವ ಶಕ್ತಿಗೆ ಸಾಟಿ ಇಲ್ಲ ಎಂದವರು ಹೇಳಿದರು.

ಬಿಜೆಪಿ ಮಂಡಲ ಉಪಾಧ್ಯಕ್ಷ ರವೀಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಕಾರ‌್ಯದರ್ಶಿಗಳಾದ ರಮೇಶ್ ಕಂಡೆಟ್ಟು ಸ್ವಾಗತಿಸಿದರು. ನಮಿತಾ ಶ್ಯಾಂ ಪ್ರಸ್ತಾವನೆಗೈದರು. ಪ್ರಭಾ ಮಾಲಿನಿ, ಮುಖಂಡರಾದ ಭಾಸ್ಕರಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಸಬ್‌ಸೇ ಮಜ್‌ಬೂತ್: ಮೇರಾ ಬೂತ್ ಸಬ್‌ಸೇ ಮಜ್‌ಬೂತ್ ಕಾರ‌್ಯಕ್ರಮ ‘ನನ್ನ ಬೂತ್ (ಮತದಾನದ) ಇತರ ಎಲ್ಲ ಬೂತ್‌ಗಳಿಗಿಂತ ಗಟ್ಟಿಯಾದ ಬೂತ್’ ಎನ್ನುವ ಸಂಕಲ್ಪದ ಆಶಯವನ್ನು ಹೊಂದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರತೀ ಮತಗಟ್ಟೆಯಲ್ಲಿ ಶೇ.50ಕ್ಕಿಂತ ಹೆಚ್ಚಿನ ಜನರು ಮೋದಿ ಪರವಾಗಿ ಮತ ಚಲಾಯಿಸುವಂತೆ ಮಾಡಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ್ ಹೇಳಿದರು. ಭಾರತ ವಿಶ್ವ ಗುರುವಾಗಿ ಮುನ್ನಡೆಯಲು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಕ್ಷ ಹಾಗೂ ಸರ್ಕಾರ ಅತ್ಯುತ್ತಮ ಕೆಲಸ ನಿರ್ವಹಿಸಿದರೂ ಅಂತಿಮವಾಗಿ ನಡೆಯುವ ಹೋರಾಟ ಮತಗಟ್ಟೆಯಲ್ಲಿ. ಬೂತ್ ಮಟ್ಟದಲ್ಲಿ ನಡೆಯಬೇಕಾದ ಕೆಲಸದ ಬಗ್ಗೆ ನಿರ್ಲಕ್ಷಿಸುವಂತೆಯೇ ಇಲ್ಲ ಎಂದರು.

ಉಡುಪಿಯಲ್ಲೂ ವೀಕ್ಷಣೆ: ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕರ್ತರೊಂದಿಗೆ ನಡೆಸಿದ ‘ಮೇರಾ ಬೂತ್ ಸಬ್‌ಸೇ ಮಜ್‌ಬೂತ್’ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಆದರೆ ಜಿಲ್ಲೆಯ ಯಾವುದೇ ಕಾರ್ಯಕರ್ತರಿಗೆ ಸಂಪರ್ಕ ಸಾಧ್ಯವಾಗಲಿಲ್ಲ. ಕಾರ್ಕಳದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಸಂವಾದವನ್ನು ಬೃಹತ್ ಪರದೆಯಲ್ಲಿ ಕಾರ್ಯಕರ್ತರೊಂದಿಗೆ ವೀಕ್ಷಿಸಿದರು. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ, ಗ್ರಾಮೀಣ ಭಾಗದಲ್ಲಿಯೂ ಸಂವಾದ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.