ಸಿಂಧನೂರು: ಯುವಕರು ದೈಹಿಕ ಆರೋಗ್ಯ ಕಾಪಾಡುವಲ್ಲಿ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮಾಜಿ ಸಚಿವ ಹಾಗೂ ಕೆಒಎಫ್ ಅಧ್ಯಕ್ಷ ವೆಂಕಟರಾವ ನಾಡಗೌಡ ಹೇಳಿದರು.
ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಭಾನುವಾರ ದಸರಾ ಉತ್ಸವ ಅಂಗವಾಗಿ ಆಯೋಜಿಸಿದ್ದ ವಿಭಾಗ ಮಟ್ಟದ ಪುರುಷ ಹಾಗೂ ಮಹಿಳೆಯರ ಕಬಡ್ಡಿ ಮತ್ತು ಥ್ರೋ ಬಾಲ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಜೀವನದಲ್ಲಿ ಅಪ್ರತಿಮ ಸಾಧನೆ ಮಾಡುವವರು ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ಅವರಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಲಿದೆ ಎಂದರು.
ಶಾಸಕ ಹಂಪನಗೌಡ ಬಾದರ್ಲಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಇಂದಿನ ಜೀವನ ಶೈಲಿಗೆ ಕ್ರೀಡೆಗಳು ಅಗತ್ಯವಾಗಿದ್ದು ದೈಹಿಕ ಮತ್ತು ಮಾನಸಿಕ ಸಾಮಾರ್ಥ್ಯ ಹೆಚ್ಚಿಸಿಕೊಳ್ಳುವಲ್ಲಿ ಕ್ರೀಡೆಗಳು ಸಹಕಾರಿಯಾಗಿವೆ ಎಂದರು.
ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರಾಜೇಂದ್ರಕುಮಾರ ಜೈನ್, ಮಲ್ಲಿಕಾರ್ಜುನ ಹಟ್ಟಿ, ಅಮರೇಶ ಮಾಡಸಿರವಾರ, ಪಾಟೀಲ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಆರ್.ಸಿ.ಪಾಟೀಲ್ ಇತರರು ಇದ್ದರು.