ನಂಜನಗೂಡು: ಜನಪದ ಕಲೆಗಳಿಂದ ಮನುಷ್ಯನಿಗೆ ಮಾನಸಿಕ ನೆಮ್ಮದಿ ಜತೆಗೆ ಉತ್ತಮ ಆರೋಗ್ಯ ಸಿಗಲಿದೆ. ಈ ಹಿನ್ನೆಲೆಯಲ್ಲಿ ಜನಪದ ಕಲೆಗಳು ಉಳಿವಿಗೆ ಶ್ರಮಿಸಬೇಕು ಎಂದು ಜನಪದ ಕಲಾವಿದ ಮೈಸೂರು ಡಾ. ಜಿ.ಗುರುರಾಜು ಹೇಳಿದರು.
ತಾಲೂಕಿನ ಬದನವಾಳು ಗ್ರಾಮದ ಮಹಾತ್ಮ ಗಾಂಧೀಜಿ ಪ್ರತಿಮೆ ಮುಂಭಾ ಸೋಮವಾರ ಶ್ರೀ ಬಿಳಿಗಿರಿರಂಗಸ್ವಾಮಿ ಸಾಂಸ್ಕೃತಿಕ ಕಲಾ ಟ್ರಸ್ಟ್ ಬದನವಾಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು. ಇವರ ಸಹಯೋಗದಲ್ಲಿ ಎರಡನೇ ವರ್ಷದ ರಾಜ್ಯಮಟ್ಟದ ಜನಪದ ಉತ್ಸವ- 2025 ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಚಾಮರಾಜನಗರ ಮತ್ತು ಮೈಸೂರು ಭಾಗದಲ್ಲಿ ಜನಪದ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವುದು ಶ್ಲಾಘನೀಯ. ಅದರಲ್ಲೂ ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ನೆಲೆಸಿರುವ ಈ ಭಾಗದಲ್ಲಿ ನಿರಂತರವಾಗಿ ಜನಪದ ಕಲೆಗಳ ಪ್ರದರ್ಶನ ನಡೆಯುವುದರಿಂದ ಭಾಷಾ ಪರಂಪರೆ ಹಾಗೂ ಕಲೆಗಳನ್ನು ಉಳಿಸಿದಂತಾಗುತ್ತದೆ ಎಂದರು.
ಕಲೆಗಳಿಗೆ ಜೀವ ತುಂಬುವ ಕಾರ್ಯವು ಕಲಾವಿದರಲ್ಲಿ ಸಾರ್ಥಕ ಬದುಕನ್ನು ರೂಪಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಪದ ಕಲಾವಿದರಿಗೆ ಸರ್ಕಾರದಿಂದ ಸೌಲಭ್ಯಗಳನ್ನು ನೀಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಭಾಗದ ಕಲಾವಿದರಿಗೆ ವೇದಿಕೆಗಳನ್ನು ಕಲ್ಪಿಸಿಕೊಡಬೇಕು. ಗ್ರಾಮೀಣ ಭಾಗದಲ್ಲಿರುವ ಯುವ ಪೀಳಿಗೆಗೆ ಜನಪದದ ಮಹತ್ವವನ್ನು ತಿಳಿಸುವ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ರೂಪಿಸಿದಾಗ ಜನಪದವನ್ನು ಉಳಿಸಲು ಸಾಧ್ಯವಾಗಲಿದೆ ಎಂದರು.
ವೇದಿಕೆ ಮುಂಬಾಗ ರಾಗಿ ಕಲ್ಲು, ಒನಕೆ, ಭತ್ತ ಕುಟ್ಟುವ ಕುದ್ನಿ, ಸೇರು ಇಟ್ಟು ಪೂಜೆಯನ್ನು ಸಲ್ಲಿಸಲಾಯಿತು. ಹಾಸ್ಯ ಕಲಾವಿದ ಜಾಲಹಳ್ಳಿ ಪ್ರಸಾದ್ ಜಾಕಿ, ಹರಿಕಥೆ ವಿದ್ವಾನ್ ಬಸವರಾಜ ಶಾಸ್ತ್ರಿ, ಘಟಂ ವಾದಕ ಗುರು ಸಿದ್ದಯ್ಯ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಡೊಳ್ಳು ಕುಣಿತ, ಗೊರವರ ಕುಣಿತ, ಬೀಸು ಕಂಸಾಳೆ, ಪೂಜಾ ಕುಣಿತ, ಹುಲಿ ವೇಷ, ಚಿಲಿಪಿಲಿ ಗೊಂಬೆ, ತಮಟೆ ವಾದನ, ಪಟಕುಣಿತ, ವೀರಗಾಸೆ, ವೀರ ಮಕ್ಕಳ ಕುಣಿತ, ಸೋಬಾನೆ ಪದ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿ ಮೆರವಣಿಗೆಯನ್ನು ಕಳೆಗಟ್ಟುವಂತೆ ಮಾಡಿದವು.
ಈ ಸಂದರ್ಭದಲ್ಲಿ ಶ್ರೀ ಬಿಳಿಗಿರಿರಂಗಸ್ವಾಮಿ ಸಾಂಸ್ಕೃತಿಕ ಕಲೆ ಟ್ರಸ್ಟ್ ಅಧ್ಯಕ್ಷ ನಾಗೇಶ್ ಮೂರ್ತಿ, ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ, ಜನಪದ ಕಲಾವಿದ ಡಾ. ಮಳವಳ್ಳಿ ಎಂ.ಮಹದೇವಸ್ವಾಮಿ, ತಾಪಂ ಮಾಜಿ ಸದಸ್ಯ ಬಿ.ಎಸ್ ರಾಮು, ಬದನವಾಳು ಗ್ರಾಪಂ ಅಧ್ಯಕ್ಷ ದೊರೆಸ್ವಾಮಿ, ಸದಸ್ಯರಾದ ಎಂ.ಮಹದೇವು, ಅವಿನಾಶ್, ಸರೋಜ, ಗ್ರಾಮದ ಮುಖಂಡರಾದ ಸೋಮು, ಸುರೇಶ್, ರಂಗಸ್ವಾಮಿ, ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಗುರುಸ್ವಾಮಿ ಕಲಾವಿದರಾದ ಶ್ರೀನಿವಾಸ್ ಮೂರ್ತಿ, ಶಿವಣ್ಣ, ರಾಜೇಂದ್ರ ಪ್ರಸಾದ್, ಶ್ರೀನಿವಾಸ್, ಪದ್ಮಾ, ಕೊಳತ್ತೂರು ಮಹದೇವಸ್ವಾಮಿ, ಕೂಗಲೂರು ಶಿವರಾಜ್, ಪುಟ್ಟರಾಜು ಇತರರಿದ್ದರು.